ಸೋಮವಾರ, ಜನವರಿ 18, 2021
15 °C

ಪರಿಷತ್ ಗದ್ದಲ: 'ಅಧಿಕಾರಿಗಳ ಕರ್ತವ್ಯ ಲೋಪವಷ್ಟೇ ತನಿಖೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆ.ಸಿ.ಮಾಧುಸ್ವಾಮಿ

ಕಲಬುರ್ಗಿ: ‘ವಿಧಾನ ಪರಿಷತ್‌ನಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಸಭಾಪತಿ ಆದೇಶಿಸಿರುವ ತನಿಖೆ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ. ಪರಿಷತ್ ಸದಸ್ಯರ ನಡವಳಿಕೆ ಬಗ್ಗೆ ತನಿಖೆಗೆ ಸಭಾಪತಿ ಆದೇಶ ನೀಡಿಲ್ಲ’ ಎಂದು ಕಾನೂನು ‌ಮತ್ತು‌ ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ 14 ದಿನ ಕಳೆದಿತ್ತು. ಹೀಗಾಗಿ ಅವರಾಗಿಯೇ ಸ್ಥಾನ ತ್ಯಜಿಸುವ ವಿಶ್ವಾಸ ಇತ್ತು. ಬೆಲ್ ಬಾರಿಸಿದ ನಂತರವೂ ಸಭಾಪತಿ ಬಾರದಿರುವ ಕಾರಣ ಉಪಸಭಾಪತಿಯವರನ್ನು ಪೀಠದಲ್ಲಿ ಕೂರಿಸಲಾಯಿತು. ಇದಾದ ನಂತರ ಅನಿರೀಕ್ಷಿತ ರೀತಿಯಲ್ಲಿ ಗಲಾಟೆ ನಡೆಯಿತು’ ಎಂದರು.

‘ಒಂದು ವರ್ಷದಿಂದ ರಾಜ್ಯ ವಿವಿಧ ಸಂಕಷ್ಟ ಎದುರಿಸುತ್ತಿರುವುದರಿಂದ ಶಾಸಕರಿಗೆ ಮೊದಲಿನಂತೆ ಅನುದಾನ ನೀಡಲು ಸಾಧ್ಯವಾಗಿಲ್ಲ. ಎಲ್ಲ ಕೆಲಸಗಳು ಸರಿಯಾಗಿ ಆಗಿವೆ ಎಂದು ಆತ್ಮವಿಶ್ವಾಸದಿಂದ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರು ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳಬಾರದು ಎಂಬ ಉದ್ದೇಶದಿಂದ ನ್ಯಾಯಮೂರ್ತಿಗಳು ನ್ಯಾಯಾಂಗ ಇಲಾಖೆಯ ಕಟ್ಟಡಗಳ ಉದ್ಘಾಟನಾ ಸಮಾರಂಭಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸುವುದಿಲ್ಲ. ಆದರೆ, ಯಾವುದೇ ಪ್ರಕರಣಗಳು ಇಲ್ಲದ ಜನಪ್ರತಿನಿಧಿಗಳನ್ನಾದರೂ ಆಹ್ವಾನಿಸಬೇಕು ಎಂಬುದು ಹಲವು ಶಾಸಕರ ಬೇಡಿಕೆಯಾಗಿದೆ. ಈ ವಿಷಯವಾಗಿ ಮುಖ್ಯ ನ್ಯಾಯಮೂರ್ತಿ ಅವರೊಂದಿಗೆ ಚರ್ಚಿಸುವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು