ಸೋಮವಾರ, ಮೇ 23, 2022
28 °C
‘ಕನಿಷ್ಠ ವೇತನ’ ನೀಡದ 998 ಪ್ರಕರಣಗಳಲ್ಲಿ ₹ 25.25 ಕೋಟಿ ಕ್ಲೈಮ್‌!

ಸರ್ಕಾರದಲ್ಲಿ 36 ಸಾವಿರ ನೌಕರರು ‘ಹೊರಗುತ್ತಿಗೆ’

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಕಾರ್ಮಿಕ ಇಲಾಖೆ ಸಂಗ್ರಹಿಸಿದ ದತ್ತಾಂಶಗಳ ಪ್ರಕಾರ, ಮಾನವ ಸಂಪನ್ಮೂಲ ಪೂರೈಸುವ 1,117 ಏಜೆನ್ಸಿಗಳ ಮೂಲಕ ನೇಮಕಗೊಂಡ 36,097 ಹೊರಗುತ್ತಿಗೆ ನೌಕರರು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ದುಡಿಯುತ್ತಿದ್ದಾರೆ!

ಹೊರಗುತ್ತಿಗೆ ನೌಕರರ ಶೋಷಣೆ ಆರೋಪ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತರ ನಿರ್ದೇಶನದಂತೆ ಕಾರ್ಮಿಕ ಇಲಾಖೆ ಹೊರಗುತ್ತಿಗೆ ನೌಕರರ ಮಾಹಿತಿ ಸಂಗ್ರಹಿಸಿದೆ.

ಹೊರಗುತ್ತಿಗೆ ನೌಕರರ ದತ್ತಾಂಶ ಸಂಗ್ರಹ, ಸೇವಾ ಭದ್ರತೆಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು, ‘ಇ– ಆಡಳಿತ ಇಲಾಖೆ ತಂತ್ರಾಂಶ ಅಭಿವೃದ್ಧಿಪಡಿಸಬೇಕು. ವೇತನ ಮತ್ತು ಸೇವಾ ಭದ್ರತೆ ಒದಗಿಸಲು ಮಾರ್ಗಸೂಚಿ ಹೊರಡಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ವಿವಿಧ ಇಲಾಖೆಗಳು ಡಾಟಾ ಎಂಟ್ರಿ ಆಪರೇಟರ್‌, ಚಾಲಕರು, ಸಹಾಯಕರು ಸೇರಿದಂತೆ ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುತ್ತಿವೆ. ಆದರೆ, ಈ ಇಲಾಖೆಗಳು ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಂಡರೆ, ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡದೆ ಏಜೆನ್ಸಿಗಳು ಶೋಷಿಸುತ್ತಿವೆ ಎಂಬ ಆರೋಪವನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ.

‘ವಿವಿಧ ಇಲಾಖೆಗಳಿಂದ ಹೊರಗುತ್ತಿಗೆ ನೌಕರರ ಮಾಹಿತಿ ಸಂಗ್ರಹಿಸಿದ ಸಂದರ್ಭದಲ್ಲಿ, ಕನಿಷ್ಠ ವೇತನ ನೀಡದ 998 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ₹ 25,25,30,382 ಕ್ಲೈಮ್‌ ಮೊತ್ತವನ್ನು ಏಜೆನ್ಸಿಗಳಿಂದ ವಸೂಲಿ ಮಾಡಿ ನೌಕರರಿಗೆ ಮರಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಉಪ ಕಾರ್ಮಿಕ ಆಯುಕ್ತರು ಮತ್ತು ಸಹಾಯಕ ಕಾರ್ಮಿಕ ಆಯುಕ್ತರು ಈ ಪ್ರಕರಣಗಳನ್ನು ಇತ್ಯರ್ಥಪಡಿಸಲಿದ್ದಾರೆ’ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ.

ಮಂಗಳೂರಿನ ಸರ್ಕೀಟ್‌ ಹೌಸ್‌ನಲ್ಲಿ ಹೊರಗುತ್ತಿಗೆ ನೌಕರರಿಗೆ ಕಡಿಮೆ ಸಂಬಳ ನೀಡುತ್ತಿರುವ ಕುರಿತ ಪ್ರಕರಣದಲ್ಲಿ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ, ಮುಖ್ಯ ಕಾರ್ಯದರ್ಶಿ, ಡಿಪಿಎಆರ್‌ ಕಾರ್ಯದರ್ಶಿಯನ್ನು ಪ್ರತಿವಾದಿಗಳಾಗಿ ಮಾಡಿ ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ಸಂದರ್ಭದಲ್ಲಿ, ‘ಇಲಾಖೆಗಳು ಮತ್ತು ಅವುಗಳ ಅಧೀನದಲ್ಲಿರುವ ನಿಗಮ ಮಂಡಳಿ, ಪ್ರಾಧಿಕಾರಗಳಲ್ಲಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಸಿದ್ಧಪಡಿಸಬೇಕು. ಕಾರ್ಮಿಕ ಕಾಯ್ದೆಯಂತೆ ಕನಿಷ್ಠ ವೇತನ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿ, ನೀಡದ ಪ್ರಕರಣಗಳಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

‘ಗುತ್ತಿಗೆ ಕಾರ್ಮಿಕ ಕಾಯ್ದೆ ಅನ್ವಯ 20 ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಸ್ಥೆಗಳು ನಮ್ಮಲ್ಲಿ ನೋಂದಣಿ ಮಾಡಿಕೊಂಡು, ಪರವಾನಗಿ ಪಡೆಯುವ ಅಗತ್ಯವಿಲ್ಲ. ಹೀಗಾಗಿ, ಅಂಥ ಕಡೆಗಳಲ್ಲಿರುವ ನೌಕರರ ದತ್ತಾಂಶ ಲಭ್ಯವಿಲ್ಲ. ಆದರೂ 20ಕ್ಕಿಂತ ಕಡಿಮೆ ಹೊರಗುತ್ತಿಗೆ ನೌಕರರಿರುವ ಇಲಾಖೆಗಳಿಂದಲೂ ಮಾಹಿತಿ ಸಂಗ್ರಹಿಸಿದ್ದೇವೆ’ ಎಂದು ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ರವಿಕುಮಾರ್‌ ತಿಳಿಸಿದರು.

‘ಹೊರ ಗುತ್ತಿಗೆ ನೌಕರರಿಗೂ ಖಜಾನೆ ಮೂಲಕ ವೇತನ ಪಾವತಿಸಲು ಖಜಾನೆ ಮತ್ತು ಆರ್ಥಿಕ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ನೌಕರರ ವೇತನ ಪಾವತಿ ಬಗ್ಗೆ ರ‍್ಯಾಂಡಮ್ ಆಗಿ ಪರಿಶೀಲಿಸಬೇಕು. ಕನಿಷ್ಠ ವೇತನ ನೀಡದ ಏಜೆನ್ಸಿಗಳ ವಿರುದ್ಧ ಕ್ಲೈಮ್‌ ಪ್ರಕರಣ ದಾಖಲಿಸಿಕೊಳ್ಳಬೇಕು. ಉದ್ಯೋಗದಾತರು ಮತ್ತು ಏಜೆನ್ಸಿಗಳು ಒಡಂಬಡಿಕೆ ಮಾಡಿಕೊಳ್ಳಬೇಕು. ಅದನ್ನು ಉಲ್ಲಂಘಿಸಿದ ಏಜೆನ್ಸಿಗಳನ್ನು ತೆಗೆದು ಹಾಕಬೇಕು. ಕಪ್ಪುಪಟ್ಟಿಗೂ ಸೇರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದೂ ಲೋಕಾಯುಕ್ತರು ಸೂಚಿಸಿದ್ದಾರೆ’ ಎಂದೂ ಹೇಳಿದರು.

‘ಭವಿಷ್ಯ ನಿಧಿ (ಪಿಎಫ್‌) ಮತ್ತು ನೌಕರರ ವೈದ್ಯಕೀಯ ವಿಮೆ (ಇಎಸ್‌ಐ) ಪಾವತಿ ವಿಷಯ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಪಾವತಿಸದ ವಿಷಯ ಗಮನಕ್ಕೆ ಬಂದರೆ ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು. ಕಾರ್ಮಿಕ ಇಲಾಖೆಯನ್ನು ಬಲಪಡಿಸಲು, ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ’ ಎಂದರು.

ಸಮಗ್ರ ವರದಿಗೆ ಸಮಿತಿ ರಚನೆ
ಲೋಕಾಯುಕ್ತರ ನಿರ್ದೇಶನದಂತೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಪಾವತಿಸುವ ವೇತನ, ಇಎಸ್‌ಐ, ಪಿಎಫ್ ಮತ್ತು ಇತರ ವಿವರಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಸಲ್ಲಿಸಲು ಕಾರ್ಮಿಕ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. ಸಮಿತಿಗೆ ಹೆಚ್ಚುವರಿ ಕಾರ್ಮಿಕ ಆಯುಕ್ತ ಸದಸ್ಯ, ಜಂಟಿ ಕಾರ್ಮಿಕ ಆಯುಕ್ತ ಸದಸ್ಯ ಕಾರ್ಯದರ್ಶಿ. ಈ ಸಮಿತಿ ಸರ್ಕಾರ ಮತ್ತು ಲೋಕಾಯುಕ್ತರಿಗೆ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

*

ಹೊರಗುತ್ತಿಗೆ ನೌಕರರ ದತ್ತಾಂಶಕ್ಕೆ ರಾಜ್ಯ ಸರ್ಕಾರ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಬೇಕು. ವೇತನ, ಸೇವಾ ಭದ್ರತೆ ನೀಡಲು ಮಾರ್ಗಸೂಚಿ ಹೊರಡಿಸಬೇಕು.
-ಪಿ. ವಿಶ್ವನಾಥ ಶೆಟ್ಟಿ, ಲೋಕಾಯುಕ್ತ ನ್ಯಾಯಮೂರ್ತಿ

*

ಹೊರಗುತ್ತಿಗೆ ನೌಕರರ ಕನಿಷ್ಠ ವೇತನ ಪಾವತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಲೋಕಾಯುಕ್ತರು ನೀಡಿರುವ ಆದೇಶ ಪಾಲಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ.
-ಅಕ್ರಂ ಪಾಷಾ, ಆಯುಕ್ತರು, ಕಾರ್ಮಿಕ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು