ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ–ಉಬರ್‌ಗೆ ‘ನಮ್ಮ ಯಾತ್ರಿ’ ಸಡ್ಡು?

ನವೆಂಬರ್ 1ರಿಂದ ಅಧಿಕೃತ ಸೇವೆ: 10 ಸಾವಿರಕ್ಕೂ ಹೆಚ್ಚು ಡೌನ್‌ಲೋಡ್
Last Updated 19 ಅಕ್ಟೋಬರ್ 2022, 21:46 IST
ಅಕ್ಷರ ಗಾತ್ರ

ಬೆಂಗಳೂರು: ಓಲಾ, ಉಬರ್, ರ್‍ಯಾಪಿಡೊ ಆಟೊರಿಕ್ಷಾ ಸೇವೆ ದುಬಾರಿ ಬಗ್ಗೆ ವಿವಾದದ ಬೆನ್ನಲ್ಲೇ, ಆಟೊ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ‘ನಮ್ಮ ಯಾತ್ರಿ’ ಆ್ಯಪ್ ಆಧಾರಿತ ಸೇವೆ ಮುನ್ನೆಲೆಗೆ ಬಂದಿದೆ. ನವೆಂಬರ್ 1ರಿಂದ ಅಧಿಕೃತ ಸೇವೆ ಆರಂಭವಾಗಲಿದ್ದರೂ, ಅಗ್ರಿಗೇಟರ್ ಆ್ಯಪ್ ಕಂಪನಿಗಳಿಗೆ ಸಡ್ಡು ಹೊಡೆಯಲು ಸಜ್ಜಾಗಿದೆ.

ಆಟೊ ಚಾಲಕರ ಒಕ್ಕೂಟವು ಖಾಸಗಿ ಸಂಸ್ಥೆಯಿಂದ ತಾಂತ್ರಿಕ ನೆರವು ಪಡೆದು ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಜಿಲ್ಲಾಡಳಿತ ನಿಗದಿ ಮಾಡಿರುವ ದರದಲ್ಲೇ(ಮೊದಲ ಎರಡು ಕಿಲೋ ಮೀಟರ್‌ಗೆ ₹30 ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ ₹15) ಆಟೊರಿಕ್ಷಾಗಳನ್ನು ಚಾಲನೆ ಮಾಡಲು ಈ ಒಕ್ಕೂಟ ಮುಂದಾಗಿದೆ. ಆಟೊ ನಿಲ್ದಾಣದಿಂದ ಮನೆ ತನಕ ರಿಕ್ಷಾಗಳನ್ನು ತಂದು ಕರೆದೊಯ್ಯುವುದರಿಂದ ಪಿಕಪ್ ಶುಲ್ಕವಾಗಿ ₹10 ಹೆಚ್ಚುವರಿ ಪಡೆಯಲು ನಿರ್ಧರಿಸಿದೆ. ಈ ಆ್ಯಪ್‌ನಲ್ಲಿ ಆಟೊರಿಕ್ಷಾ ಹೊರತಾಗಿ ಬೇರೆ ವಾಹನಗಳ ಸೇವೆ ಇರುವುದಿಲ್ಲ.

ಓಲಾ, ಉಬರ್, ರ್‍ಯಾಪಿಡೊ ಸೇರಿ ಅಗ್ರಿಗೇಟರ್ ಕಂಪನಿಗಳ ಆಟೊ ಸೇವೆಗೂ ದುಬಾರಿ ದರ ವಿಧಿಸುತ್ತಿದ್ದವು. ಜಿಎಸ್‌ಟಿ ಜತೆಗೆ ಕನ್ಸೀನಿಯನ್ಸ್‌ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದವು. ಇದರಿಂದ ಬೇಸತ್ತಿದ್ದ ಪ್ರಯಾಣಿಕರು ಮತ್ತು ಆಟೊ ಚಾಲಕರು ಈಗ ‘ನಮ್ಮ ಯಾತ್ರಿ’ ಕಡೆಗೆ ಮುಖ ಮಾಡಿದ್ದಾರೆ. ಕಳೆದ ವಾರ 100 ಮಂದಿಯಷ್ಟೇ ಆ್ಯಪ್ ಡೌನ್‌ಲೋಡ್ ಮಾಡಿದ್ದರು. ಈಗ 10 ಸಾವಿರಕ್ಕೂ ಹೆಚ್ಚು ಜನ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

‘ಪ್ರಯಾಣಿಕರು ತಮ್ಮ ಪ್ರಯಾಣ ರದ್ದುಗೊಳಿಸಿದರೆ ₹50 ದಂಡ ವಸೂಲಿಯನ್ನೂ ಅಗ್ರಿಗೇಟರ್ ಕಂಪನಿಗಳು ವಿಧಿಸುತ್ತಿದ್ದವು. ಈ ವ್ಯವಸ್ಥೆಯನ್ನು ‘ನಮ್ಮ ಯಾತ್ರಿ’ ಹೊಂದಿರುವುದಿಲ್ಲ. ಪ್ರಯಾಣ ಆರಂಭಿಸುವ ಸ್ಥಳಕ್ಕೆ ಸಮೀಪದಲ್ಲಿರುವ ನಾಲ್ಕೈದು ಚಾಲಕರ ವಿವರ, ಅವರು ನಮೂದಿಸಿರುವ ದರಗಳ ಪಟ್ಟಿ ಪ್ರಯಾಣಿಕರಿಗೆ ಲಭ್ಯವಾಗುತ್ತದೆ. ಆದ್ದರಿಂದ ಪ್ರಯಾಣಿಕರೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ’ ಎಂದು ಒಕ್ಕೂಟದ ಕಾರ್ಯದರ್ಶಿ ರುದ್ರಮೂರ್ತಿ ಹೇಳುತ್ತಾರೆ.

ನವೆಂಬರ್ 1ರಿಂದ ‘ನಮ್ಮ ಯಾತ್ರಿ’ ಸೇವೆ ಅಧಿಕೃತವಾಗಿ ಆರಂಭವಾಗಲಿದೆ. ಚಾಲಕರಿಗೆ ವಿಮಾ ಸೌಲಭ್ಯ ಒದಗಿಸುವ ಆಲೋಚನೆ ಇದೆ. ಹಲವು ವಿಶೇಷಗಳನ್ನು ಪ್ರಯಾಣಿಕರಿಗೆ ದೊರಕಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT