ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯ ಕಪಾಳಕ್ಕೆ ಹೊಡೆದು, ಕೈ ತಿರುಚಿದ್ದ ಅತ್ಯಾಚಾರಿಗಳು!

ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಶಂಕೆ: ಪತ್ತೆಗೆ ಕೇರಳದತ್ತ ಪೊಲೀಸ್ ತಂಡ
Last Updated 27 ಆಗಸ್ಟ್ 2021, 9:04 IST
ಅಕ್ಷರ ಗಾತ್ರ

ಮೈಸೂರು:ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಗುಡ್ಡದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸುವ ಮುನ್ನ ಆರೋಪಿಗಳು ಆಕೆಯ ಕಪಾಳಕ್ಕೆ ಹೊಡೆದು, ಕೈ ತಿರುಚಿ ಹಿಂಸಿಸಿದ್ದಾರೆ.

‘ತೋಳಿನ ಮಾಂಸಖಂಡಗಳಿಗೆ ಹೆಚ್ಚು ಪೆಟ್ಟಾಗಿದ್ದು. ಆಕೆ ಆಘಾತದಿಂದ ಇನ್ನೂ ಈಚೆ ಬಂದಿಲ್ಲ. ಘಟನೆ ನಡೆದ ಒಂದೂವರೆ ದಿನಗಳ ಬಳಿಕ, ಗುರುವಾರ ಮಧ್ಯಾಹ್ನ ಆಕೆ ಆಹಾರ ಸೇವನೆ ಮಾಡಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ.

ಸಂತ್ರಸ್ತೆಯ ಸ್ನೇಹಿತ ಮತ್ತೊಮ್ಮೆ ಹೇಳಿಕೆ ನೀಡಿದ್ದು, ‘ಸ್ನೇಹಿತೆಯೊಂದಿಗೆ ಸಂಜೆ ವಾಯುವಿಹಾರಕ್ಕೆ ತೆರಳಿದ್ದಾಗ 6 ಆರೋಪಿಗಳು ದೊಣ್ಣೆ ಮತ್ತು ಕಲ್ಲುಗಳಿಂದ ನನ್ನ ಮೇಲೆ ಹಲ್ಲೆ ನಡೆಸಿದರು. ಯುವತಿಯ ಮೇಲೂ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದರು. ಬಳಿಕ ನನ್ನ ತಂದೆಗೆ ನನ್ನಿಂದಲೇ ಕರೆ ಮಾಡಿಸಿ ₹ 3 ಲಕ್ಷವನ್ನು ಆನ್‌ಲೈನ್‌ನಲ್ಲೇ ಖಾತೆಗೆ ಹಾಕುವಂತೆ ಆಗ್ರಹಿಸಿದರು. ನಿರಾಕರಿಸಿದ್ದಕ್ಕೆ ಇನ್ನಷ್ಟು ಹೊಡೆದರು’ ಎಂದಿದ್ದಾರೆ.

ನಾಲ್ವರ ಮೇಲೆ ಶಂಕೆ

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದ್ದು, ಮೊಬೈಲ್‌ ಟವರ್‌ ಸಿಗ್ನಲ್ ಸೇರಿದಂತೆ ಇತರೆ ಸಾಕ್ಷ್ಯಗಳನ್ನು ಆಧರಿಸಿ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅವರು ಅತ್ಯಾಚಾರ ನಡೆದ ನಂತರ ಒಂದು ದಿನ ಮಾತ್ರ ಮೈಸೂರಿನಲ್ಲಿದ್ದು ಕೇರಳಕ್ಕೆ ತೆರಳಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಅಲ್ಲಿಗೆ ತೆರಳಿದೆ’ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆ

ಸ್ಥಳದಲ್ಲಿ ಸಿಕ್ಕ ಮದ್ಯದ ಬಾಟಲಿಗಳ ಆಧಾರದ ಮೇಲೆ ಸುತ್ತಮುತ್ತ ಇರುವ ಮದ್ಯದಂಗಡಿಗಳನ್ನು ಪೊಲೀಸರು ಜಾಲಾಡಿದ್ದಾರೆ. ಅಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪಡೆದು ತನಿಖೆ ಮುಂದುವರಿಸಿದ್ದಾರೆ.

ಕೆಪಿಸಿಸಿ ಸತ್ಯಶೋಧನಾ ಸಮಿತಿ ಭೇಟಿ

ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ರಚಿಸಿರುವ ಸತ್ಯಶೋಧನಾ ಸಮಿತಿಯ ನೇತೃತ್ವ ವಹಿಸಿರುವ ವಿ.ಎಸ್.ಉಗ್ರಪ್ಪ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸಮಿತಿಯಲ್ಲಿ 12 ಸದಸ್ಯರಿದ್ದು, ಎಲ್ಲರೂ ಘಟನೆ ನಡೆದ ವ್ಯಾಪ್ತಿಯ ಪೊಲೀಸ್ ಠಾಣೆ, ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದರು.

ಸುತ್ತಾಟದಲ್ಲೇ ಹೊತ್ತು ಕಳೆದ ಸಚಿವ

ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ ಮೈಸೂರಿಗೆ ಬಂದು ವಾಸ್ತವ್ಯ ಹೂಡಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಸುತ್ತಾಟ, ಪೂಜೆಗಳಲ್ಲೇ ಕಾಲ ಕಳೆದರು.

ಶುಕ್ರವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ, ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ಸುತ್ತಾಟ ನಡೆಸಿದರು. ಅಲ್ಲಿ ಫೈರಿಂಗ್ ಸ್ಟಿಮಿಲೇಟರ್‌ನ್ನು ಉದ್ಘಾಟಿಸಿ, ತಾವೂ ಫೈರಿಂಗ್‌ ನಡೆಸಿ ಖುಷಿಪಟ್ಟರು. ಮಾದರಿ ಪೊಲೀಸ್ ಠಾಣೆ, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ವೀಕ್ಷಿಸಿದರು.

ಅತ್ಯಾಚಾರ ಪ್ರಕರಣ ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ಕುರಿತು ಅಧಿಕಾರಿಗಳೊಂದಿಗೆ ಅವರು ಸಭೆ ಆರಂಭಿಸುವ ಹೊತ್ತಿಗೆ ಮಧ್ಯಾಹ್ನ 1 ಗಂಟೆಯಾಗಿತ್ತು.

ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತ್ಯಾಚಾರ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಲು ಆಗುವುದಿಲ್ಲ. ಹೆಚ್ಚಿನ ಸಮಯ ಬೇಕಾಗುತ್ತದೆ. ಯುವತಿಯ ಹೇಳಿಕೆ ಪಡೆದ ಬಳಿಕವೇ ತನಿಖೆಯನ್ನು ಚುರುಕುಗೊಳಿಸಲು ಸಾಧ್ಯ’ ಎಂದರು. ಸಭೆ ಬಳಿಕ ಅವರು ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT