ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕಾಲದಲ್ಲಿ ಈಗಿನ ಅನುವಾದದ ಕಲ್ಪನೆ ಇರಲಿಲ್ಲ: ಚಂದ್ರಶೇಖರ ಕಂಬಾರ

Last Updated 3 ಅಕ್ಟೋಬರ್ 2021, 7:39 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಕಾಲದಲ್ಲಿ ಈಗಿನ ಅನುವಾದದ ಕಲ್ಪನೆ ಇರಲಿಲ್ಲ. ಅದು ಅನುಕೃತಿಯ ಕಾಲ. ವ್ಯಾಸರ ಮಹಾಭಾರತವನ್ನು ಪಂಪ, ಕುಮಾರವ್ಯಾಸರೂ ಬರೆದಿದ್ದಾರೆ. ಲೆಕ್ಕವಿಲ್ಲದಷ್ಟು ರಾಮಾಯಣಗಳೂ ರಚಿತವಾಗಿವೆ. ಅಷ್ಟೂ ರಾಮಾಯಣಗಳಿಗೆ ಅವರವರೇ ಕರ್ತೃಗಳು. ಒಬ್ಬೊಬ್ಬರೂ ಒಬ್ಬೊಬ್ಬರನ್ನು ಕಥಾ ನಾಯಕರನ್ನಾಗಿ ಚಿತ್ರಿಸಿದ್ದಾರೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ತಿಳಿಸಿದರು.

ನಾಗತಿಹಳ್ಳಿ ಚಂದ್ರಶೇಖರ ಅವರ ಹಿಂದಿ ಅನುವಾದಿತ ‘ಯಾಯಾವರ್‌ ಪಂಛಿ ಕಾ ಗೀತ್‌’ (ವಲಸೆ ಹಕ್ಕಿಯ ಹಾಡು) ಹಾಗೂ ‘ಆವೋ ‍ಪ್ರಿಯೆ ಮಧುಚಂದ್ರ್‌ ಕೇಲಿಯೇ’ (ಬಾ ನಲ್ಲೆ ಮಧುಚಂದ್ರಕೆ) ಕಾದಂಬರಿಗಳನ್ನು ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು.

‘ಬ್ರಿಟಿಷರು ಭಾರತಕ್ಕೆ ಕಾಲಿಟ್ಟ ಬಳಿಕ ಯಥಾವತ್‌ ಅನುವಾದ ಮಾಡುವ ಸಂಸ್ಕೃತಿ ಜಾರಿಗೊಂಡಿತು. ಪಂಚತಂತ್ರ ಕಥೆಗಳನ್ನು ಅವರ ಸಂಸ್ಕೃತಿಗೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಸಂಸ್ಕೃತ ಸೇರಿದಂತೆ ಭಾರತದ ಯಾವ ಭಾಷೆಯಲ್ಲೂ ಜ್ಞಾನ ಅಡಕವಾಗಿಲ್ಲ ಎಂದು ಹೇಳುತ್ತಿದ್ದರು. ನಮ್ಮಲ್ಲಿ ಕೀಳರಿಮೆಯನ್ನು ಗಾಢವಾಗಿ ಬಿತ್ತಿದ್ದರು. ಇದರಿಂದಾಗಿ ನಮ್ಮಲ್ಲಿ ದಾರಿದ್ರ್ಯ ನಿರ್ಮಾಣವಾಗಿತ್ತು’ ಎಂದರು.

‘ಆಗ 118 ಭಾಷೆಗಳಿದ್ದವು. ಅವರೆಲ್ಲರ ಜೊತೆ ಮಹಾತ್ಮ ಗಾಂಧೀಜಿ ಅವರು ಸಂವಹನ ಸಾಧಿಸಲು ಎಷ್ಟು ಕಷ್ಟ ಪಟ್ಟಿದ್ದರು ಎಂಬುದನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಹಳ್ಳಿಗರಲ್ಲಿ ಸ್ವಂತಿಕೆ ಬಿತ್ತುವ ಕೆಲಸವನ್ನು ಗಾಂಧೀಜಿ ಮಾಡಿದ್ದರು. ಎಲ್ಲಾ ಭಾಷೆಗಳ ಪುಸ್ತಕಗಳು ಎಲ್ಲಾ ಭಾಷೆಯ ಜನರಿಗೆ ತಲುಪಬೇಕು. ಹೀಗಾಗಿನಾವು ಅನುವಾದಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ’ ಎಂದು ಹೇಳಿದರು.

ಕಾದಂಬರಿಗಳ ಲೇಖಕ ನಾಗತಿಹಳ್ಳಿ ಚಂದ್ರಶೇಖರ, ‘ಈ ಕಾದಂಬರಿಗಳನ್ನು ಹಿಂದಿಗೆ ಭಾಷಾಂತರಿಸಬೇಕು ಎಂಬ ಆಲೋಚನೆ ಮೂಡಿರಲಿಲ್ಲ. ನಮ್ಮ ಕೃತಿಗಳು ಸದಭಿರುಚಿಯಿಂದ ಕೂಡಿರಬೇಕು ಎಂಬುದಷ್ಟೇ ನನ್ನ ಬಯಕೆ. ಕೃತಿಯು ಜನಪ್ರಿಯವಾಗುವಂತೆ ಬರೆಯುವುದು ಅಷ್ಟು ಸುಲಭವಲ್ಲ. ಜನಪ್ರಿಯತೆಯು ಸದಾ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹದ್ದಾಗಿರಬೇಕು. ಯಾವ ಲೇಖಕರೂ ಅಮರತ್ವದ ಬಯಕೆಯಿಂದ ಬರೆಯಬಾರದು’ ಎಂದರು.

ಗುಬ್ಬಿಗೂಡು ರಮೇಶ್‌ ಮತ್ತು ಡಾ.ದೊರೇಶ್‌ ಪುಸ್ತಕಗಳ ಪರಿಚಯ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT