ಗುರುವಾರ , ಮೇ 19, 2022
23 °C
ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ

ಮನೆ ಗುರುತಿಗೆ ಸೂಚನೆ ನೀಡಿಲ್ಲ: ಪೇಜಾವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳನ್ನು ಮಾರ್ಕಿಂಗ್ ಮಾಡಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸ್ವಾಮೀಜಿ ‘ಕುಮಾರಸ್ವಾಮಿ ಅವರದು ಗಂಭೀರ ಆರೋಪ. ಅದಕ್ಕೆ ಪೂರಕವಾದ ಸಾಕ್ಷ್ಯ ಒದಗಿಸಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ’ ಎಂದಿದ್ದಾರೆ.

‘ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡದವರ ಮಾಹಿತಿ ಸಂಗ್ರಹಿಸಲು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹಾಗೂ ಆರ್‌ಎಸ್‌ಎಸ್‌ ಸೂಚನೆ ನೀಡಿಲ್ಲ. ದೇಣಿಗೆ ಕೊಟ್ಟವರ ಮಾಹಿತಿ ಟ್ರಸ್ಟ್‌ಗೆ ಅಗತ್ಯ, ಸಂಗ್ರಹಿಸಲಾಗುತ್ತದೆ’ ಎಂದು ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹವಾಗುತ್ತಿದ್ದು, ದೇಣಿಗೆ ಸ್ವೀಕಾರ ರಶೀದಿ ಹಾಗೂ ಕೂಪನ್‌ಗಳ ಕೊರತೆ ಉಂಟಾಗಿದೆ. ಹಾಗಾಗಿ, ಮುಂದೆ ದೇಣಿಗೆ ಪಡೆಯಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮನೆಗಳನ್ನು ಗುರುತು ಹಾಕಿಕೊಂಡಿರಬಹುದು. ಇದು ಖಂಡಿತ ತಪ್ಪಲ್ಲ ಎಂದು ಸ್ವಾಮೀಜಿ ಹೇಳಿದರು.

‘ಪ್ರಚಾರಕ್ಕಾಗಿ ಕುಮಾರಸ್ವಾಮಿ ಹೇಳಿಕೆ’
ಕಾರವಾರ: ‘ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಮಾಡುವುದು ಬೇಡ. ಕೇವಲ ಪ್ರಚಾರಕ್ಕಾಗಿ ಹೇಳಿಕೆ ಕೊಡುವುದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಟೀಕಿಸಿದರು.

ನೋಡಿ | 

‘ಆತ್ಮವಂಚನೆ ಹೇಳಿಕೆ ಬೇಡ’
ಚಿಕ್ಕಮಗಳೂರು: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮನಸ್ಸಿಗೆ ಮೊಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅದು ಅವರಿಗೆ ಶ್ರೇಯಸ್ಕರವಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಮನೆಗಳ ಮುಂದೆ ಮಾರ್ಕ್‌ ಹಾಕಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಲ್ಲಿ, ಯಾರ ಮನೆಗೆ ಮೊಳೆ ಹೊಡೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಬೇಕು. ಆತ್ಮವಂಚನೆಯಿಂದ ಮಾತನಾಡುವುದು ದುರದೃಷ್ಟಕರ’ ಎಂದು ಟೀಕಿಸಿದರು.

‘ಜನರು ಸ್ವಯಂಪ್ರೇರಿತವಾಗಿ ದೇಣಿಗೆ ನೀಡುತ್ತಿದ್ದಾರೆ. ಗುರಿ ಇದ್ದದ್ದು ₹ 1,000 ಕೋಟಿ. 1,511 ಕೋಟಿಗೂ ಅಧಿಕ ಸಂಗ್ರಹವಾಗಿದೆ. ಇನ್ನೂ ₹ 500 ಕೋಟಿಗೂ ಹೆಚ್ಚು ಸಂಗ್ರಹವಾಗಬಹುದು‘ ದಬಾಯಿಸಿ ತೆಗೆದುಕೊಳ್ಳುವ ಅಗತ್ಯ ಇಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು