ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಗಮ‌ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚನೆ: ಸುರೇಶ್‌ಕುಮಾರ್

Last Updated 10 ಅಕ್ಟೋಬರ್ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ವಿವಿಧ ವಲಯಗಳಿಂದ ವ್ಯಕ್ತವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದ್ದಾರೆ.

ಈ ಕಾರ್ಯಕ್ರಮದಡಿ ಬಯಲಿನಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೆಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿದ್ದವು. ವಿದ್ಯಾಗಮ ಕಾರ್ಯಕ್ರಮಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ, ಸುರೇಶ್‌ಕುಮಾರ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಶನಿವಾರ ಈ ನಿರ್ಧಾರ ಪ್ರಕಟಿಸಿದ್ದಾರೆ.

‘ವಿದ್ಯಾಗಮ ಕುರಿತು ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿ–ಅಂಶಗಳ ಸಂಗ್ರಹ ಹಾಗೂ ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೆ ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಪರ–ವಿರೋಧ ಚರ್ಚೆ:ಕಾರ್ಯಕ್ರಮವನ್ನು ಸ್ಥಗಿತಗೊಳಿಸಿರುವ ಬಗ್ಗೆ ಶಿಕ್ಷಕರ ವಲಯದಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪರ–ವಿರೋಧ ಚರ್ಚೆ ನಡೆಯುತ್ತಿದೆ.

‘ವಿದ್ಯಾಗಮ ಯೋಜನೆಯಡಿ 47 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿತ್ತು. ಈಗ ಆ ಮಕ್ಕಳು ಮನೆಯಲ್ಲಿಯೇ ಇರಬೇಕು. ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಸರಾಗವಾಗಿ ನಡೆಯುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳ ಪೈಕಿ ಬಹುತೇಕರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ವಿದ್ಯಾಗಮ ಸ್ಥಗಿತಗೊಳಿಸಿರುವುದು ಸರಿಯಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಶಾಲೆಯಲ್ಲಿ ಬೋಧಿಸಲು ಸಿದ್ಧ:‘ದೇವಸ್ಥಾನದಲ್ಲಿ, ಬಯಲಿನಲ್ಲಿ ಪಾಠ ಮಾಡಿ ಎಂದು ಹೇಳುವ ಬದಲು ಶಾಲಾ ಆವರಣದಲ್ಲಿಯೇ ತರಗತಿ ನಡೆಸಲು ಅವಕಾಶ ನೀಡಬೇಕು. 7ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಮಾತ್ರ ಶಾಲೆಗೆ ಕರೆಸಬೇಕು. ವಾರದ ಒಂದೊಂದು ದಿನ ಒಂದೊಂದು ತರಗತಿಯ ಮಕ್ಕಳಿಗೆ ಬೋಧಿಸಲು ಹೇಳಿದರೆ ನಾವು ಪಾಠ ಮಾಡಲು ಸಿದ್ಧವಿದ್ದೇವೆ’ ಎಂದು ಪ್ರೌಢಶಾಲೆಯ ಮುಖ್ಯಶಿಕ್ಷಕಿಯೊಬ್ಬರು ಹೇಳಿದರು.

‘ಎಲ್ಲ ಮಕ್ಕಳನ್ನೂ ಕರೆದು ಪಾಠ ಹೇಳಿ ಎಂದರೆ ಅಂತರ ನಿಯಮ ಪಾಲನೆ ಕಷ್ಟವಾಗುತ್ತದೆ. ಒಂದು ದಿನ ಒಂದೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಬಂದರೆ ಅಂತರವನ್ನೂ ಕಾಪಾಡಿಕೊಳ್ಳಬಹುದು, ಅವರು ಶಿಕ್ಷಣದಿಂದ ಬಹಳ ದಿನ ದೂರವಿರುವುದೂ ತಪ್ಪುತ್ತದೆ’ ಎಂದು ಅವರು ಸಲಹೆ ನೀಡಿದರು.

‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಕುಳಿತು ಪಾಠ ಕೇಳುವುದಕ್ಕೆ ಮಕ್ಕಳಿಗೂ ಭಯ ಇರುತ್ತದೆ. ಶಿಕ್ಷಕರಿಗೂ ಆತಂಕ ಇರುತ್ತದೆ. ಇದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. 8ರಿಂದ 10ನೆಯ ತರಗತಿಯ ವಿದ್ಯಾರ್ಥಿಗಳನ್ನು ಮಾತ್ರ ಶಾಲೆಗೆ ಕರೆಸುವುದು ಉತ್ತಮ’ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಹೇಳುತ್ತಾರೆ.

‘ಒಂದು ವರ್ಷ ವ್ಯರ್ಥವಾದರೂ ಪರವಾಗಿಲ್ಲ. ಮಕ್ಕಳ ಜೀವ ಮುಖ್ಯ. ಈ ಕಾರ್ಯಕ್ರಮ ಸ್ಥಗಿತಗೊಳಿಸಿದ್ದೇ ಒಳ್ಳೆಯದಾಯ್ತು’ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT