ಭಾನುವಾರ, ಸೆಪ್ಟೆಂಬರ್ 19, 2021
24 °C

ಹೈಕಮಾಂಡ್, ಲೋಕಮಾಂಡ್ ಹಂಗು ಮೀರಿ ಕೆಲಸಮಾಡಿ: ಸಿಎಂ ಬೊಮ್ಮಾಯಿಗೆ ನಾಗತಿಹಳ್ಳಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹೈಕಮಾಂಡ್, ಲೋಕಮಾಂಡ್ ಹಂಗು ಮೀರಿ ಅದ್ಭುತ ಕೆಲಸಮಾಡಿ. ಚಮಚೆಗಳನ್ನು ದೂರವಿಡಿ...’ ಹೀಗೆಂದು ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ. 

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ರಾಜ್ಯದ ಹೊಸ ಮುಖ್ಯಮಂತ್ರಿಗೆ ಶುಕ್ರವಾರ ಟ್ವೀಟ್‌ ಮೂಲಕ ಶುಭ ಕೋರಿರುವ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಅದರ ಜೊತೆಗೆ ಕೆಲ ಸಲಹೆಗಳನ್ನೂ ನೀಡಿದ್ದಾರೆ. 

ಏನಿದೆ ನಾಗತಿಹಳ್ಳಿ ಟ್ವೀಟ್‌ನಲ್ಲಿ? 

‘ಪ್ರೀತಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮನುಷ್ಯ ಪ್ರೀತಿ; ಸಾಹಿತ್ಯ ಪ್ರೀತಿ; ಪ್ರಾಣಿ ಪ್ರೀತಿ ಉಳ್ಳ ನೀವು ನನ್ನಂಥವರಿಗೆ ಆಸೆ ಹುಟ್ಟಿಸಿದ್ದೀರಿ. ಹೈಕಮಾಂಡ್, ಲೋಕಮ್ಯಾಂಡ್ ಹಂಗು ಮೀರಿ ಅದ್ಭುತ ಕೆಲಸಮಾಡಿ. ಚಮಚೆಗಳನ್ನು ದೂರವಿಡಿ. ಸಮಾಜದ ಕಟ್ಟ ಕಡೆಯ ಜೀವದ ಬಗ್ಗೆ  ಕಾಳಜಿ ಇರಲಿ. ಅಧಿಕಾರವು  ಅಲ್ಪಕಾಲೀನ. ಒಳಿತಾಗಲಿ,’ ಎಂದು ಅವರು ಹಾರೈಸಿದ್ದಾರೆ. 

ತಾಯಿಗಾಗಿ ಪುಸ್ತಕ ಹೊರತರಲಿರುವ ಬೊಮ್ಮಾಯಿ 

ಬೊಮ್ಮಾಯಿ ಅವರು ಸಾಹಿತ್ಯ ಪ್ರೇಮಿಯೂ ಆಗಿದ್ದು, ತಮ್ಮ ತಾಯಿಗಾಗಿ ‘ಅವ್ವ’ ಎಂಬ ಪುಸ್ತಕ ಬರೆಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು. ಬೊಮ್ಮಾಯಿ ಅದನ್ನು ರೀಟ್ವೀಟ್‌ ಮಾಡಿಕೊಂಡಿದ್ದರು.  

ಇದನ್ನೂ ಓದಿ: 'ಅವ್ವ' ನೆನಪಿನಲ್ಲಿ ಪುಸ್ತಕ ಪ್ರಕಟಿಸುವ ಬೊಮ್ಮಾಯಿ: ಬಿ.ಎಲ್‌.ಸಂತೋಷ್ ಟ್ವೀಟ್‌

ನಾಯಿ ಸತ್ತಾಗ ಕಣ್ಣೀರು ಹಾಕಿದ್ದರು 

ಬೊಮ್ಮಾಯಿ ಅವರು ತಮ್ಮ ಮನೆಯಲ್ಲಿ ಸನ್ನಿ ಹೆಸರಿನ ನಾಯಿಯನ್ನು ಸಾಕಿದ್ದರು. ಅದು ಸತ್ತಾಗ ಕಣ್ಣೀರು ಹಾಕಿದ್ದ ಬೊಮ್ಮಾಯಿ ಅವರು, ಅದರ ಕುರಿತು ಭಾವುಕ ಟ್ವೀಟ್‌ ಮಾಡಿದ್ದರು. ‘ನಮ್ಮ ಮನೆಯ ಮುದ್ದಿನ ನಾಯಿ "ಸನ್ನಿ" ವಯೋಸಹಜವಾಗಿ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿತು. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು,‘ ಎಂದು ಬರೆದುಕೊಳ್ಳುವ ಮೂಲಕ ಅವರು ಪ್ರಾಣಿಗಳ ಮೇಲಿನ ತಮ್ಮ ಪ್ರೀತಿ ಎಷ್ಟು ತೀವ್ರವಾದದ್ದು  ಎಂಬುದನ್ನು ಪ್ರದರ್ಶಿಸಿದ್ದರು. 

ಇದನ್ನೂ ಓದಿ: ಗೃಹ ಸಚಿವ ಬೊಮ್ಮಾಯಿ ಕುಟುಂಬದಿಂದ 'ಸನ್ನಿ'ಗೆ ವಿದಾಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು