ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರನಿದ್ರೆಗೆ ಜಾರಿದ ಕಣವಿ

Last Updated 16 ಫೆಬ್ರುವರಿ 2022, 20:35 IST
ಅಕ್ಷರ ಗಾತ್ರ

ಧಾರವಾಡ: ಚೆಂಬೆಳಕಿನಕವಿ ಡಾ. ಚೆನ್ನವೀರ ಕಣವಿ (93) ಅವರು ಕೋವಿಡ್‌ ಸೋಂಕಿನಿಂದ ಗುಣಮುಖರಾದರೂ, ಬಹು ಅಂಗಾಂಗ ವೈಫಲ್ಯದಿಂದ ಚೇತರಿಸಿಕೊಳ್ಳದೆ ಬುಧವಾರ ಬೆಳಗ್ಗೆ ನಿಧನರಾದರು.

ಪತ್ನಿ ಶಾಂತಾದೇವಿ ಕಣವಿ ಅವರ ಜನ್ಮದಿನದಂದು (ಜ.12) ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದ ಅವರು, ಅಂದೇ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಅವರಿಗೆ ಕೋವಿಡ್ ದೃಢಪಟ್ಟಿತ್ತು. ಕೋವಿಡ್‌ನಿಂದ ಗುಣಮುಖರಾದರೂ ಅವರ ಶ್ವಾಸಕೋಶದಲ್ಲಿನ ಸೋಂಕು ಮತ್ತು ಮೂತ್ರಪಿಂಡ ಸಮಸ್ಯೆ ಅವರನ್ನು ಬಾರದಲೋಕಕ್ಕೆ ಕರೆದೊಯ್ಯಿತು.

ಅವರಿಗೆ ಮಕ್ಕಳಾದ ಶಿವಾನಂದ, ಚಂದ್ರಮೌಳಿ, ಪ್ರಿಯದರ್ಶಿ, ರಂಜನಾ, ಕರುಣಾ ಪ್ರಸಾದ ಇದ್ದಾರೆ. ಪತ್ನಿ, ಲೇಖಕಿ ಶಾಂತಾದೇವಿ ಕಣವಿ ಅವರು 2020ರ ಮೇ 22ರಂದು ನಿಧನರಾಗಿದ್ದಾರೆ.

ಅಂತ್ಯಕ್ರಿಯೆ:
ನಾಡೋಜ ಡಾ.‌ ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಅಳ್ನಾವರ ರಸ್ತೆಯಲ್ಲಿರುವ ಸೃಷ್ಟಿ ಫಾರ್ಮ್‌ನಲ್ಲಿ ಸಂಜೆ 6.30ರ ಸುಮಾರಿಗೆ ನೆರವೇರಿತು.

ಮಾವಿನತೋಟದಲ್ಲಿರುವ ಪತ್ನಿ ಶಾಂತಾದೇವಿ ಕಣವಿ ಅವರ ಸಮಾಧಿಯ ಪಕ್ಕದಲ್ಲಿ ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ನೆರವೇರಿತು.

ಕಣವಿ ಅವರ ಕುಟುಂಬದವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಕುಶಾಲು ತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದರು.

ಪರಿಚಯ:
ಗದಗ ಜಿಲ್ಲೆಯ ಹೊಂಬಳದ ಡಾ. ಕಣವಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರಪ್ಪ ಅವರು ಪ್ರಾಥಮಿಕ ಶಾಲೆ ಶಿಕ್ಷಕರು ಹಾಗೂ ತಾಯಿ ಪಾರ್ವತವ್ವ ಗೃಹಿಣಿ. ಊರಲ್ಲಿಯೇ ಅಕ್ಷರಾಭ್ಯಾಸ ಮುಗಿಸಿದ ಕಣವಿ ಅವರು ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. ನಂತರ ಅದೇ ವಿಭಾಗದ ನಿರ್ದೇಶಕರಾದರು.

15ಕ್ಕೂ ಹೆಚ್ಚು ಕವನ ಸಂಕಲನ, ವಿಮರ್ಶೆ ಹಾಗೂ ಪ್ರಬಂಧ ಸಂಕಲನ, ಮಕ್ಕಳ ಬರಹಗಳು ಸೇರಿದಂತೆ ಹಲವು ಬಗೆಯ ಸಾಹಿತ್ಯ ರಚಿಸಿದ್ದಾರೆ. ಅವರ ‘ಜೀವಧ್ವನಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ, ಬೆಂಗಳೂರು ನಗರ ಸಾರಿಗೆ ಸಂಸ್ಥೆ ನೀಡುವ ನೃಪತುಂಗ ಪ್ರಶಸ್ತಿ, ಎಸ್.ಬಂಗಾರಪ್ಪ ಪ್ರತಿಷ್ಠಾನ ಹಾಗೂ ವಿಚಾರ ವೇದಿಕೆಯ ಸಾಹಿತ್ಯಬಂಗಾರ ಪ್ರಶಸ್ತಿ, ದುಬೈ ಯುಎಇ ಕನ್ನಡ ಸಂಘದ ಕನ್ನಡ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ನಮನ:
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ, ಸಾಹಿತಿಗಳಾದ ಕುಂ. ವೀರಭದ್ರಪ್ಪ, ಅಲ್ಲಮಪ್ರಭು ಬೆಟ್ಟದೂರು, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಎಸ್ಪಿ ಪಿ‌. ಕೃಷ್ಣಕಾಂತ್, ಜಿ‌.ಪಂ.‌ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ‌ ಸೇರಿದಂತೆ ಸಾಹಿತಿಗಳು, ಗಣ್ಯರು, ಅಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಂಬಂಧಿಕರು ಕಣವಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT