ಬುಧವಾರ, ಡಿಸೆಂಬರ್ 7, 2022
23 °C
ಐದು ವರ್ಷಗಳಲ್ಲಿ 54.32 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ಅತಿವೃಷ್ಟಿ: ₹93,648 ಕೋಟಿ ನಷ್ಟ, ವಿಶ್ವ ಬ್ಯಾಂಕ್ ನೆರವು ಕೇಳಿದ ಕರ್ನಾಟಕ

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕ ರಾ‌ಜ್ಯದಲ್ಲಿ ಅತಿವೃಷ್ಟಿ ಹಾಗೂ ಬರದಿಂದಾಗಿ ಕಳೆದ ಐದು ವರ್ಷಗಳಲ್ಲಿ 54.32 ಲಕ್ಷ ಹೆಕ್ಟೇರ್‌ (1.36 ಕೋಟಿ ಎಕರೆ) ಕೃಷಿ ಹಾಗೂ ತೋಟಗಾರಿಕಾ ಬೆಳೆಗೆ ಹಾನಿಯಾಗಿದ್ದು, ₹93,648 ಕೋಟಿ ನಷ್ಟ ಉಂಟಾಗಿದೆ. 

ಕರ್ನಾಟಕದ ಶೇ 80ರಷ್ಟು ಭೌಗೋಳಿಕ ಪ್ರದೇಶವು ಬರಪೀಡಿತವೆಂದು ಗುರುತಿಸಿಕೊಂಡಿದೆ. ಕಳೆದ 20 ವರ್ಷಗಳಲ್ಲಿ, ಕೆಲವು ಪ್ರದೇಶಗಳು 15 ವರ್ಷ ಬರದಿಂದ ನರಳಿವೆ. ಅದೇ ವೇಳೆ, ಕೆಲವು ಪ್ರದೇಶಗಳಲ್ಲಿ 14 ವರ್ಷ ಅತಿವೃಷ್ಟಿ ಉಂಟಾಗಿ ವ್ಯಾಪಕ ಹಾನಿ ಸಂಭವಿಸಿದೆ. 2018ರಿಂದ ನಿರಂತರ ಐದು ವರ್ಷ ಪ್ರವಾಹ ಕಾಣಿಸಿಕೊಂಡಿದೆ.

ಪಶ್ಚಿಮಘಟ್ಟದಲ್ಲಿ ಭೂಕುಸಿತ ಸಾಮಾನ್ಯವಾಗಿದೆ. ಕೆಲವೆಡೆ ಲಘುಭೂಕಂಪನಗಳಾಗಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಸರ್ಕಾರವು ವಿಶ್ವಬ್ಯಾಂಕ್‌ನ ನೆರವು ಯಾಚಿಸಿದೆ. ವಿಶ್ವ ಬ್ಯಾಂಕ್‌ ಆರು ಮಂದಿ ತಜ್ಞರ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿದೆ. ಈ ತಜ್ಞರ ತಂಡವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಇತ್ತೀಚೆಗೆ ಸಭೆ ನಡೆಸಿ ಹಲವು ಸಲಹೆಗಳನ್ನು ನೀಡಿದೆ. ಜಾಗತಿಕ ತಾಪಮಾನ ಬದಲಾವಣೆಯಿಂದ ಉಂಟಾಗಿರುವ ಸವಾಲುಗಳನ್ನು ಎದುರಿಸುತ್ತಿರುವ ಬಗ್ಗೆಯೂ ತಂಡವು ಸಮಾಲೋಚನೆ ನಡೆಸಿದೆ.

ಅತಿವೃಷ್ಟಿಯಿಂದಾಗಿ ಉಂಟಾದ ಹಾನಿಗೆ ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್‌ನಿಂದ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಮನೆಗಳ ದುರಸ್ತಿ ಹಾಗೂ ಪುನರ್‌ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇನ್‌ಪುಟ್‌ ಸಬ್ಸಿಡಿಯನ್ನು ರಾಜ್ಯ ಸರ್ಕಾರದ ಖಜಾನೆಯಿಂದಲೇ ನೀಡಲಾಗಿದ್ದು, ಇದು ದೊಡ್ಡ ಹೊರೆಯಾಗಿದೆ. ಕಳೆದ 10 ವರ್ಷಗಳಲ್ಲಿ ವಿಪತ್ತು ಪರಿಹಾರ ಕಾಮಗಾರಿಗಳಿಗೆ ₹22,041 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ತಜ್ಞರ ಸಮಿತಿಯ ಗಮನಕ್ಕೆ ತಂದಿದ್ದಾರೆ.

‘ಎನ್‌ಡಿಆರ್‌ಎಫ್‌ನಿಂದ ತುರ್ತಾಗಿ ನೆರವು ಪಡೆಯಲು ಪ್ರವಾಹದ ಹಾನಿಯ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಆದರೆ, ವಾಸ್ತವದಲ್ಲಿ ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವಕ್ಕಿಂತಲೂ ಹೆಚ್ಚು ಹಾನಿ ಉಂಟಾಗಿರುತ್ತದೆ. ಸಣ್ಣ ಉದ್ಯಮಗಳಿಗೆ ಉಂಟಾದ ನಷ್ಟ ಹಾಗೂ ಜೀವಹಾನಿಯನ್ನು ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ. ಮೂಲಸೌಕರ್ಯ ಹಾನಿಗೆ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ನಿಂದ ನೆರವು ಸಿಗುವುದಿಲ್ಲ. ಬೆಂಗಳೂರು ವಾಸ್ತವದಲ್ಲಿ ಪ್ರವಾಹ ಪೀಡಿತ ಪ್ರದೇಶ ಅಲ್ಲ. ಅತಿಯಾದ ಮಾನವನ ಹಸ್ತಕ್ಷೇಪದಿಂದಲೇ ನಗರದಲ್ಲಿ ಪ್ರವಾಹ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಕಠಿಣ ಕಾನೂನು ಚೌಕಟ್ಟು ರೂಪಿಸಬೇಕು ಹಾಗೂ ಸಮಗ್ರ ನಗರ ಯೋಜನೆಯನ್ನು ರೂಪಿಸಬೇಕಿದೆ’ ಎಂದು ಕಂದಾಯ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಸಭೆಯಲ್ಲಿ ಪ್ರತಿಪಾದಿಸಿದರು.

ಈ ವರ್ಷ ಬೆಂಗಳೂರಿನಲ್ಲಿ ಹಲವು ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಒಂದು ಗಂಟೆಯ ಮಳೆಗೆ ಹಲವು ಬಡಾವಣೆಗಳು ಜಲಾವೃತವಾಗಿವೆ. ರಾಜಧಾನಿಯಲ್ಲಿ ಪ್ರವಾಹ ನಿಯಂತ್ರಣಕ್ಕೆ ಅತ್ಯುತ್ತಮ ಜಾಗತಿಕ ಮಾದರಿಗಳನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಇದಕ್ಕೆ ವಿಶ್ವ ಬ್ಯಾಂಕ್ ತಾಂತ್ರಿಕ ನೆರವು ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಕೋರಿದರು. ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಾಪಮಾನ ಹಾಗೂ ಪ್ರವಾಹ ಸ್ಥಿತಿಸ್ಥಾಪಕತ್ವ ಯೋಜನೆಗಳಿಗೆ ವಿಶ್ವ ಬ್ಯಾಂಕ್‌ ನೆರವು ನೀಡಿದ್ದು, ಅದೇ ಮಾದರಿಯಲ್ಲಿ ಕರ್ನಾಟಕಕ್ಕೂ ಸಹಕಾರ ನೀಡಲು ಸಿದ್ಧ ಎಂದು ತಜ್ಞರ ಸಮಿತಿಯು ಸರ್ಕಾರಕ್ಕೆ ವಾಗ್ದಾನ ನೀಡಿತು ಎಂದು ಮೂಲಗಳು ತಿಳಿಸಿವೆ. 

ಶೀಘ್ರ ಜಲನೀತಿ
‘ರಾಜ್ಯದಲ್ಲಿ ಜಲಸಂಪನ್ಮೂಲಗಳ ನಿರ್ವಹಣೆಗೆ ಸರ್ಕಾರವು ಸಮಗ್ರ ನೀರಿನ ಸಂಪನ್ಮೂಲ ನಿರ್ವಹಣೆಗೆ ಉನ್ನತ ಕೇಂದ್ರ ಸ್ಥಾಪಿಸಿದೆ. ಗುಣಮಟ್ಟದ ನೀರು ಪೂರೈಕೆ, ಬರ ಹಾಗೂ ಪ್ರವಾಹ ನಿರ್ವಹಣೆ, ಕೈಗಾರಿಕೆ ಹಾಗೂ ಕೃಷಿಗೆ ಅಗತ್ಯ ನೀರು ಒದಗಿಸಲು ಹೊಸ ಜಲ ನೀತಿಯನ್ನು ಸರ್ಕಾರ ಶೀಘ್ರದಲ್ಲಿ ರೂಪಿಸಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ತಿಳಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು