ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ: ತಜ್ಞರೊಂದಿಗೆ ಚರ್ಚಿಸಿ: ಬರಗೂರು ರಾಮಚಂದ್ರಪ್ಪ

Last Updated 11 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಕುರಿತಂತೆ ಇರುವ ತೊಡಕುಗಳ ನಿವಾರಣೆಗಾಗಿ ಕಾನೂನು ಮತ್ತು ಶಿಕ್ಷಣ ತಜ್ಞರು, ಅಧ್ಯಾಪಕ ಪ್ರತಿನಿಧಿಗಳು ಹಾಗೂ ವಿಧಾನ ಮಂಡಲದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ‘ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಇದೇ 7ಕ್ಕೆ ಆದೇಶ ಹೊರಡಿಸಿದೆ. ಪದವಿ ತರಗತಿಗಳಲ್ಲಿ ಒಂದು ವರ್ಷಕ್ಕೆ ಮಿತಿಗೊಳಿಸಿದ್ದ ಭಾಷಾ ಬೋಧನೆಯ ಪ್ರಸ್ತಾವನೆಯನ್ನು ಬದಲಾಯಿಸಿ, ಎರಡು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಕನ್ನಡ ಭಾಷಾ ವಿಷಯವನ್ನು ಕಡ್ಡಾಯಗೊಳಿಸಿರುವ ಈ ಆದೇಶದ ಕ್ರಮವನ್ನು ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ.

‘ಭಾಷಾ ಅಲ್ಪಸಂಖ್ಯಾತರಿಗೆ ಅವರ ಮಾತೃಭಾಷೆಯಲ್ಲಿ ಅಭ್ಯಾಸಕ್ಕೆ ಅವಕಾಶವಿಲ್ಲದೆ ಇರುವುದರಿಂದ ಎದುರಾಗುವ ಕಾನೂನು ತೊಡಕುಗಳನ್ನೂ ಗಮನಿಸಬೇಕು. ಗೋಕಾಕ್ ವರದಿಗೆ ಅನುಗುಣವಾಗಿ 1982ರ ಜು.20 ರಂದು ಆದೇಶ ಹೊರಡಿಸಿದ್ದ ಕರ್ನಾಟಕ ಸರ್ಕಾರ, ಪ್ರೌಢಶಾಲೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಕಡ್ಡಾಯ ಮಾಡಿತ್ತು. ಆದರೆ, ಈ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತ್ತು. ಹಾಗಾಗಿ, ಕನ್ನಡ ಕಡ್ಡಾಯಕ್ಕೆ ಎದುರಾಗುವ ಕಾನೂನಾತ್ಮಕ ತೊಡಕುಗಳನ್ನು ಈಗಲೇ ನಿವಾರಣೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ ಶಿಕ್ಷಣ ನೀತಿಯ ಅನುಷ್ಠಾನದ ಆದೇಶವು ಉನ್ನತ ಶಿಕ್ಷಣ ಇಲಾಖೆಯಡಿಯ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಿಗೆ ಮಾತ್ರ ಅನ್ವಯಿಸುತ್ತಿದೆ. ಡೀಮ್ಡ್ ಮತ್ತು ಖಾಸಗಿ ವಿದ್ಯಾಲಯಗಳು ತಮ್ಮದೇ ಆದ ದಾರಿ ಹಿಡಿಯಲು ಅವಕಾಶವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಸ್ವಾಯತ್ತ ಕಾಲೇಜುಗಳು ಸರ್ಕಾರ ಸೂಚಿಸಿದ ಪಠ್ಯಕ್ರಮದ ಶೇ 30 ರಷ್ಟನ್ನು ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿವೆ. ಹೀಗಾಗಿ, ಕನ್ನಡ ಕಡ್ಡಾಯ ಮತ್ತು ಎರಡು ವರ್ಷದ ಬೋಧನಾವಧಿಯನ್ನು ಉಲ್ಲಂಘಿಸುವ ಸಾಧ್ಯತೆ ಹೆಚ್ಚಿದೆ. ಇವರನ್ನು ನಿಯಂತ್ರಿಸಲು ಸರ್ಕಾರಿ ಆದೇಶ ಸಾಕಾಗದಿದ್ದರೆ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು,ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ಎಲ್ಲ ತೊಡಕುಗಳ ನಿವಾರಣೆಗೆ ಚರ್ಚೆ ನಡೆಸಿ, ನಿರ್ಣಯ ತಗೆದುಕೊಳ್ಳುವುದು ಸೂಕ್ತ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT