ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ನೌಕರರ ‘ನಡತೆ’ ನಿಯಮಕ್ಕೆ ಆಕ್ಷೇಪ: ‘ಗುಲಾಮಗಿರಿ ಹೇರಲು ಹೊರಟ ಸರ್ಕಾರ’

Last Updated 28 ಅಕ್ಟೋಬರ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ನೌಕರರು ಪಾಲಿಸಬೇಕಾದ ‘ಶಿಷ್ಟಾಚಾರ’ಗಳಿಗೆ ಸಂಬಂಧಿಸಿದಂತೆ ಜಾರಿಯಲ್ಲಿದ್ದ ನಿಯಮಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ‘ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು– 2020’ರ ಕರಡು ರೂಪಿಸಿದ್ದು, ಅದರಲ್ಲಿರುವ ಕೆಲವು ಅಂಶಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ 15 ದಿನಗಳ ಕಾಲಾವಕಾಶ ನೀಡಿದೆ.

ನೌಕರರ ಕೆಲವು ಚಟುವಟಿಕೆಗೆ ನಿರ್ಬಂಧ ಹೇರುವ ಜೊತೆಗೆ, ಅವರ ಕುಟುಂಬ ವರ್ಗವನ್ನೂ ಸರ್ಕಾರ ನಿಯಂತ್ರಿಸಲು ಹೊರಟಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಸವಾರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂವಿಧಾನಬದ್ಧವಾದ ಮೂಲಭೂತ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯವನ್ನು ಕಾನೂನಿನ ಹತ್ತಿಕ್ಕಲು ಸರ್ಕಾರ ಮುಂದಾಗಿರುವುದು ಸಮಂಜಸವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಕೆಲವರ ಅಭಿಪ್ರಾಯಗಳು ಇಲ್ಲಿವೆ.

‘ನ್ಯೂನತೆ ಸರಿಪಡಿಸುವ ವಿಶ್ವಾಸ

ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ಕ್ಕೆ ತಿದ್ದುಪಡಿ ಮಾಡುವಂತೆ ನಾವೇ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೆವು. ಇದೀಗ ಸರ್ಕಾರ ತಿದ್ದುಪಡಿ ಮಾಡಿ ನಿಯಮಗಳ ಕರಡು ಪ್ರಕಟಿಸಿದೆ. ಇದು ಸ್ವಾಗತಾರ್ಹ ನಡೆ. ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಿರುವುದು ಸರಿಯಾಗಿದೆ. ಆದರೆ, ಸರ್ಕಾರಿ ನೌಕರರ ಕುಟುಂಬದವರಿಗೆ ಸಂಬಂಧಿಸಿದಂತೆ ಹೇಳಿರುವ ಕೆಲವು ಅಂಶಗಳಲ್ಲಿ ನ್ಯೂನತೆಗಳಿವೆ ನಿಜ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ. ಇದು ಕರಡಷ್ಟೆ. ಈ ನ್ಯೂನತೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ನಾವು ಮಾಡುತ್ತೇವೆ. ಅಷ್ಟೇ ಅಲ್ಲ, ಸರ್ಕಾರ ನಮ್ಮ ಆಕ್ಷೇಪಣೆಗಳನ್ನು ಪರಿಗಣಿಸಿ,
ನ್ಯಾಯಬದ್ಧವಾಗಿ ನಿಯಮಗಳನ್ನು ರೂಪಿಸಿ ಅಂತಿಮಗೊಳಿಸುವ ವಿಶ್ವಾಸವಿದೆ.

–ಸಿ.ಎಸ್‌. ಷಡಾಕ್ಷರಿ, ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ

***

‘ಗುಲಾಮಗಿರಿಯ ಸಂಕೇತ’

ಸರ್ಕಾರಿ ನೌಕರರ ನಡತೆಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳು ಮೊದಲಿನಿಂದಲೂ ಇವೆ. ಕೆಲವನ್ನು ಈಗ ಸೇರಿಸಿದ್ದಾರೆ. ಆದರೆ, ಇದೀಗ ಕುಟುಂಬದ ಸದಸ್ಯರನ್ನೂ ನಿಯಂತ್ರಿಸಲು ಹೊರಟಿರುವುದು ತೀರಾ ಅತಿಯಾಯಿತು. ಸರ್ಕಾರಿ ನೌಕರರು ಎಂದಾಕ್ಷಣ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ? ಇದು ಗುಲಾಗಿರಿಯ ಸಂಕೇತ. ಬ್ರಿಟಿಷರ ಕಾಲದಲ್ಲಿದ್ದಂತೆ ದ್ವಿತೀಯ ದರ್ಜೆಯ ಪ್ರಜೆಗಳಂತೆ ಪರಿಗಣಿಸುವುದು ಥರವಲ್ಲ. ಆ ಮೂಲಕ, ಸರ್ಕಾರ ಅತಿಯಾಗಿ ಮಾಡಲು ಹೊರಟಿದೆ. ಕೆಲವು ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು ಸರಿ. ಆದರೆ, ಮನೆಯವರನ್ನೂ ನಿರ್ಬಂಧಿಸಲು ಹೊರಟಿಸಿರುವುದು ಸರಿಯಲ್ಲ. ಕೆಲವರ ಪತಿ, ಕೆಲವರ ಪತ್ನಿ ಪಾಲಿಕೆ ಸದಸ್ಯರೂ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ. ಅದನ್ನು ನಿರ್ಬಂಧಿಸುವುದು ಸಮಂಜಸ
ವಲ್ಲ. ಕುಟುಂಬದವರು ಏನೇ ಮಾಡಲು ಸ್ವತಂತ್ರರು. ಕುಟುಂಬದವರೂ ಯಾವುದರಲ್ಲೂ ಭಾಗವಹಿಸಬಾರದು, ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಬಾರದು ಎನ್ನುವುದು ಅತಿಯಾಯಿತು.

–ಯು.ಡಿ. ನರಸಿಂಹಯ್ಯ, ಮಾಜಿ ಉಪಾಧ್ಯಕ್ಷರು, ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ

***

‘ವೈಯಕ್ತಿಕ ಸ್ವಾತಂತ್ರ್ಯ ಹರಣಕ್ಕೆ ದಾರಿ’

ಸರ್ಕಾರಿ ನೌಕರರನ್ನು ನಿರ್ಬಂಧಿಸುವುದು ಸರಿ. ಆದರೆ, ಅವರ ಕುಟುಂಬ ವರ್ಗದವರೂ ಸುಮ್ಮನೆ ಕೂರಬೇಕು ಎನ್ನುವುದು ಯಾವ ಕಾನೂನಿನಲ್ಲಿದೆ. ಈ ರೀತಿಯ ನಿರ್ಬಂಧಿಸುವುದೆಂದರೆ ವೈಯಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದಕ್ಕೆ ದಾರಿ. ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅಣ್ಣ ಸರ್ಕಾರಿ ನೌಕರನಾಗಿದ್ದರೆ, ಆತನ ಪತ್ನಿ ಅಥವಾ ಸಹೋದರ ರಾಜಕೀಯದಲ್ಲಿ ಇರಬಾರದು, ಪತ್ರಿಕೆಗಳಲ್ಲಿ ಲೇಖನ, ಅಭಿಪ್ರಾಯಗಳನ್ನು ಪ್ರಕಟಿಸಬಾರದು ಎಂದು ನಿರ್ಬಂಧ ಹೇರುವುದು ಸರಿಯಾದ ಕ್ರಮವಲ್ಲ. ಈ ರೀತಿಯ ನಿಯಮಗಳ ಮೂಲಕ ನಿಯಂತ್ರಿಸುವುದಾದರೆ ಮಾನವ ಹಕ್ಕು ಎನ್ನುವುದು ಇರುವುದಾದರೂ ಏತಕ್ಕೆ. ಇನ್ನೊಬ್ಬರ ಮೂಲಭೂತ ಹಕ್ಕುಗಳ ಮೇಲೆ ನಿಯಂತ್ರಣ ಹೇರಲು ಯಾರಿಗೂ ಅಧಿಕಾರ ಇಲ್ಲ. ಪ್ರತಿಯೊಬ್ಬರಿಗೂ ಅವರವರದ್ದೇ ಆದ ಸ್ವಂತ ಹಕ್ಕು ಇದೆ.

ಬಿ.ಪಿ. ಮಂಜೇಗೌಡ, ಮಾಜಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT