ಶನಿವಾರ, ನವೆಂಬರ್ 28, 2020
26 °C

ಮುದ್ರಣ ಮಾಧ್ಯಮ: ವಿಶ್ವಾಸವೇ ಜೀವಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ದಿನ ಪತ್ರಿಕೆ ಓದುತ್ತಿರುವ ಜನರು

ಟಿಆರ್‌ಪಿ ತಿರುಚಿದ ಆರೋಪ, ಚರ್ಚಾ ಕಾರ್ಯಕ್ರಮದಲ್ಲಿ ಹೊಡೆ ದಾಟ, ವರದಿಗಾರರು ಸಾರ್ವಜನಿಕರ ಸಮ್ಮುಖದಲ್ಲೇ ಜಗಳವಾಡಿಕೊಳ್ಳುವುದು, ಏರುದನಿಯಲ್ಲಿ (ಕೆಲವೊಮ್ಮೆ ಚರ್ಚೆಯಲ್ಲಿ ಪಾಲ್ಗೊಂಡವರನ್ನು ಅವಮಾನಿಸುವಂತೆ) ಮಾತನಾಡುವ ಆ್ಯಂಕರ್‌ಗಳು... ‘ಮಾಧ್ಯಮ’ ಕ್ಷೇತ್ರದ ಇತ್ತೀಚಿನ ಇಂಥ ಬೆಳವಣಿಗೆಗಳು, ‘ಭಾರತೀಯ ಮಾಧ್ಯಮ’ಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿವೆ.

ಇದರ ಮಧ್ಯದಲ್ಲೇ ಸಮಾಧಾನ ಪಡಬಹುದಾದಂಥ ಒಂದು ಸುದ್ದಿಯೂ ಇದೆ. ಅದೆಂದರೆ, ಭಾರತದಲ್ಲಿ ಈಗಲೂ ಶೇ 65ಕ್ಕೂ ಹೆಚ್ಚು ಜನರು ಪತ್ರಿಕೆಗಳನ್ನೇ ತಮ್ಮ ಸುದ್ದಿಯ ಮೂಲ ಎಂದು ಹೇಳಿರುವುದು ಮತ್ತು ‘ವಿಶ್ವಾಸಾರ್ಹ ಸುದ್ದಿಗಾಗಿ ನಾವು ಈಗಲೂ ಪತ್ರಿಕೆಗಳನ್ನೇ ಅವಲಂಬಿಸುತ್ತೇವೆ’ ಎಂದಿರುವುದು. ಅಂದರೆ, ಡಿಜಿಟಲ್‌ ಮಾಧ್ಯಮಗಳ ಪ್ರವಾಹ ಮತ್ತು ನೂರಾರು ಸುದ್ದಿ ವಾಹಿನಿಗಳ ಮಧ್ಯದಲ್ಲೂ ಭಾರತದಲ್ಲಿ ಪತ್ರಿಕೆಗಳೇ ಬಹುಪಾಲು ಜನರ ವಿಶ್ವಾಸಾರ್ಹ ಸುದ್ದಿ ಮೂಲಗಳಾಗಿವೆ.

ನಮ್ಮ ದೇಶದಲ್ಲಿ ಪತ್ರಿಕೆಗಳ ಪ್ರಸಾರ ಕಡಿಮೆಯಾಗಿಲ್ಲ. ಬದಲಿಗೆ, ಈಚಿನ ಎರಡು ದಶಕಗಳಲ್ಲಿ ಪತ್ರಿಕೆಗಳು, ವಿಶೇಷ ವಾಗಿ ಪ್ರಾದೇಶಿಕ ಭಾಷಾ ಪತ್ರಿಕೆಗಳು ಪ್ರಸರಣ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ ಎಂದು ಸುದ್ದಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಹೇಳಿದೆ.

ಪ್ರಜಾವಾಣಿ ಓದಿ ಬಹುಮಾನ ಗೆಲ್ಲಿ!: ಪ್ರಜಾವಾಣಿ ನ್ಯೂಸ್‌ ಕ್ವಿಜ್‌: ಗೆಲ್ಲಲು ಇವೆ ಹೇರಳ ಬಹುಮಾನ

ಭಾರತದಲ್ಲಿ ಸುದ್ದಿ ವಾಹಿನಿಗಳು ಅಥವಾ ಸಾಮಾಜಿಕ ಮಾಧ್ಯಮಗಳ ಕೊರತೆಯಿಲ್ಲ. ನೂರಾರು ಸುದ್ದಿ ವಾಹಿನಿಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷವೂ ಒಂದಷ್ಟು ಹೊಸ ವಾಹಿನಿಗಳು ಸೇರ್ಪಡೆಯಾಗುತ್ತಲೇ ಇವೆ. ಹೀಗಿದ್ದರೂ ಪತ್ರಿಕೆಗಳ ಪ್ರಸರಣ ಇಳಿಕೆಯಾಗದಿರಲು ಮೂರು ಪ್ರಮುಖ ಕಾರಣಗಳನ್ನು ವಿಶ್ಲೇಷಕರು ಗುರುತಿಸುತ್ತಾರೆ.

1. ಅಗ್ಗದ ದರ: ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಅತ್ಯಂತ ಕಡಿಮೆ ದರಕ್ಕೆ ಪತ್ರಿಕೆಗಳು ಓದುಗರ ಕೈಸೇರುತ್ತವೆ. ಅನೇಕ ರಾಷ್ಟ್ರಗಳಲ್ಲಿ ಜನರು ಪತ್ರಿಕೆಗಳನ್ನು ಓದಲು ಬಯಸುತ್ತಾರಾದರೂ, ಅವು ದುಬಾರಿ ಯಾಗಿರುವು ದರಿಂದ ಖರೀದಿಸುವ ಬದಲು, ಗ್ರಂಥಾಲಯ ಅಥವಾ ಉಚಿತವಾಗಿ ಲಭಿಸುವ ಸ್ಥಳಗಳಿಗೆ ಹೋಗಿ ಓದುತ್ತಾರೆ. ಅಮೆರಿಕದ ಕೆಲವು ಪತ್ರಿಕೆಗಳ ಒಂದು ಸಂಚಿಕೆಯ ದರವು ಭಾರತದ ಕೆಲವು ಪತ್ರಿಕೆಗಳ ಒಂದು ತಿಂಗಳ ಬೆಲೆಗೆ ಸಮನಾಗಿರುತ್ತದೆ. ಇಲ್ಲಿ ₹3ರಿಂದ ₹10ರ ಬೆಲೆಗೆ ಪತ್ರಿಕೆ ಲಭ್ಯ. ಇಂಥ ಸೌಲಭ್ಯ ಇತರ ರಾಷ್ಟ್ರಗಳಲ್ಲಿ ಇಲ್ಲ ಎನ್ನುತ್ತಾರೆ ಅವರು.

2. ಓದುವ ಹವ್ಯಾಸ: ಮುಂಜಾನೆ ಚಹಾದ ಜತೆಗೆ ಕೈಯಲ್ಲಿ ಪತ್ರಿಕೆ ಹಿಡಿದು ಓದುವ ಹವ್ಯಾಸ ಭಾರತೀಯರಿಗೆ ಒಂದು ಚಟದಂತೆ ಅಂಟಿಕೊಂಡಿದೆ. ಯುವ ಸಮುದಾಯವು ಡಿಜಿಟಲ್‌ ಮಾಧ್ಯಮದತ್ತ ಹೊರಳಿದ್ದರೂ ವಿಶ್ವಾಸಾರ್ಹತೆಯ ವಿಚಾರ ಬಂದಾಗ, ಪತ್ರಿಕೆ ಗಳತ್ತ ಮುಖಮಾಡುತ್ತದೆ. ಡಿಜಿಟಲ್‌ ಮಾಧ್ಯಮದಲ್ಲಿ ಹರಿದಾಡುತ್ತಿರುವ ತಿರುಚಿದ ಮತ್ತು ಸುಳ್ಳು ಸುದ್ದಿಗಳು ಜನರನ್ನು ಪತ್ರಿಕೆಗಳತ್ತ ಹೊರಳುವಂತೆ ಮಾಡಿವೆ. ಇದರ ಜತೆಗೆ, ಎಷ್ಟೇ ವಾಹಿನಿಗಳು ಮತ್ತು ಸಾಮಾಜಿಕ ತಾಣಗಳಿದ್ದರೂ, ಸ್ಥಳೀಯ ಸುದ್ದಿಗಳಿಗಾಗಿ ಜನರು ಪತ್ರಿಕೆಗಳನ್ನೇ ಅವಲಂಬಿಸಬೇಕಾದ ಸ್ಥಿತಿ ನಮ್ಮಲ್ಲಿ ಇದೆ.

3. ಬಲಿಷ್ಠ ವಿತರಣಾ ಜಾಲ: ಮುಂಜಾನೆ ಸೂರ್ಯೋದಯದ ವೇಳೆಗೆ ಓದುಗರ ಮನೆ ಬಾಗಿಲಿಗೇ ಪತ್ರಿಕೆಗಳನ್ನು ತಲುಪಿ ಸುವ ವಿಶಿಷ್ಟವಾದ ವಿತರಣಾ ಜಾಲವು ಭಾರತೀಯ ಪತ್ರಿಕೆಗಳ ಶಕ್ತಿ ಎಂಬುದು ಬಹುತೇಕ ವಿಶ್ಲೇಷಕರ ಅಭಿಪ್ರಾಯ. ಇಷ್ಟೊಂದು ಕಡಿಮೆ ದರದ ವಸ್ತುವನ್ನು ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಬೇರೆಲ್ಲೂ ಇರಲಾರದು ಎನ್ನುತ್ತಾರೆ.

ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿ ದಂಥ ಇತ್ತೀಚಿನ ಸಮೀಕ್ಷೆಯೊಂದು ಅತ್ಯಂತ ಮಹತ್ವದ ಕೆಲವು ಅಂಶಗಳನ್ನು ಬಹಿರಂಗಪಡಿಸಿದೆ. ಕೊರೊನಾ ಕಾಲ ದಲ್ಲಿ ಪತ್ರಿಕೆಗಳು ಹಲವು ಸಮಸ್ಯೆಗಳನ್ನೆದುರಿಸಿವೆ. ಓದುಗರ ಮನೆಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುವುದು ದೊಡ್ಡ ಸವಾಲಾಗಿತ್ತು. ಜತೆಗೆ, ಪತ್ರಿಕೆಗಳ ಮೂಲ ಕವೂ ವೈರಸ್‌ ಪ್ರಸರಣವಾಗುತ್ತದೆ ಎಂಬ (ಆಧಾರರಹಿತ) ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿತ್ತು. ಇಂಥ ಸ್ಥಿತಿಯ ಹೊರತಾಗಿಯೂ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಓದುಗರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದೆ.

ಸಾಮಾಜಿಕ ಕಳಕಳಿಯ ಮಾಧ್ಯಮ

ಸಾಮಾಜಿಕ ಕಾಳಜಿ ಹೊಂದಿರುವ, ಜನರ ಸಂಕಷ್ಟಗಳನ್ನು ಹೃದಯಸ್ಪರ್ಶಿಯಾಗಿ ಮತ್ತು ನಿಷ್ಪಕ್ಷಪಾತವಾಗಿ ಬಿಂಬಿಸುವ ಯಾವುದಾದರೂ ಸಾಕ್ಷ್ಯಚಿತ್ರವನ್ನು ನೀವು ಇತ್ತೀಚೆಗೆ ನೋಡಿದ್ದಿದ್ದರೆ ಒಮ್ಮೆ ನೆನಪಿಸಿಕೊಳ್ಳಿ. ಅದನ್ನು ಖಂಡಿತವಾಗಿಯೂ ಬಿಬಿಸಿ, ನ್ಯಾಷನಲ್‌ ಜಿಯಾಗ್ರಫಿಕ್‌ ಅಥವಾ ಅಂಥ ವಿದೇಶಿ ವಾಹಿನಿಯೊಂದರಲ್ಲಿ ನೋಡಿರುತ್ತೀರಿ ಅಲ್ಲವೇ? ಏಕೆ ಹೀಗೆ?

ನಮ್ಮಲ್ಲೂ ನೂರಾರು ಸುದ್ದಿ ವಾಹಿನಿಗಳಿವೆ. ಸಮಸ್ಯೆಗಳಿಗೂ ಬರವಿಲ್ಲ. ಆದರೆ ಅವುಗಳೇಕೆ ಇಂಥ ಸಾಮಾಜಿಕ ಕಾಳಜಿಯ, ಸಮಸ್ಯೆಯ ಎಲ್ಲಾ ಮಜಲು ಗಳನ್ನೂ ವಿಶ್ಲೇಷಿಸುವ, ಜಗತ್ತಿನ ಗಮನವನ್ನು ಸೆಳೆಯಬಲ್ಲಂಥ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿಲ್ಲ?

ಮಾಧ್ಯಮ ಕ್ಷೇತ್ರದ ಹಿರಿಯರು ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ. ಅದರಲ್ಲಿ ಮೊದಲನೆಯದ್ದು ‘ಟಿಆರ್‌ಪಿ’ ಮತ್ತು ಅದನ್ನು ಅನುಸರಿಸಿ ಬರುವ ಹಣ.

‘ಭಾರತೀಯ ಸುದ್ದಿ ವಾಹಿನಿಗಳು ಹಣದ ಬೆನ್ನು ಹತ್ತಿವೆ. ಹಣ ಬರುವುದು ಜಾಹೀರಾತುಗಳಿಂದ. ಹೆಚ್ಚು ಹೆಚ್ಚು ಜಾಹೀರಾತು ಬರಬೇಕಾದರೆ, ಹೆಚ್ಚು ಟಿಆರ್‌ಪಿ ಹೊಂದಿರುವುದು ಅಗತ್ಯ. ಅದಕ್ಕಾಗಿ ಸುದ್ದಿ ವಾಹಿನಿಗಳು ಹೆಚ್ಚು ಟಿಆರ್‌ಪಿ ಬರುವಂಥ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುತ್ತವೆ’ ಎನ್ನುತ್ತಾರೆ ಹಿರಿಯ ಪತ್ರಕರ್ತರು.

ಒಂದು ಡಾಕ್ಯುಮೆಂಟರಿ ಮಾಡಬೇಕಾದರೆ ತುಂಬ ಅಧ್ಯಯನ ಮಾಡಬೇಕು, ದಿನಗಟ್ಟಲೆ ಅಲೆದಾಡಬೇಕು. ತಿಂಗಳುಗಳ ಕಾಲ ಕೆಲಸ ಮಾಡಬೇಕು, ಖರ್ಚೂ ಹೆಚ್ಚು. ಅದರಿಂದ ಟಿಆರ್‌ಪಿ ಬರುತ್ತದೆಂಬ ವಿಶ್ವಾಸ ಇಲ್ಲ. ಆದರೆ, ಯಾವುದೋ ಒಂದು ಸಣ್ಣ ವಿಚಾರವನ್ನು ಇಟ್ಟುಕೊಂಡು, ಪರ– ವಿರೋಧವಾಗಿ ಮಾತನಾಡುವ ಒಂದಷ್ಟು ಮಂದಿಯನ್ನು ಸ್ಟುಡಿಯೊಗೆ ಆಹ್ವಾನಿಸಿ ಚರ್ಚೆ ಮಾಡಿದರೆ, ಏರುಧ್ವನಿಯಲ್ಲಿ ಮಾತನಾಡಿದರೆ ಟಿಆರ್‌ಪಿ ಬರುತ್ತದೆ. ಚರ್ಚೆಗೆ ಬಂದವರು ಸ್ಟುಡಿಯೊದಲ್ಲೇ ಕೈಕೈಮಿಲಾಯಿಸಿದರೆ ಅದೂ ಟಿಆರ್‌ಪಿ ಹೆಚ್ಚಲು ಕಾರಣವಾಗುತ್ತದೆ... ವಾಹಿನಿಗಳ ವಿಶ್ವಾಸಾರ್ಹತೆ ಕಡಿಮೆಯಾಗಲು ಈ ಮನೋಭಾವ ಕಾರಣ ಎನ್ನುತ್ತಾರೆ ವಿಶ್ಲೇಷಕರು.

ಇದಕ್ಕಿಂತ ಹೆಚ್ಚಾಗಿ, ಇಂಥ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಮಾಧ್ಯಮಗಳನ್ನು ಸಂದೇಹದಿಂದ ನೋಡು ವಂತೆ ಮಾಡಿದೆ. ಜಾಹೀರಾತು ಆದಾಯವು ಪತ್ರಿಕೆಗಳಿಗೂ ಆಗತ್ಯ. ಈಚಿನ ಎರಡು ದಶಕಗಳಲ್ಲಿ ಪತ್ರಿಕೆಗಳ ಆದ್ಯತೆಗಳು ಸಹ ಸ್ವಲ್ಪಮಟ್ಟಿಗೆ ಬದಲಾಗಿವೆ. ಆದರೆ, ಹೆಚ್ಚಿನ ಪತ್ರಿಕೆಗಳು ಈಗಲೂ ಜನರ ನೋವು– ನಲಿವುಗಳಿಗೆ ಸ್ಪಂದಿಸುತ್ತಿವೆ ಮತ್ತು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ ಎಂಬುದು ಸಮಾಧಾನದ ವಿಚಾರ ಎಂದು ಹಿರಿಯ ಪತ್ರಕರ್ತರು ಹೇಳುತ್ತಾರೆ.

63% ರಷ್ಟು ಮಂದಿ

‘ಕೊರೊನಾ ಕಾಲದಲ್ಲಿ ಪತ್ರಿಕೆಗಳನ್ನು ಓದುವುದು ನಮ್ಮ ಆದ್ಯತೆಯಾಗಿತ್ತು’ ಎಂದು ಹೇಳಿಕೊಂಡಿದ್ದಾರೆ

75.5% ರಷ್ಟು ಮಂದಿ

ಜಾಗತಿಕ ವಿದ್ಯಮಾನಗಳು ಹಾಗೂ ಯಾವುದೇ ವಿಚಾರದ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಳ್ಳಲು ಪತ್ರಿಕೆಗಳನ್ನೇ ಓದಬೇಕಾಗುತ್ತದೆ ಎಂದು ಹೇಳಿದ್ದಾರೆ.

72.9% ರಷ್ಟು ಮಂದಿ

ಸುದ್ದಿ ವಾಹಿನಿಗಳಲ್ಲಿ ನಡೆಯುವ ಚರ್ಚೆ, ವಿಶ್ಲೇಷಣೆಗಳಿಂದ ಹೆಚ್ಚಿನ ಮಾಹಿತಿ ಲಭಿಸುವುದಿಲ್ಲ. ಅದಕ್ಕಿಂತಲೂ ಹೆಚ್ಚಿನ ಮತ್ತು ಸ್ಪಷ್ಟವಾದ ಮಾಹಿತಿ ಪತ್ರಿಕೆಗಳಿಂದ ಲಭಿಸುತ್ತದೆ ಎಂದು ಹೇಳಿದ್ದಾರೆ

52.2% ರಷ್ಟು ಕ್ರಿಕೆಟ್‌ಪ್ರಿಯರು

ವಿಶೇಷವೆಂದರೆ, ಕ್ರಿಕೆಟ್‌ ಪಂದ್ಯವನ್ನು ಟಿವಿಯ ನೇರ ಪ್ರಸಾರದಲ್ಲಿ ನೋಡಿದ್ದರೂ ಮರುದಿನ ಪತ್ರಿಕೆಯಲ್ಲಿ ಪಂದ್ಯದ ವರದಿಯನ್ನು ಓದುತ್ತೇವೆ ಎಂದು ಹೇಳಿದ್ದಾರೆ. ಇವೆಲ್ಲವೂ ಪತ್ರಿಕೆಗಳ ವಿಶ್ವಾಸಾರ್ಹತೆಯ ಮಾನದಂಡಗಳಾಗಿ ಗೋಚರಿಸುತ್ತಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು