ಗುರುವಾರ , ಅಕ್ಟೋಬರ್ 22, 2020
21 °C

3 ಮಸೂದೆ ನಿರರ್ಥಕ ಮತ್ತೆ ಸುಗ್ರೀವಾಜ್ಞೆ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶನಿವಾರ ತಡರಾತ್ರಿ 1 ಗಂಟೆಯವರೆಗೂ ವಿಧಾನ ಪರಿಷತ್‌ ಕಲಾಪ ನಡೆದರೂ ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳ ಅಂಗೀಕಾರ ಆಗಿಲ್ಲ. ಕಾರ್ಮಿಕ ವಿವಾದಗಳಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಮತ ವಿಭಜನೆಯಲ್ಲಿ ತಿರಸ್ಕೃತಗೊಂಡಿದೆ. ಹೀಗಾಗಿ ಈ ಮೂರೂ ಮಸೂದೆಗಳ ಜಾರಿಗೆ ರಾಜ್ಯ ಸರ್ಕಾರ ಮತ್ತೆ ಸುಗ್ರೀವಾಜ್ಞೆ ಹೊರಡಿಸಲಿದೆ.

ವಿಧಾನಪರಿಷತ್ತಿನಲ್ಲಿ ಬಿಜೆಪಿಗೆ ಅಗತ್ಯ ಬಹುಮತ ಇಲ್ಲದ ಕಾರಣ ಕೈಗಾರಿಕಾ ವಿವಾದಗಳು ಮತ್ತು ಇತರ ಕೆಲವು ಕಾನೂನುಗಳ (ಕರ್ನಾಟಕ ತಿದ್ದುಪಡಿ) ಮಸೂದೆ ತಿರಸ್ಕೃತಗೊಂಡಿತು. ಪುನಃ ಈ ಮಸೂದೆಗೆ ಅಂಗೀಕಾರ ಪಡೆಯಲು ಮುಂದಿನ ಅಧಿವೇಶನದವರೆಗೆ ಸರ್ಕಾರ ಕಾಯಬೇಕಿದೆ.

ಭೂ ಸುಧಾರಣಾ (ತಿದ್ದುಪಡಿ) ಮಸೂದೆಯನ್ನು ರಾತ್ರಿ 11.45ಕ್ಕೆ ಕಂದಾಯ ಸಚಿವ ಆರ್‌. ಅಶೋಕ ವಿಧಾನ ಪರಿಷತ್‌ನಲ್ಲಿ ಮಂಡಿಸಿದರು. ತಡರಾತ್ರಿ 1 ಗಂಟೆಯವರೆಗೂ ಚರ್ಚೆ ನಡೆಯಿತು. ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಸೂದೆಯನ್ನು ವಿರೋಧಿಸಿದವು. ಚರ್ಚೆ ನಡೆಯುತ್ತಿರುವಾಗಲೇ ಸಭಾಪತಿ ಸದನದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಭೂ ಸುಧಾರಣೆ ಮಸೂದೆಯನ್ನು ಮತಕ್ಕೆ ಹಾಕಲು ಸಾಧ್ಯವಾಗಲಿಲ್ಲ. ಎಪಿಎಂಸಿ ಮಸೂದೆ ಮಂಡನೆಗೂ ಅವಕಾಶ ದೊರೆಯಲಿಲ್ಲ. 

ಈಗಾಗಲೇ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ಜೀವಂತ ಇಡಲು ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

‘ಭೂಸುಧಾರಣೆ ಮತ್ತು ಎಪಿಎಂಸಿ ಮಸೂದೆಗಳು ವಿಧಾನಸಭೆಯಲ್ಲಿ ಕೊನೆಯ ದಿನ ಕೊನೆ ಹಂತದಲ್ಲಿ ಪರ್ಯಾಲೋಚನೆಗೆ ಬರುವಂತೆ ಕಾಂಗ್ರೆಸ್‌ ಪಕ್ಷ ತಂತ್ರಗಾರಿಕೆ ಮಾಡಿತ್ತು. ವಿಧಾನಪರಿಷತ್ತಿನಲ್ಲಿ ಅವುಗಳನ್ನು ಸೋಲಿಸುವುದೇ ಕಾಂಗ್ರೆಸ್‌ನ ಉದ್ದೇಶವಾಗಿತ್ತು. ಕಳೆದ ಎರಡು ಮೂರು ದಿನಗಳಿಂದ ಒಂದಲ್ಲ ಒಂದು ನೆಪವೊಡ್ಡಿ ಪರ್ಯಾಲೋಚನೆ ಮುಂದೂಡುತ್ತಲೇ ಬಂದಿತ್ತು’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ಲಾಕ್‌ಡೌನ್‌ ಸಂದರ್ಭದಲ್ಲಿ ಮೂರು ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿತ್ತು. ಆ ಸುಗ್ರೀವಾಜ್ಞೆಗಳಿಗೆ ಪರ್ಯಾಯವಾಗಿ ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಿತ್ತು. ವಿಧಾನಸಭೆಯ ಕಲಾಪ ರಾತ್ರಿ 11ಕ್ಕೆ ಅಂತ್ಯಗೊಂಡಿದ್ದ ಕಾರಣದಿಂದ ಪರಿಷತ್‌ನಲ್ಲಿ ತಿರಸ್ಕೃತಗೊಂಡಿದ್ದ ಕೈಗಾರಿಕಾ ವಿವಾದ ಮಸೂದೆಗೆ ಮತ್ತೆ ಅಂಗೀಕಾರ ಪಡೆಯುವುದಕ್ಕೂ ಸರ್ಕಾರಕ್ಕೆ ಅವಕಾಶ ಸಿಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು