ಗುರುವಾರ , ಮಾರ್ಚ್ 30, 2023
32 °C

ರಾಜ್ಯದಲ್ಲಿ ಬೆಲೆ ಇಳಿಕೆ: ಪೆಟ್ರೋಲ್‌ ₹100.63, ಡೀಸೆಲ್‌ ₹85.03

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕೇಂದ್ರ ಸರ್ಕಾರ ಅಬಕಾರಿ ತೆರಿಗೆ ಮತ್ತು ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು ಇಳಿಕೆ ಮಾಡಿರುವುದರಿಂದ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ₹100.63 ಮತ್ತು ಡೀಸೆಲ್‌ ₹85.03ಕ್ಕೆ ತಗ್ಗಲಿದೆ.

ರಾಜ್ಯ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಪ್ರತಿ ಲೀಟರ್‌ ಮೇಲೆ ತಲಾ ₹ 7 ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಪೆಟ್ರೋಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ 35 ರಿಂದ ಶೇ 25.92ಕ್ಕೂ, ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ 24 ರಿಂದ ಶೇ 14.34 ಕ್ಕೆ ಇಳಿಸಿದೆ. ಇದರಿಂದ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ₹113.93 (ಬುಧವಾರದ ದರ) ರಿಂದ ₹100.63 ಕ್ಕೆ ತಗ್ಗಲಿದ್ದು, ಒಟ್ಟು ₹13.30 ಕಡಿತ ಆದಂತಾಗಿದೆ. ಅದೇ ರೀತಿ ಡೀಸೆಲ್‌ ಪ್ರತಿ ಲೀಟರ್‌ಗೆ ಇದ್ದ ದರ ₹104.50 ರಿಂದ ₹85.03 ಕ್ಕೆ ಇಳಿದಿದೆ. ಒಟ್ಟು ₹19.47 ಕಡಿತ ಆದಂತಾಗಿದೆ.

ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತುಡೀಸೆಲ್‌ ದರವನ್ನು ಕ್ರಮವಾಗಿ ₹10 ಮತ್ತು ₹5 ಕ್ಕೆ ಇಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದರು. ಬುಧವಾರ ಈ ಸಂಬಂಧ ಟ್ವೀಟ್‌ ಮಾಡಿದ್ದ ಬೊಮ್ಮಾಯಿ, ‘ರಾಜ್ಯದಲ್ಲಿ ಪೆಟ್ರೋಲ್‌ ಲೀಟರ್‌ಗೆ ₹95.50 ಮತ್ತು ಡೀಸೆಲ್‌ ₹81.50 ಆಗುವ ನಿರೀಕ್ಷೆ ಇದೆ. ಇದರಿಂದ ಬೊಕ್ಕಸಕ್ಕೆ ₹2,100 ಕೋಟಿ ನಷ್ಟ ಆಗಲಿದೆ’ ಎಂದು ಹೇಳಿದ್ದರು.

‘ಹೋರಾಟ ಮುಂದುವರಿಯಲಿದೆ’

 ‘ಅಡುಗೆ ಅನಿಲ ಸೇರಿ ಎಲ್ಲ ವಸ್ತುಗಳ ಬೆಲೆ ಇಳಿಸುವವರೆಗೂ ಕಾಂಗ್ರೆಸ್‌ ಹೋರಾಟ ಮುಂದುವರಿಸಲಿದೆ. ಇದೇ 14ರಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ, ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಉಪ ಚುನಾವಣೆ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿ’ ಎಂದರು. ‘ಕಬ್ಬಿಣ, ಸೀಮೆಂಟ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯೂ ಇಳಿಯಬೇಕು. ಯುವಕರಿಗೆ ಉದ್ಯೋಗ ಸಿಗಬೇಕು. ಇಂಧನ ಬೆಲೆ ಇಳಿಸಿದ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಆದರೆ ತೆರಿಗೆ ಹೆಸರಲ್ಲಿ ಲೂಟಿ ಮಾಡಿರುವ ಹಣ ಜನರಿಗೆ ತಲುಪಬೇಕು. ಈ ಆಡಳಿತ ವಿರುದ್ಧ ಜನ ಬೇಸತ್ತಿದ್ದಾರೆ ಎಂಬುದು ಎಲ್ಲರಿಗೂ ಮನದಟ್ಟಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು