ಸಂಬಂಧವಿಲ್ಲದೆ ವಿನಾಕಾರಣ ಕೋರ್ಟ್ ಹಾಲ್‌ಗೆ ಬಂದರೆ ಬಂಧಿಸಿ ಜೈಲಿಗೆ: ಹೈಕೋರ್ಟ್

ಬೆಂಗಳೂರು: ‘ವಿನಾಕಾರಣ ಮತ್ತು ಸಂಬಂಧವಿಲ್ಲದ ವ್ಯಕ್ತಿಗಳು ಹೈಕೋರ್ಟ್‌ನಲ್ಲಿನ ಕೋರ್ಟ್ ಹಾಲ್‌ಗಳಿಗೆ ಪ್ರವೇಶಿಸಿದರೆ ಅಂತಹವರನ್ನು ಬಂಧಿಸಿ ನೇರವಾಗಿ ಜೈಲಿಗೆ ಕಳುಹಿಸಲಾಗುವುದು’ ಎಂದು ಹೈಕೋರ್ಟ್ ಕಠಿಣವಾದ ಮೌಖಿಕ ಎಚ್ಚರಿಕೆ ನೀಡಿದೆ.
‘ವಕೀಲರು, ಕಾನೂನು ವಿದ್ಯಾರ್ಥಿಗಳು, ಕೇಸಿಗೆ ಸಂಬಂಧಿಸಿದ ಕಕ್ಷಿದಾರರು, ಅಧಿಕಾರಿಗಳು ಹಾಗೂ ಸಕಾರಣ ಹೊಂದಿದ ವ್ಯಕ್ತಿಗಳಿಗೆ ಮಾತ್ರವೇ ಕೋರ್ಟ್ ಹಾಲ್ ಪ್ರವೇಶ ಇರುತ್ತದೆ’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೇಳಿದೆ.
ಸಚಿವ ಮುನಿರತ್ನ ವಿರುದ್ಧ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ಅಕ್ರಮ ಆರೋಪದ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಮಧ್ಯಾಹ್ನದ ಕಲಾಪದಲ್ಲಿ ವಿಚಾರಣೆ ಮುಂದುವರಿಸಿತು. ಈ ವೇಳೆ ಮುನಿರತ್ನ ಪರ ಹಿರಿಯ ವಕೀಲ ಜಿ.ಕೃಷ್ಣಮೂರ್ತಿ ಅವರು ತುಳಸಿ ಮುನಿರಾಜು ಗೌಡ ಅವರನ್ನು ಪಾಟಿ ಸವಾಲಿಗೆ ಒಳಪಡಿಸಿದರು.
ಸುದೀರ್ಘ ಕಲಾಪದ ಅವಧಿಯುದ್ದಕ್ಕೂ ಹಾಜರಿದ್ದ ಕೆಲವು ವ್ಯಕ್ತಿಗಳನ್ನು ಗಮನಿಸಿದ ನ್ಯಾಯಪೀಠವು, ಕಲಾಪ ಪೂರ್ಣಗೊಳ್ಳುತ್ತಿದ್ದಂತೆಯೇ ಕಳವಳ ವ್ಯಕ್ತಪಡಿಸಿತು. ‘ಹೈಕೋರ್ಟ್ ಎಂದರೆ ಸಾಮಾನ್ಯವಲ್ಲ. ಈ ಕೋರ್ಟ್ ಹಾಲ್‌ನಲ್ಲಿ ಸಂಬಂಧವಿಲ್ಲದ ಅನೇಕ ಮುಖಗಳು ಕಾಣುತ್ತಿವೆ. ಇದು ವೈ ಕೆಟಗರಿಯ ಭದ್ರತೆ ಹೊಂದಿರುವ ಕೋರ್ಟ್ ಹಾಲ್. ಕಲಾಪದಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳು ಏಕೆ ಹಾಜರಿದ್ದಾರೆ’ ಎಂದು ಪ್ರಕರಣದ ಪರ ವಕೀಲರನ್ನು ಪ್ರಶ್ನಿಸಿತು. ಅಂತೆಯೇ, ‘ಇವತ್ತು ಹಾಜರಿದ್ದ ಸಂಬಂಧವಿಲ್ಲದ ವ್ಯಕ್ತಿಗಳ ಇತ್ಯೋಪರಿಗಳನ್ನು ಸಂಗ್ರಹಿಸಿ’ ಎಂದು ಕೋರ್ಟ್ ಅಧಿಕಾರಿ ರಾಘವೇಂದ್ರ ಅವರಿಗೆ ಸೂಚಿಸಿತು.
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಜನಸಾಮಾನ್ಯರು ಹೈಕೋರ್ಟ್ ಪ್ರವೇಶಿಸುವುದಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ಸದ್ಯ ಕೊಂಚ ಪ್ರಮಾಣದಲ್ಲಿ ಮಾತ್ರವೇ ಸಡಿಲಿಕೆ ಮಾಡಲಾಗಿದೆ. ಆದರೂ, ಎಲ್ಲ ಪ್ರವೇಶ ದ್ವಾರಗಳಲ್ಲಿ ರಾಜ್ಯ ಪೊಲೀಸ್, ಕೈಗಾರಿಕಾ ಭದ್ರತಾ ಪಡೆ ಹಾಗೂ ಎ.ಕೆ–47 ರೈಫಲ್‌ಗಳನ್ನು ಹೊಂದಿದ ಕಮಾಂಡೊಗಳ ಸಹಿತದ ಬಿಗಿ ಭದ್ರತೆಯನ್ನು ಮುಂದುವರಿಸಲಾಗಿದೆ.
ಹಿಜಾಬ್ ಪ್ರಕರಣದ ತೀರ್ಪು ನೀಡಿದ ತ್ರಿಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಹಾಗೂ ಖಾಜಿ ಜೈಬುನ್ನೀಸಾ ಮೊಹಿದ್ದೀನ್ ಅವರುಗಳಿಗೆ ‘ವೈ‘ ಕೆಟಗರಿಯ ಭದ್ರತೆ ಒದಗಿಸಲಾಗಿದೆ.
ಪ್ರಮುಖ ಪ್ರಕರಣ: ಹಾಸನ ಕ್ಷೇತ್ರದ ಸಂಸದ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಸಚಿವ ಮುನಿರತ್ನ ಅವರ ವಿರುದ್ಧದ ಚುನಾವಣಾ ತಕರಾರು ಅರ್ಜಿಗಳ ವಿಚಾರಣೆಗಳು ಸದ್ಯ ತುರೀಯಾವಸ್ಥೆಯಲ್ಲಿವೆ.
ಲೋಪವಿಲ್ಲ: ಈ ಕುರಿತಂತೆ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ‘ಹೈಕೋರ್ಟ್ ಸೂಕ್ಷ್ಮ ಸ್ಥಳ ಎಂದೇ ಪರಿಗಣಿಸಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದೇ 26ರಂದು ಗಣರಾಜ್ಯೋತ್ಸವ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿಯೂ ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಕಾಯ್ದುಕೊಂಡು ಹೋಗಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.