ಗೋಣಿಕೊಪ್ಪಲು/ಎಚ್.ಡಿ.ಕೋಟೆ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ ಮಂಗಳವಾರ ಎರಡು ಹೆಣ್ಣು ಹುಲಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮದ ಚೂರಿಕಾಡುವಿನಲ್ಲಿ ಇಬ್ಬರನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿ ಹಾಗೂ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಅರಣ್ಯ ವ್ಯಾಪ್ತಿಯ ಬಳ್ಳೆ ಹಾಡಿಯ ಯುವಕ ಮಂಜು (17) ಅವರನ್ನು ಜ.22ರಂದು ಕೊಂದಿದ್ದ ‘ಬ್ಯಾಕ್ ವಾಟರ್ ಫಿಮೇಲ್’ ಹೆಸರಿನ ಮತ್ತೊಂದು ಹುಲಿ ಸೆರೆ ಯಾಗಿದೆ. ಹುಲಿಗಳನ್ನು ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಚಿಕಿತ್ಸಾ ಕೇಂದ್ರಕ್ಕೆ ರವಾನಿಸಲಾಗಿದೆ.
‘ಕೊಡಗು ಜಿಲ್ಲೆಯಲ್ಲಿ ಸೆರೆಯಾದ ಸುಮಾರು 12 ವರ್ಷ ವಯಸ್ಸಿನ ಹುಲಿಯು, ಇಬ್ಬರ ಮೇಲೆ ದಾಳಿ ನಡೆಸಿದ್ದ ಸ್ಥಳದ ಸಮೀಪದ ನಾಣಚ್ಚಿ ಬಳಿಯ ಕಾಫಿ ತೋಟದಲ್ಲಿ ಅಡಗಿತ್ತು. ದೇಹದ ಮೇಲೆ ಗಾಯಗಳಾಗಿದ್ದು, ಅನಾ ರೋಗ್ಯದಿಂದ ಬಳಲುತ್ತಿತ್ತು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಕೊಡಗು ಜಿಲ್ಲೆಯ ಸಿಸಿಎಫ್ ಬಿ.ಎನ್.ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾರ್ಯಾಚರಣೆ ತಂಡದಲ್ಲಿ 6 ಪಶುವೈದ್ಯರಿದ್ದರು. ಹುಲಿಯು ಕಾಣಿಸಿ ಕೊಂಡ ಕೂಡಲೇ ಉಪವಲಯ ಅರಣ್ಯಾಧಿಕಾರಿ ರಂಜನ್ ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿದರು. ಸ್ವಲ್ಪ ದೂರ ಸಾಗಿದ ಹುಲಿ ಪ್ರಜ್ಞೆ ತಪ್ಪಿ ಬಿದ್ದಿತು. ವಯಸ್ಸಾಗಿರುವ ಕಾರಣಕ್ಕೆ ಕಾಡಿನಿಂದ ಹೊರಬಂದು ಜನ– ಜಾನುವಾರುಗಳ ಮೇಲೆ ಆಕ್ರಮಣ ಮಾಡುತ್ತಿತ್ತು. ಒಟ್ಟು 6 ಸಾಕಾನೆಗಳನ್ನು ಕರೆಸಿದ್ದರೂ ನಾಲ್ಕನ್ನಷ್ಟೇ ಕಾರ್ಯಾಚರಣೆಗೆ ಬಳಸಲಾಯಿತು’ ಎಂದು ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ ತಿಳಿಸಿದರು.
ಹುಲಿ ಯೋಜನೆಯ ಪಿಸಿಸಿಎಫ್ ಜಗತ್‌ರಾಮನ್, ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಕುಮಾರ್ ಪುಷ್ಕರ್ ಕಾರ್ಯಾಚರಣೆ ಸ್ಥಳದಲ್ಲಿದ್ದರು.
ಪ್ರವಾಸಿಗರ ನೆಚ್ಚಿನ ಹುಲಿ: ‘ಬ್ಯಾಕ್ ವಾಟರ್ ಫಿಮೇಲ್’ ಹುಲಿ (11 ವರ್ಷ) ತನ್ನ ಒಂದು ವರ್ಷದ ವಯಸ್ಸಿನ ನಾಲ್ಕು ಮರಿಗಳೊಂದಿಗೆ ಕಬಿನಿ ಹಿನ್ನೀರು ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು.
ಅದನ್ನು ನೋಡಲೆಂದೇ ಪ್ರವಾಸಿಗರು ಮತ್ತು ವನ್ಯಜೀವಿ ಛಾಯಾಗ್ರಾಹಕರು ಭೇಟಿ ನೀಡುತ್ತಿದ್ದರು. ಎರಡು ತಿಂಗಳ ಹಿಂದೆ ಜಿಂಕೆಯನ್ನು ಬೇಟೆಯಾಡಿ ತನ್ನ ನಾಲ್ಕು ಮರಿಗಳಿಗೆ ಆಹಾರ ನೀಡಿದ್ದ ದೃಶ್ಯ ಸೆರೆಸಿಕ್ಕಿತ್ತು.
‘ಇನ್ನೊಂದು ಹುಲಿಯೊಂದಿಗೆ ನಡೆದ ಕಾಳಗದಲ್ಲಿ ಈ ಹುಲಿಯ ಕುತ್ತಿಗೆ, ತೊಡೆ ಮತ್ತು ಇತರೆಡೆ ಗಾಯಗಳಾಗಿದ್ದು, ವಯೋಸಹಜ ಅಸಹಾಯಕತೆಯಿಂದ ಅರಣ್ಯದಂಚಿನ ಗ್ರಾಮಗಳಲ್ಲಿ ಜನ– ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು’ ಎಂದು ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಕೆ.ಎಲ್.ಮಧು ತಿಳಿಸಿದರು.
ಕಾರ್ಯಾಚರಣೆಯಲ್ಲಿ ವನ್ಯಜೀವಿ ಪಶುವೈದ್ಯ ರಮೇಶ್, ಎಸಿಎಫ್ ರಂಗಸ್ವಾಮಿ, ಅಂತರಸಂತೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಎಸ್.ಸ್.ಸಿದ್ದರಾಜು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.