ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ದಿನ ಭಾಗಶಃ ಲಾಕ್‌ಡೌನ್: ದಿಢೀರ್‌ ಬಾಗಿಲು, ವ್ಯಾಪಾರಸ್ಥರು–ಜನರಲ್ಲಿ ಗೊಂದಲ‌

ದಿಢೀರ್‌ ಬಾಗಿಲು: ವ್ಯಾಪಾರಸ್ಥರು–ಜನರಲ್ಲಿ ಗೊಂದಲ
Last Updated 22 ಏಪ್ರಿಲ್ 2021, 21:29 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗಳನ್ನು ಗುರುವಾರ ದಿಢೀರ್‌ ಬಂದ್‌ ಮಾಡಿದೆ. ಹೀಗಾಗಿ, ರಾಜ್ಯದಾದ್ಯಂತ ಇನ್ನು ಮುಂದಿನ 12 ದಿನ ‘ಭಾಗಶಃ ಲಾಕ್‌ಡೌನ್‌’ ಜಾರಿಯಲ್ಲಿರಲಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿರುವ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ‘ರಾಜ್ಯದಾದ್ಯಂತ ಕಠಿಣ ಕ್ರಮಗಳನ್ನು ಜಾರಿಗೊಳಿಸಿ ಏ. 20ರಂದೇ ಸ್ಪಷ್ಟ ಮಾರ್ಗಸೂಚಿ ಹೊರಡಿಸಲಾಗಿದೆ. ಅದರ ಅನ್ವಯ, ಕಿರಾಣಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳು, ಹಣ್ಣು, ತರಕಾರಿ, ಹಾಲು, ಮೀನು–ಮಾಂಸ ಮಾರಾಟ, ಆರೋಗ್ಯ ಸೇವೆಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದೆಲ್ಲ ಅಂಗಡಿಗಳು ಮತ್ತು ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ’ ಎಂದರು.

‘ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಗುರುವಾರ ತೆರೆದ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಲಾಗಿದೆ. ಕೋವಿಡ್‌ ನಿಯಂತ್ರಿಸಲು ಬಿಗಿಕ್ರಮ ಅಗತ್ಯ. ಜನರ ಓಡಾಟ ನಿರ್ಬಂಧಿಸಲು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ’ ಎಂದೂ ಹೇಳಿದರು.

ಆದರೆ, ಮಾರ್ಗಸೂಚಿಯಲ್ಲಿ ವಿಧಿಸಲಾದ ನಿರ್ಬಂಧಗಳು ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಎರಡು ದಿನಗಳ ಕರ್ಫ್ಯೂ ಅವಧಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಂದು ಸಾರ್ವಜನಿಕರು ಭಾವಿಸಿದ್ದರು. ಇದರಿಂದಾಗಿ ಗುರುವಾರ (ಏ. 22) ಎಲ್ಲೆಡೆ ವಾಣಿಜ್ಯ ಚಟುವಟಿಕೆ ಎಂದಿನಂತೆಯೇ ಇತ್ತು. ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಆಗದಿರುವ ಕಾರಣ ಸರ್ಕಾರದಿಂದ ತುರ್ತು ಆದೇಶ ಬರುತ್ತಿದ್ದಂತೆ, ಮಧ್ಯಾಹ್ನ 12 ಗಂಟೆ ಹೊತ್ತಿಗೆ ಅಂಗಡಿಗಳನ್ನು ಅಧಿಕಾರಿಗಳು, ಪೊಲೀಸರು ಡಿಢೀರ್‌ ಬಂದ್‌ ಮಾಡಿಸಿದರು.

ಏಕೆ ಬಂದ್‌ ಮಾಡಿಸುತ್ತಿದ್ದಾರೆಂದು ತಕ್ಷಣಕ್ಕೆ ಗೊತ್ತಾಗದೆ ಅಂಗಡಿ ಮಾಲೀಕರು ದಿಕ್ಕು ತೋಚದಂತಾದರು. ‘ವಾರಾಂತ್ಯ ಕರ್ಫ್ಯೂ’ಗೆ (ಶನಿವಾರ, ಭಾನುವಾರ) ಇನ್ನೂ ಒಂದು ದಿನ ಬಾಕಿ ಇರುವಾಗಲೇ ಯಾವುದೇ ಮುನ್ಸೂಚನೆ ನೀಡದೆ ಅಂಗಡಿಗಳನ್ನು ಬಂದ್‌ ಮಾಡಿಸಿದ್ದು ಸಾರ್ವಜನಿಕರಲ್ಲೂ ಗೊಂದಲಗಳಿಗೆ ಕಾರಣವಾಯಿತು.

ಸರ್ಕಾರ ಲಾಕ್‌ಡೌನ್‌ ಘೋಷಿಸಿತೇ ಎಂಬ ಅನುಮಾನವೂ ಮೂಡಿತು.

ದಿನಸಿ ಅಂಗಡಿ, ಮೆಡಿಕಲ್‌ ಸ್ಟೋರ್‌, ಹೋಟೆಲ್‌, ಬೇಕರಿ ಸೇರಿದಂತೆ ದಿನಬಳಕೆಯ ವಸ್ತು, ಅವಶ್ಯ ವಸ್ತುಗಳಡಿ ಬರುವ ಅಂಗಡಿಗಳನ್ನು ಬಿಟ್ಟು ಇನ್ನುಳಿದ ಅಂಗಡಿಗಳ ಬಾಗಿಲನ್ನು ಪೊಲೀಸರು ಮುಚ್ಚಿಸಿದರು. ಯಾವುದೇ ಮುನ್ಸೂಚನೆ ನೀಡದೆ ದಿಢೀರ್‌ ತೆಗೆದುಕೊಂಡ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.

‘ಸರ್ಕಾರದ ಸುತ್ತೋಲೆ, ಕೋವಿಡ್‌ ಮಾರ್ಗಸೂಚಿ ಅನ್ವಯ ಕೆಲಸ ಮಾಡುತ್ತಿದ್ದೇವೆ. ಅವಶ್ಯಕ ವಸ್ತುಗಳ ಅಂಗಡಿ ಹೊರತುಪಡಿಸಿ ಉಳಿದವುಗಳನ್ನು ಮುಚ್ಚಿಸಲಾಗಿದೆ’‍ ಎಂದು ಮೈಸೂರು ಡಿಸಿಪಿ ಡಾ.ಎ.ಎನ್‌. ಪ್ರಕಾಶ್‌ಗೌಡ ಪ್ರತಿಕ್ರಿಯಿಸಿದರು. ಹಾಸನದಲ್ಲಿಸ್ವತಃ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ರಸ್ತೆಗಿಳಿದು ಅಂಗಡಿಗಳ ಬಾಗಿಲು ಮುಚ್ಚಿಸಿದರು. ಗುರುವಾರ ಬೆಳಿಗ್ಗೆಯಿಂದಲೇ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಮಾರುಕಟ್ಟೆ ಪ್ರದೇಶ ಹಾಗೂ ಬಡಾವಣೆಗಳಲ್ಲಿ ಅಂಗಡಿಗಳನ್ನು ದಿಢೀರ್‌ ಬಂದ್‌ ಮಾಡಿಸಿದರು. ಇದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಯಿತು.

ಚಾಮರಾಜನಗರ ಜಿಲ್ಲೆಯಾದ್ಯಂತ ಪೊಲೀಸರು ಜವಳಿ, ಆಭರಣ,
ಗಿರವಿ ಎಲೆಕ್ಟ್ರಾನಿಕ್ಸ್, ಮೊಬೈಲ್, ಪಾದರಕ್ಷೆಗಳ ಅಂಗಡಿಗಳನ್ನು ಮುಚ್ಚಿಸಿದರು. ರಾಯಚೂರು,
ಬೀದರ್‌, ಕಲಬುರ್ಗಿ ಮಂಡ್ಯ ಜಿಲ್ಲೆಯಲ್ಲಿಯೂ ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಪೊಲೀಸರು ಅವಕಾಶ ನೀಡಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಕಾರ್ಯಾಚರಣೆಗಿಳಿದಿರುವ ಪೊಲೀಸರು, ನಗರಸಭೆ ಮಾರ್ಷಲ್‌ಗಳು ಚಿನ್ನ–ಬೆಳ್ಳಿ ಅಂಗಡಿ, ಬಟ್ಟೆ ಅಂಗಡಿ, ಟೀ ಅಂಗಡಿ
ಗಳನ್ನು ಬಂದ್ ಮಾಡಿಸಿದರು. ಏಕಾಏಕಿ ಬಂದ್ ಮಾಡಿಸಿದ್ದರಿಂದಾಗಿ ಜಿಲ್ಲಾಡಳಿತದ ಸಿಬ್ಬಂದಿ ಮತ್ತು ವ್ಯಾಪಾರಸ್ಥರ ಮಧ್ಯೆ ಕೆಲವು ಕಡೆ ವಾಗ್ವಾದವೂ ನಡೆಯಿತು.

ಇವುಗಳಿಗೆ ಮಾತ್ರ ಅವಕಾಶ

*ನ್ಯಾಯಬೆಲೆ ಅಂಗಡಿ, ಕಿರಾಣಿ ಅಂಗಡಿ, ದಿನಸಿ, ಹಣ್ಣು, ತರಕಾರಿ, ಹಾಲು, ಮಾಂಸ, ಮೀನು, ಪಶುಆಹಾರ ಅಂಗಡಿ

* ರೆಸ್ಟೋರೆಂಟ್‌, ಉಪಹಾರ ಗೃಹಗಳಿಂದ ಪಾರ್ಸೆಲ್‌

* ಪೆಟ್ರೋಲ್ ಬಂಕ್‌, ಎಲ್‌ಪಿಜಿ ಪೂರೈಕೆ

* ಮದ್ಯದಂಗಡಿ, ಮದ್ಯ ಮಾರಾಟ ಮಳಿಗೆಗಳು, ಬಾರ್‌, ರೆಸ್ಟೋರೆಂಟ್‌ಗಳಿಂದ ಪಾರ್ಸೆಲ್‌ ಮಾತ್ರ

*ಬ್ಯಾಂಕು, ವಿಮೆ ಕಚೇರಿ, ಎಟಿಎಂ

* ಮುದ್ರಣ, ವಿದ್ಯುನ್ಮಾನ ಮಾಧ್ಯಮ

* ಇ– ಕಾಮರ್ಸ್ ಸೇವೆ

*ಶೈತ್ಯಾಗಾರ, ಉಗ್ರಾಣ ಸೇವೆ

* ಕೋವಿಡ್‌ ನಿಯಮ ಪಾಲಿಸಿದರೆ
ಸಲೂನು, ಬ್ಯೂಟಿ ಪಾರ್ಲರ್‌ಗಳು ಕಾರ್ಯನಿರ್ವಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT