ಮಂಗಳವಾರ, ಮೇ 24, 2022
26 °C
ಸಮಾಜಕ್ಕೆ ಉತ್ತಮ ಸಂಸ್ಕಾರ ನೀಡಲು ಪೀಠ ಸ್ಥಾಪನೆ

ಪಂಚಮಸಾಲಿ ಮೂರನೇ ಪೀಠ ಫೆ.14 ರಂದು ಅಸ್ತಿತ್ವಕ್ಕೆ: ಸಂಗನಬಸವ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಧರ್ಮ ಜಾಗೃತಿ, ಸಂಸ್ಕಾರ ಉಣಬಡಿಸುವ ಉದಾತ್ತ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಪಂಚಮಸಾಲಿ ಸಮಾಜದ ಮೂರನೇಯ ಪೀಠ ಫೆ.14 ರಂದು ಜಮಖಂಡಿ ತಾಲ್ಲೂಕಿನ ಆಲಗೂರದಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಪ್ರಥಮ ಜಗದ್ಗುರುಗಳಾಗಿ ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮನಗೂಳಿ ಮಠದ  ಸಂಗನಬಸವ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಶ್ರೇಯೋಭಿವೃದ್ಧಿ, ಉದಾತ್ತ ಸಂಸ್ಕಾರ ಮೂಡಿಸುವ ದೃಷ್ಟಿಯಿಂದ ಈ ಪೀಠ ಸ್ಥಾಪನೆಯಾಗುತ್ತಿದೆ. ಪಂಚಮಸಾಲಿ ಸಮುದಾಯದ ಪಂಚ ಪೀಠಗಳಾಗಬೇಕು ಎಂಬುದು ಹರಿಹರ ಪೀಠದ ಹಿಂದಿನ ಜಗದ್ಗುರು ಡಾ.ಮಹಾಂತ ಶ್ರೀಗಳ ಕನಸಿತ್ತು. ಅವರ ಆಶಯಗಳಿಗನುಗುಣವಾಗಿಯೇ ಈ ಮೂರನೇಯ ಪೀಠ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.

‘ಇದು ನಿರಾಣಿ ಪೀಠ’ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ, ನಿರಾಣಿ ಎಲ್ಲ ಸಮುದಾಯಗಳಿಗೆ ಸಹಾಯ ಮಾಡಿದ್ದಾರೆ. ನಮಗೆ ಇದುವರೆಗೂ ನಿರಾಣಿಯವರು ಸಂಪರ್ಕದಲ್ಲಿ ಇಲ್ಲ, ಸ್ವಾಮೀಜಿಗಳು ಮನೆಗೆ ಬಂದರೆ ಅವರಿಗೆ ಸಹಾಯ ಮಾಡುವ ಮನಸ್ಸು ನಿರಾಣಿಗಿದೆ ಎಂದು ಸ್ಪಷ್ಟಪಡಿಸಿದರು.

ಬಬಲೇಶ್ವರ ಬ್ರಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೂಡಲಸಂಗಮ, ಹರಿಹರ ಪೀಠಗಳು ಧರ್ಮ ರಕ್ಷಣೆ, ಸಂಸ್ಕಾರ ಕಲಿಸುವುದು, ಧಾರ್ಮಿಕ ಭೋದನೆ ಮಾಡಿಲ್ಲ. ಹಾಗಾಗಿ ಮೂರನೇ ಪೀಠ ಸ್ಥಾಪನೆಯಾಗುತ್ತಿದೆ ಎಂದರು.

ಹರಿಹರ ಪೀಠಕ್ಕೆ ಈ ಮೊದಲು ನನ್ನನ್ನೇ ಪೀಠಾಧ್ಯಕ್ಷರನ್ನಾಗಿ ಮಾಡುವುದಾಗಿ ಹರಿಹರದಿಂದ ಬಂದಿದ್ದ ಹಲವು ಹಿರಿಯರು, ಮುಖಂಡರು ಹೇಳಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಇದೀಗ ಮೂರನೇ ಪೀಠದ ಅವಕಾಶ ಬಂದಿದ್ದು, ನಾನು ಪೀಠಾಧ್ಯಕ್ಷರಾಗಲು ಒಪ್ಪಿದ್ದೇನೆ ಎಂದರು.

ಸಮಾಜದ ಮುಖಂಡ ಡಾ.ಸುರೇಶ ಬಿರಾದಾರ ಮಾತನಾಡಿ, ಪಂಚಮಸಾಲಿ ಸಮುದಾಯದ ಮೂರನೇ ಪೀಠ ಮುರುಗೇಶ ನಿರಾಣಿ ಪರವಾಗಿದೆ ಎಂಬುದು ಸುದ್ದ ಸುಳ್ಳು.  ಮೂರನೇ ಪೀಠ ಸ್ಥಾಪನೆಗೆ ಸಮಾಜದ 60 ಸ್ವಾಮೀಜಿಗಳ ಬೆಂಬಲವಿದ್ದು, ಸಮಾಜದ ಜನರಿಗೆ ಉತ್ತಮ ಸಂಸ್ಕಾರ ನೀಡಲು ಮೂರನೇ ಪೀಠ ಅಸ್ತಿತ್ವಕ್ಕೆ ಬರಲಿದೆ ಎಂದರು. 

ಕೂಡಲಸಂಗಮ ಪಂಚಮಸಾಲಿ ಪೀಠ ಅಸಂವಿಧಾನಿಕವಾಗಿ ಸ್ಥಾಪನೆಯಾಗಿದ್ದು, ಅ ಪೀಠ ಸ್ಥಾಪನೆಗೆ ನಮ್ಮ ಸಮಾಜದ ಯಾವುದೇ ಶ್ರೀಗಳು, ಮುಖಂಡರು ಬೆಂಬಲ ನೀಡಿರಲಿಲ್ಲ. ಆದರೂ ಅಸಂವಿಧಾನಿಕವಾಗಿ ಕೂಡಲಸಂಗಮ ಪೀಠ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ಪಂಚಮಸಾಲಿ ಮೂರನೇ ಪೀಠ ಪಂಚ ತತ್ವಗಳ ಆಧಾರದಲ್ಲಿ ಸ್ಥಾಪನೆಯಾಗುತ್ತಿದೆ. ಮೂರನೇ ಪೀಠ ಪರ್ಯಾಯ ಪೀಠವೂ ಅಲ್ಲ, ಸಮಾಜ ಒಡೆಯುವ ಕೆಲಸವನ್ನು ಮಾಡಿಲ್ಲ. ಇದು ಪಂಚಮಸಾಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ನೀಡಲು ಮಾಡಲಾಗುತ್ತಿದೆ ಎಂದರು.

ಬುರಣಾಪುರ ಯೋಗೇಶ್ವರಿ ಮಾತಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು