ಗುರುವಾರ , ಆಗಸ್ಟ್ 11, 2022
21 °C
ಎನ್‌ಜಿಇಎಫ್‌ ಜಮೀನು ಬಳಕೆಗೆ ಯೋಜನೆ

ಮೈಸೂರು ಲ್ಯಾಂಪ್ಸ್‌ ಜಮೀನು; ಕಲಾ ಕೇಂದ್ರ, ಪಾರಂಪರಿಕ ಮ್ಯೂಸಿಯಂ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿಯ ಸಮಗ್ರ ಅಭಿವೃದ್ಧಿಗಾಗಿ ರೂಪಿಸಿರುವ ಬೆಂಗಳೂರು ಮಿಷನ್‌–2022 ಯೋಜನೆಯಡಿ ಮೈಸೂರು ಲ್ಯಾಂಪ್ಸ್‌ ಮತ್ತು ಎನ್‌ಜಿಇಎಫ್ ಕಾರ್ಖಾನೆಗಳ ಜಮೀನಿನಲ್ಲಿ ಕಲಾ ಕೇಂದ್ರ, ಪಾರಂಪರಿಕ ಮತ್ತು ಇತಿಹಾಸ ಮ್ಯೂಸಿಯಂ ಹಾಗೂ ‘ಲಿವಿಂಗ್‌ ಲ್ಯಾಬ್‌‘ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಬೆಂಗಳೂರು ಮಿಷನ್‌–2022 ಕುರಿತ ಸಂವಾದ ಕಾರ್ಯಕ್ರಮದಲ್ಲಿ ಯೋಜನೆಯ ಕುರಿತು ಮಾಹಿತಿ ಹಂಚಿಕೊಂಡ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಗೌರವ್‌ ಗುಪ್ತ, ‘ಎರಡೂ ಸ್ಥಳಗಳಲ್ಲಿ ಬೆಂಗಳೂರು ನಗರದ ಕಲೆ, ಸಂಸ್ಕೃತಿ, ಇತಿಹಾಸ, ತಂತ್ರಜ್ಞಾನದ ಪ್ರಗತಿಯನ್ನು ಬಿಂಬಿಸುವ ಕೇಂದ್ರಗಳನ್ನು ನಿರ್ಮಿಸಲಾಗುವುದು. ಬೆಂಗಳೂರಿನ ಅಭಿವೃದ್ಧಿಯ ಹಾದಿಯನ್ನು ಜನರಿಗೆ ಪರಿಚಯಿಸುವುದು ಇದರ ಉದ್ದೇಶ’ ಎಂದರು.

ಎನ್‌ಜಿಇಎಫ್‌ ಜಮೀನಿನಲ್ಲಿ ಬೆಂಗಳೂರಿನ ಸಂಸ್ಕೃತಿ, ಪರಂಪರೆ ಮತ್ತು ಕರಕುಶಲ ಮ್ಯೂಸಿಯಂ, ಸಾಂಸ್ಕೃತಿಕ ಕೇಂದ್ರ, ಮೈಸೂರು ಲ್ಯಾಂಪ್ಸ್‌ ಜಮೀನಿನಲ್ಲಿ ‘ಲಿವಿಂಗ್‌ ಲ್ಯಾಬ್‌’, ಬೆಂಗಳೂರಿನ ಇತಿಹಾಸ ಮ್ಯೂಸಿಯಂ, ತಂತ್ರಜ್ಞಾನದ ಇತಿಹಾಸ ಕೇಂದ್ರ, ಬೆಂಗಳೂರು ಇನ್ನೋವೇಷನ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಯೋಜನೆಗಳ ಅನುಷ್ಠಾನಕ್ಕೆ ಈಗಾಗಲೇ ಏಜೆನ್ಸಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾಚೋಹಳ್ಳಿ ಮತ್ತು ಭೂತನಹಳ್ಳಿಯಲ್ಲಿ 400 ಎಕರೆ ವಿಸ್ತೀರ್ಣದ ವೃಕ್ಷೋದ್ಯಾನ ನಿರ್ಮಿಸಲಾಗುವುದು. ತುರಹಳ್ಳಿ, ಜೆ.ಪಿ. ನಗರ, ಕಾಡುಗೋಡಿ ಮತ್ತು ಮತ್ತಿಕೆರೆ ಕಿರು ಅರಣ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. 25 ಕೆರೆಗಳ ಪುನಶ್ಚೇತನ ಮಾಡಲಿದ್ದು, 20 ಕೆರೆಗಳ ನೀರಿನ ಗುಣಮಟ್ಟದ ಮೇಲೆ ನಿರಂತರ ನಿಗಾ ಇರಿಸಲಾಗುವುದು ಎಂದು ತಿಳಿಸಿದರು.

ಕಾಮಗಾರಿಗಳಿಗೆ ಕಾಲಮಿತಿ: ‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಮಾರ್ಚ್‌ ಒಳಗಾಗಿ ಪೂರ್ಣಗೊಳಿಸಲು ಕಾಲಮಿತಿ ವಿಧಿಸಲಾಗಿದೆ. ಈಗಾಗಲೇ ನಾನು ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು 2021ರ ಮಾರ್ಚ್‌ನ ಒಳಗೆ ಪೂರ್ಣಗೊಳಿಸಲು ಕಾಲಮಿತಿ ವಿಧಿಸಲಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಉತ್ತರಿಸಿದರು.

ಸಮನ್ವಯಕ್ಕೆ ಸಮಿತಿ: ಸಮನ್ವಯದ ಕೊರತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ‘ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆ, ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸಲಾಗಿದೆ. ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ’ ಎಂದರು.

ನಗರದಲ್ಲಿ ರಾಜ ಕಾಲುವೆ ಒತ್ತುವರಿಯಾಗಿರುವ 2,500 ಪ್ರಕರಣಗಳನ್ನು ಗುರುತಿಸಲಾಗಿತ್ತು. 1,500 ಸ್ಥಳಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಮತ್ತೆ ಕಾರ್ಯಾಚರಣೆ ನಡೆಸಲು ಹೈಕೋರ್ಟ್‌ ಅನುಮತಿ ನೀಡಿದೆ. ಶೀಘ್ರದಲ್ಲಿ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು