ಸೋಮವಾರ, ಜೂನ್ 14, 2021
22 °C

ಮಹಿಳಾ ಉತ್ತರಾಧಿಕಾರಿ ನೇಮಕಕ್ಕೆ ನಿಡುಮಾಮಿಡಿ ಸ್ವಾಮೀಜಿ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಮ್ಮ ಉತ್ತರಾಧಿಕಾರಿಗಳನ್ನಾಗಿ ಮೂವರನ್ನು ನೇಮಕ ಮಾಡಿ, ಅವರಲ್ಲಿ ಒಬ್ಬ ಮಹಿಳೆಗೂ ಅವಕಾಶ ಕಲ್ಪಿಸಲು ನಿಡುಮಾಮಿಡಿ ಮಠದ ಪೀಠಾಧಿಪತಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಒಲವು ತೋರಿದ್ದಾರೆ.

ಎರಡನೇ ಬಾರಿಗೆ ಕೋವಿಡ್‌ ದೃಢಪಟ್ಟಿರುವ ಬೆನ್ನಲ್ಲೇ, ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿ ಮಠದ ಭಕ್ತರು, ಅನುಯಾಯಿಗಳು ಮತ್ತು ತಮ್ಮ ಅಭಿಮಾನಿಗಳಿಗೆ ಈ ಸಂಬಂಧ ಸೋಮವಾರ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಮಠಕ್ಕೆ ಮೂವರು ಉತ್ತರಾಧಿಕಾರಿಗಳನ್ನು ನೇಮಿಸಲು ಅವಕಾಶ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಓದಿ: 

‘ಶಿವ ಪರಂಪರೆಯ ಮಠಗಳಲ್ಲಿ ಸ್ಥಿರ ಪಟ್ಟ ಹಾಗೂ ಚರ ಪಟ್ಟಗಳು ಇವೆ. ಅವುಗಳ ಜತೆಗೆ ವರ ಪಟ್ಟವನ್ನೂ ಸೇರಿಸಲು ನಿಶ್ಚಯಿಸಿದ್ದೇನೆ. ಸ್ಥಿರ ಪೀಠಾಧ್ಯಕ್ಷರು ಮೂಲ ಪೀಠದ ಉಸ್ತುವಾರಿ ಹಾಗೂ ಶಾಖಾ ಮಠಗಳ ಆಸ್ತಿಗಳನ್ನು ಕಾಪಾಡುವ ಹೊಣೆ ಹೊಂದಿರುತ್ತಾರೆ. ಚರ ಪೀಠಾಧ್ಯಕ್ಷರಿಗೆ ಶಾಖಾ ಮಠಗಳ ದೈನಂದಿನ ಪೂಜೆ, ಶಿಷ್ಯಾರ್ಜನೆ, ಸಾಂಸ್ಕೃತಿಕ ಚಟುವಟಿಕೆಗಳ ಉಸ್ತುವಾರಿ ಇರುತ್ತದೆ. ವರ ಪೀಠಾಧ್ಯಕ್ಷರಿಗೆ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಇರುತ್ತದೆ’ ಎಂದು ಸ್ವಾಮೀಜಿ ಪತ್ರದಲ್ಲಿ ತಿಳಿಸಿದ್ದಾರೆ.

ಸ್ಥಿರ ಪಟ್ಟದವರು ಗೂಳೂರು ಸಂಸ್ಥಾನದಲ್ಲಿ, ಚರ ಪಟ್ಟದವರು ನಿಡುಮಾಮಿಡಿಯಲ್ಲಿರುವ ಮಠದಲ್ಲಿ ಮತ್ತು ವರ ಪಟ್ಟದವರು ಚಿಕ್ಕಬಳ್ಳಾಪುರ ಅಥವಾ ವಿಜಯಪುರದಲ್ಲಿನ ಮಠಗಳಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ ಎಂದು ತಮ್ಮ ಯೋಚನೆಯನ್ನು ಹಂಚಿಕೊಂಡಿದ್ದಾರೆ.

‘ಈ ಮೂರೂ ಪಟ್ಟಗಳಿಗೂ ಕೆಲವರನ್ನು ನಾನು ಮನಸ್ಸಿನಲ್ಲಿ ಇರಿಸಿಕೊಂಡಿದ್ದೇನೆ. ಅವರಲ್ಲಿ ಇಬ್ಬರಿಗೆ ಪೀಠದ ವತಿಯಿಂದ ವಿದ್ಯಾಭ್ಯಾಸ ಮಾಡಿಸಿ, ತರಬೇತಿ ನೀಡಿದ್ದೇನೆ. ಜಂಗಮ ಸಮಾಜದ ಮಹಿಳೆಯೊಬ್ಬರನ್ನು ಪಟ್ಟಕ್ಕೆ ನೇಮಿಸಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಆದರೆ, ಸಮಾಜದಲ್ಲಿ ಅನೇಕ ಸಾಧಕಿಯರಿದ್ದರೂ ಪೀಠ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಜಂಗಮೇತರ ಸಮಾಜಗಳಲ್ಲಿನ ಹಲವು ಮಹಿಳೆಯರು ಆಸಕ್ತಿ ತೋರಿದ್ದಾರೆ. ಈಗಲೂ ಶಿವಧರ್ಮ ಮತ್ತು ಶಿವ ಸಂಸ್ಕೃತಿಯಲ್ಲಿ ಸಂಪೂರ್ಣ ಶ್ರದ್ಧೆ ಇರುವ ಜಂಗಮ ವಂಶೀಯ ಅವಿವಾಹಿತ ಮಹಿಳೆ ದೊರೆತರೆ ಅವರಿಗೆ ಅವಕಾಶ ಕಲ್ಪಿಸಲು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.

ಓದಿ: 

₹ 5 ಕೋಟಿಯವರೆಗೂ ಹಣ ಪಡೆದು ಪೀಠಾಧಿಕಾರ ಬಿಟ್ಟುಕೊಡುವಂತೆ ಆಮಿಷ ಬಂದಿದ್ದ ಸಂಗತಿಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ಸ್ವಾಮೀಜಿ, ಸಾಮಾಜಿಕ ನ್ಯಾಯವನ್ನು ಕಾಯ್ದುಕೊಂಡು ಉತ್ತರಾಧಿಕಾರಿಗಳನ್ನು ನೇಮಿಸುವುದಾಗಿ ಪ್ರಕಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು