ಭಾನುವಾರ, ಜೂನ್ 13, 2021
24 °C

ಒಬ್ಬ ಅಮಲಿನಲ್ಲಿ ನದಿಗೆ ಬಿದ್ದ: ಇನ್ನೊಬ್ಬ ಅದೇ ಅಮಲಿನಲ್ಲಿ ರಕ್ಷಿಸಿದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ಶುಕ್ರವಾರ ಇಲ್ಲಿನ ಬಾರ್‌ವೊಂದರಲ್ಲಿ ಮದ್ಯ ಸೇವಿಸಿ ಹೊರಬಂದಿದ್ದ ವ್ಯಕ್ತಿಯೊಬ್ಬರು ಅಕಸ್ಮಾತ್ ಕಾಲು ಜಾರಿ ನದಿಗೆ ಬಿದ್ದಾಗ, ಇದೇ ಬಾರ್‌ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಬಂದು, ನದಿಗೆ ಹಾರಿ, ಅವರನ್ನು ರಕ್ಷಣೆ ಮಾಡಿದ್ದಾರೆ.

ಕಲ್ಲೇರಿ ಜನತಾ ಕಾಲೊನಿ ನಿವಾಸಿ ಸಲೀಂ (45) ಮದ್ಯ ಸೇವನೆಗಾಗಿ ಇಲ್ಲಿನ ಬಾರ್‌ ಒಂದಕ್ಕೆ ಹೋಗಿದ್ದರು.  ಬಾರ್‌ನಿಂದ ಹೊರ ಬಂದ ಅವರು, ಆಯತಪ್ಪಿ ನದಿ ಬಿದ್ದರು. ಸ್ಥಳದಲ್ಲಿದ್ದ ಜನರು ಸಲೀಂ ರಕ್ಷಣೆ ಹೇಗೆಂದು ಯೋಚಿಸುತ್ತಿರುವಾಗ, ಕೊಕ್ಕಡದ ರವಿ ಶೆಟ್ಟಿ ಎಂಬುವವರು, ತಕ್ಷಣ ನದಿಗೆ ಹಾರಿ, ಅವರನ್ನು ರಕ್ಷಿಸಲು 15 ನಿಮಿಷಗಳ ಸತತ ಪ್ರಯತ್ನ ನಡೆಸಿದರು. ಸ್ವತಃ ರವಿ ಶೆಟ್ಟಿಗೆ ಈಜಲು ಬರುತ್ತಿರಲಿಲ್ಲ.

ಬಳಿಕ ಸ್ಥಳಕ್ಕೆ ಬಂದ ಗೃಹರಕ್ಷಕ ದಳದ ಸಿಬ್ಬಂದಿ, ಮರಕ್ಕೆ ಹಗ್ಗ ಕಟ್ಟಿ, ರವಿ ಅವರನ್ನು ತಲುಪಿದರು. ಅದೇ ಹಗ್ಗವನ್ನು ಸಲೀಂ ಅವರಿಗೆ ಬಿಗಿದು ರಕ್ಷಿಸಿದ ರವಿ, ತಾವು ದಡ ತಲುಪಿದರು. ಬಳಿಕ ಗೃಹರಕ್ಷಕ ದಳದ ಘಟಕಾಧಿಕಾರಿ ದಿನೇಶ್, ಈಜುಗಾರರಾದ ಚೆನ್ನಪ್ಪ, ಜನಾರ್ದನ, ನಾರಾಯಣ ಅವರು ದೋಣಿ ಮೂಲಕ ಸಾಗಿ, ಸಲೀಂ ಅವರನ್ನು ಮೇಲಕ್ಕೆ ತಂದರು.

‘ನದಿಯ ನೀರಿನ ನಡುವೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿದ್ದ ಸಲೀಂ, ಮದ್ಯದ ನಶೆಯಲ್ಲಿ ಚೇಷ್ಠೆ ಮಾಡುತ್ತಲೇ ಇದ್ದ. ಸೇತುವೆಯ ಮೇಲೆ ನಿಂತಿದ್ದ ನೂರಾರು ಜನರು ಆತಂಕದಲ್ಲಿ ನೋಡುತ್ತಿದ್ದರೆ, ಸಲೀಂ ಜೋರಾಗಿ ನಗುತ್ತಿದ್ದ. ಗೃಹ ರಕ್ಷಕ ದಳದವರು ಆತನನ್ನು ಎತ್ತಿ ದೋಣಿಯಲ್ಲಿ ಕೂರಿಸಿದರೂ, ಅಲ್ಲಿಯೂ ಆತನ ಚೇಷ್ಠೆ ಮುಂದುವರಿದಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು