ಶನಿವಾರ, ಮೇ 15, 2021
25 °C

ಮದುವೆ ಸಮಾರಂಭಕ್ಕೆ ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ; ಪಾಸ್‌ ಇದ್ದರಷ್ಟೇ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಮತ್ತಷ್ಟು ಬಿಗಿ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಮದುವೆ ಸಮಾರಂಭಕ್ಕೆ ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯಗೊಳಿಸಿದೆ. ಅಷ್ಟೇ ಅಲ್ಲ, ಅನುಮತಿ ನೀಡುವಾಗಲೇ ಒಳಾಂಗಣ ಕಾರ್ಯಕ್ರಮಕ್ಕೆ 100, ಹೊರಾಂಗಣಕ್ಕೆ 200 ಜನರಿಗೆ ಪಾಸ್‌ ನೀಡಲಾಗುವುದು.

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಅವಲೋಕಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಜೊತೆ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಬಳಿಕ ಕಂದಾಯ ಸಚಿವ ಆರ್‌. ಅಶೋಕ, ಈ ವಿಷಯ ತಿಳಿಸಿದರು.

‘ಸೋಂಕು ಹರಡುವಿಕೆ ತಡೆಯಲು ಜನಸಂದಣಿ ಹೆಚ್ಚಿರುವ ಕಾರ್ಯಕ್ರಮಗಳಿಗೆ ಕಠಿಣ ನಿಯಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕಲ್ಯಾಣ ಮಂಟಪ ಬುಕ್ ಆಗಿರುವ ಮದುವೆಗಳಿಗೆ ಪಾಸ್ ನಿಯಮ ಅನ್ವಯಿಸುವುದಿಲ್ಲ. ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೂ ಪಾಸ್‌ ಪಡೆಯಬೇಕು’ ಎಂದರು.

‘ನಿಯಮ ಉಲ್ಲಂಘಿಸಿದರೆ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು. ಅಲ್ಲದೆ, ಅವುಗಳನ್ನು ಮುಚ್ಚಿ, ಸೀಲ್ ಮಾಡಲಾಗುವುದು’ ಎಂದೂ ಎಚ್ಚರಿಕೆ ನೀಡಿದರು.

‘ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆ ಆಗಬಾರದು. ಕೋವಿಡ್‌ ನಿರ್ವಹಣೆಗೆ ಅಗತ್ಯ ಹಣ ಬಿಡುಗಡೆ ಮಾಡಲಾಗುವುದು. ಸೋಂಕಿನಿಂದ ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಬೆಂಗಳೂರು ನಗರದಲ್ಲಿ ಸೋಂಕು ಹರಡುವಿಕೆ ತಡೆಯಲು ಬಿಗಿ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮೊದಲು ಬೆಂಗಳೂರು ವ್ಯಾಪ್ತಿಯ ಸಚಿವರು, ಶಾಸಕರು, ಸಂಸದರ ಜತೆ ಚರ್ಚಿಸಲಾಗುವುದು’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಏಳು ಜಿಲ್ಲೆಗಳ ನಗರಗಳು ಮತ್ತು ಮಣಿಪಾಲದಲ್ಲಿ ಈಗಾಗಲೇ ಇದೇ 20ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುಣಮುಖರಾದ ಬಳಿಕ ಮತ್ತೆ ಸಭೆ ನಡೆಸಿ, ರಾಜ್ಯದಾದ್ಯಂತ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು’ ಎಂದರು.

‘ಬೇರೆ ದೇಶಗಳಲ್ಲಿ ಕೋವಿಡ್‌ ಮೂರನೇ ಅಲೆ ಕಾಣಿಸಿಕೊಂಡಿದೆ. ನಾವು ಆ ಹಂತಕ್ಕೆ ಹೋಗಬಾರದೆಂದು ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಎರಡನೇ ಅಲೆ ನಿಯಂತ್ರಿಸಲು ಯಾವುದೇ ಸಮಸ್ಯೆ ಆಗಬಾರದು. ಡೇಟಾ ಎಂಟ್ರಿ, ಸಿಬ್ಬಂದಿ ವೇತನ ಸಮಸ್ಯೆ ಆಗದಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಸುಧಾಕರ್ ಮಾತನಾಡಿ, ‘7,500 ಜಂಬೋ ಆಕ್ಸಿಜನ್ ಸಿಲಿಂಡರ್ ಪೂರೈಕೆಗೆ ಕೇಂದ್ರ ಸಚಿವರ ಜೊತೆಗೆ ಮಾತುಕತೆ ನಡೆಸಲಾಗಿದೆ’ ಎಂದರು.

‘ಜಾತ್ರೆ ನಡೆದರೆ ಜಿಲ್ಲಾಧಿಕಾರಿ ಹೊಣೆ’

‘ಈಗಾಗಲೇ ಜಾತ್ರೆಗಳಿಗೆ ನಿರ್ಬಂಧ ಹೇರಲಾಗಿದೆ. ಜಾತ್ರೆಗಳು ನಡೆದರೆ ಆಯಾ ಜಿಲ್ಲಾಧಿಕಾರಿಗಳೇ ಹೊಣೆ’ ಎಂದು ಆರ್‌. ಅಶೋಕ ಎಚ್ಚರಿಕೆ ನೀಡಿದರು.

‘ಸೋಂಕು ಹೆಚ್ಚಳವಾಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಜಾತ್ರೆಗಳಿಗೆ ಅವಕಾಶವಿಲ್ಲ. ಯಾವುದೇ ಜಾತ್ರೆ ನಡೆಯುವುದಕ್ಕೆ ಮೊದಲು ಆ ಸ್ಥಳಗಳಿಗೆ ಒಂದು ತಿಂಗಳು ಮುಂಚಿತವಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವುದು ಸೂಕ್ತ’ ಎಂದರು.

ಇಲಾಖಾ ಸಭೆ: ಕಡಿವಾಣಕ್ಕೆ ಸೂಚನೆ

 ‘ಕೋವಿಡ್‌ ಹೆಚ್ಚುತ್ತಿರುವುದರಿಂದ ಮುಂದಿನ ಒಂದೆರಡು ತಿಂಗಳ ಅವಧಿಗೆ ಸರ್ಕಾರದ ಇಲಾಖೆಗಳಲ್ಲಿ ಸಭೆಗಳಿಗೆ ಕಡಿವಾಣ ಹಾಕಬೇಕು’ ಎಂದು ಮುಖ್ಯ ಕಾರ್ಯದರ್ಶಿ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

‘ಅನಿವಾರ್ಯವಾದರೆ ಮಾತ್ರ ಅಂತರ ಕಾಪಾಡಿಕೊಂಡು ಸಭೆಗಳನ್ನು ನಡೆಸಬೇಕು. ವಿಡಿಯೊ ಸಂವಾದದ ಮೂಲಕ ವರ್ಚುವಲ್‌ ಸಭೆಗಳನ್ನು ಆಯೋಜಿಸಲು ಕ್ರಮ ವಹಿಸಬೇಕು’ ಎಂದು ತಿಳಿಸಿದ್ದಾರೆ.

ದೇಶದಲ್ಲಿ 2.34 ಲಕ್ಷ ಪ್ರಕರಣ

ದೇಶದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆ 8ರವರೆಗೆ ಕೋವಿಡ್‌ನ 2.34 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ದಿನವೊಂದರಲ್ಲಿ ಪತ್ತೆಯಾದ ಗರಿಷ್ಠ ಪ್ರಕರಣಗಳಾಗಿವೆ. ಇದೇ ಅವಧಿಯಲ್ಲಿ ಒಟ್ಟು 1,341 ಜನರು ಮೃತಪಟ್ಟಿದ್ದಾರೆ.

ಕಳೆದ 38 ದಿನಗಳಿಂದ ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ದೇಶದ ಒಟ್ಟು ಪ್ರಕರಣಗಳಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ 11.56ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಪ್ರಮಾಣವು ಶೇ 87.23ಕ್ಕೆ ಕುಸಿದಿದೆ. ಕೋವಿಡ್‌ನಿಂದ ಸತ್ತವರ ಪ್ರಮಾಣ ಶೇ 1.21ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 16 ಲಕ್ಷ ದಾಟಿದೆ.

30 ಲಕ್ಷ ಸಾವು: ವಿಶ್ವದಾದ್ಯಂತ ಕೋವಿಡ್‌-19ಗೆ ಈವರೆಗೆ ಮೃತಪಟ್ಟವರ ಸಂಖ್ಯೆ ಶುಕ್ರವಾರ ರಾತ್ರಿ 30 ಲಕ್ಷ ದಾಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು