ಮಂಗಳವಾರ, ಆಗಸ್ಟ್ 16, 2022
30 °C
ಖಾಸಗಿ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿ ವತಿಯಿಂದ ಪ್ರತಿಭಟನೆ

ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ: ಆರ್. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಖಾಸಗಿ ಶಿಕ್ಷಕರು ಮತ್ತು ಶಾಲಾಡಳಿತ ಮಂಡಳಿಗಳ ಬೇಡಿಕೆಗಳ ಪೈಕಿ, ಯಾವುದನ್ನು ಈಡೇರಿಸಬಹುದು ಎಂಬ ಬಗ್ಗೆ ಪರಿಶೀಲಿಸಿ, ತೀರ್ಮಾನಕ್ಕೆ ಬರಲಾಗುವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ ಭರವಸೆ ನೀಡಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 'ಶಿಕ್ಷಕರು ಉಳಿದರೆ ಶಿಕ್ಷಣ' ಎಂಬ ಘೋಷಣೆಯೊಂದಿಗೆ ಖಾಸಗಿ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ನಡೆದ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸೂಚನೆಯಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ತೆರಳಿ ಅವರು ಮಾತುಕತೆ ನಡೆಸಿದರು.

‘ನಿಮ್ಮ ಬೇಡಿಕೆಯಂತೆ, ನಿಮ್ಮನ್ನು ಕೂಡಾ ಕೊರೊನಾ ವಾರಿಯರ್ಸ್‌ಗಳೆಂದೇ ಭಾವಿಸಿದ್ದೇವೆ ಕೊರೊನಾ ಲಸಿಕೆ ವಿತರಣೆ ಸಂದರ್ಭದಲ್ಲಿ
ನಿಮ್ಮನ್ನೂ ಮೊದಲ ಹಂತದಲ್ಲಿ ಪರಿಗಣಿಸುವಂತೆ ಮುಖ್ಯಮಂತ್ರಿಗೆ ತಿಳಿಸಲಾಗುವುದು. ಪ್ರತ್ಯೇಕ ವಿಮೆ, ಗೌರವಧನ, ಆಹಾರ ಕಿಟ್ ನೀಡುವುದು ಸೇರಿದಂತೆ ಎಲ್ಲವೂ ಸರ್ಕಾರದ ಮೇಲೆ ಹೊರೆ ಬೀಳಲಿದೆ. ಆದರೆ, ನಿಮ್ಮ ಪ್ರಾಮಾಣಿಕ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ’ ಎಂದು ಪ್ರತಿಭಟನನಿರತರನ್ನು ಸಮಾಧಾನಪಡಿಸಿದರು.

‘ಕೋವಿಡ್‌ ಕಾರಣದಿಂದಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಸಾಲ ಪಡೆಯಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಬಸವರಾಜ ಬೊಮ್ಮಾಯಿ, ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

‘ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಯನ್ನು ಕೋವಿಡ್‌ ವಾರಿಯರ್ಸ್‌ ಎಂದು ಪರಿಗಣಿಸಿ, ಮೊದಲ ಹಂತದಲ್ಲಿಯೇ ಕೋವಿಡ್ ಲಸಿಕೆ ನೀಡಬೇಕು. ಆಹಾರ ಕಿಟ್, ಗೌರವಧನ ವಿತರಿಸಬೇಕು, ಪ್ರತ್ಯೇಕ ವಿಮೆ ಸೌಲಭ್ಯ ನೀಡಬೇಕು. ಶಿಕ್ಷಣ ಸಂಸ್ಥೆಗಳ ಮರು ಆರಂಭ, ದಾಖಲಾತಿ, ಹಾಜರಾಗಿ, ಕನಿಷ್ಠ ಮೌಲ್ಯಮಾಪನದ ತೇರ್ಗಡೆ, ಬಾಕಿ ಹಾಗೂ ಪ್ರಸ್ತುತ ಕನಿಷ್ಠ ಶುಲ್ಕವನ್ನು ಪಾವತಿಸುವ ಬಗ್ಗೆ ಸ್ಪಷ್ಟೀಕರಣ ಆದೇಶ ನೀಡಬೇಕು’ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಅದಕ್ಕೂ ಮೊದಲು ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೆ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ನೂರಾರು ಶಿಕ್ಷಕರು, ಆಡಳಿತ ಮಂಡಳಿಗಳ ಸದಸ್ಯರು ಭಾಗವಹಿಸಿದರು. ಕೆಲವರು ತರಕಾರಿ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

‘ಕಳೆದ 10 ತಿಂಗಳಿನಿಂದ ನಮಗೆ ಕೆಲವರಿಗೆ ವೇತನವೇ ಸಿಕ್ಕಿಲ್ಲ. ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಲು ಸರಿಯಾದ ನೀತಿ ಮಾಡಿಲ್ಲ. ನಾವು ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದೇವೆ. ಆದರೆ, ವೇತನ ಇಲ್ಲ. ಸರ್ಕಾರ ಶಿಕ್ಷಕರ ಕಷ್ಟವನ್ನು ಅರಿತುಕೊಂಡು ಆರ್ಥಿಕ ನೆರವು ನೀಡಬೇಕು’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕರೊಬ್ಬರು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು