ಶನಿವಾರ, ಜೂನ್ 12, 2021
28 °C

ಸೋಂಕಿತರಿಗೆ ಆತ್ಮಸ್ಥೈರ್ಯ: ಕೋವಿಡ್‌ ಆರೈಕೆ ಕೇಂದ್ರದಲ್ಲಿ ಸಂಗೀತ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಸಂಗೀತ ಕಾರ್ಯಕ್ರಮ ಆಯೋಜಿಸಿದ್ದ ಶಾಸಕ ಡಾ.ಕೆ.ಅನ್ನದಾನಿ, ಸ್ವತಃ ತಾವೂ ನೃತ್ಯ ಮಾಡಿದ್ದಾರೆ.

ಪಟ್ಟಣದ ಕೆಎಸ್ಆರ್‌ಟಿಸಿ ತರಬೇತಿ ಕೇಂದ್ರ, ವಡ್ಡರಹಳ್ಳಿ ವಸತಿ ಶಾಲೆಯ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸುಮಾರು 500 ಮಂದಿ ಸೋಂಕಿತರಿದ್ದಾರೆ. ಅವರಿಗೆ ಧೈರ್ಯ ತುಂಬಲು ಶಾಸಕರು ಶಿವರಗುಡ್ಡದ ಉಮೇಶ್ ಮತ್ತು ಯರಳ್ಳಿ ಪುಟ್ಟಸ್ವಾಮಿ ತಂಡದಿಂದ ಶುಕ್ರವಾರ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ದೇವರ ಗೀತೆ ಹಾಡಿ ಕುಣಿದರು. ಸೋಂಕಿತರಿಂದಲೂ ಹೆಜ್ಜೆ ಹಾಕಿಸಿದ್ದರು.

ಆರೈಕೆ ಕೇಂದ್ರಗಳಲ್ಲಿರುವ ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತಂಕದಲ್ಲಿದ್ದು, ಮನರಂಜನೆ ಮೂಲಕ ಅವರ ಆತಂಕ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾಗಿ ಡಾ.ಅನ್ನದಾನಿ ಹೇಳಿದ್ದಾರೆ.

ಪರ– ವಿರೋಧ ಚರ್ಚೆ: ಶಾಸಕರು ಸಂಗೀತ ಕಾರ್ಯಕ್ರಮ ಆಯೋಜಿಸಿ ನೃತ್ಯ ಮಾಡಿರುವ ವಿಚಾರವು, ಸಾಮಾಜಿಕ ಜಾಲತಾಣಗಳಲ್ಲಿ ಪರ– ವಿರೋಧ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಯತ್ನಿಸಿದ್ದಾರೆ ಎಂದು ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಇನ್ನೊಂದೆಡೆ, ‘ಅನೇಕರಿಗೆ ಹಾಸಿಗೆ ಸಿಗದೇ ಪ್ರಾಣ ಬಿಡುತ್ತಿದ್ದಾರೆ. ಅವರ ಬಗ್ಗೆ ಗಮನ ಹರಿಸಬೇಕಿತ್ತು’ ಎಂಬ ಆಕ್ಷೇಪ ಕೇಳಿಬಂದಿದೆ.

ಸೋಂಕಿತರಿಂದ ಸಂಗೀತ ಸಂಜೆ
ಹಿರಿಯೂರು:
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಸೋಂಕಿತ ಸಂಗೀತ ಶಿಕ್ಷಕರೊಬ್ಬರು ‘ಸಂಗೀತ ಸಂಜೆ’ ನಡೆಸಿ ಸೋಂಕಿತರಿಗೆ ಧೈರ್ಯ ತುಂಬಿದರು. ಹಾಡಿಗೆ ಉಳಿದ ಸೋಂಕಿತರು, ವೈದ್ಯರು, ಶುಶ್ರೂಷಕರೂ ದನಿಗೂಡಿಸಿದರು.

ಬಸವ ಜಯಂತಿ ಹಾಗೂ ಅಕ್ಷಯ ತೃತೀಯದ ಅಂಗವಾಗಿ ಸಂಗೀತ ಶಿಕ್ಷಕ ರವಿಶಂಕರ್ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟರು. ಮೇ 11ರಂದು ಇವರು ಚಿಕಿತ್ಸೆಗೆ ದಾಖಲಾಗಿದ್ದರು. ಮಾನಸಿಕ ಒತ್ತಡಕ್ಕೆ ಸಿಲುಕಿದ ಸೋಂಕಿತರನ್ನು ರಂಜಿಸಿ, ಧೈರ್ಯ ತುಂಬಲು ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಹತ್ತಕ್ಕೂ ಹೆಚ್ಚು ಸೋಂಕಿತರು ಇರುವ ವಾರ್ಡ್‌ಗೆ ಕೀಬೋರ್ಡ್‌ ತರಿಸಿಕೊಂಡು ಹಾಸಿಗೆಯ ಮೇಲೆಯೇ ಕುಳಿತು ರವಿಶಂಕರ್ ನುಡಿಸಿದರು. ವಚನಗಳು, ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ’ ಹಾಡು ಹೇಳಿದರು. ಸೋಂಕಿತರೂ ಚಪ್ಪಾಳೆ ತಟ್ಟುತ್ತ ಸಾಥ್ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು