ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ PFI ಕಾರ್ಯಕರ್ತರಿಂದ ಏಕಾಏಕಿ ಪ್ರತಿಭಟನೆ: ಲಾಠಿ ಚಾರ್ಜ್

50ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ
Last Updated 22 ಸೆಪ್ಟೆಂಬರ್ 2022, 12:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪಿಎಫ್‌ಐ ಮುಖಂಡರ ಮನೆಗಳ ಮೇಲೆ ಎನ್‌ಐಐ ದಾಳಿ ಖಂಡಿಸಿ, ನಗರದ ಕೌಲ್‌ಪೇಟೆ ಬಳಿ ಬೆಂಗಳೂರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ಬುಧವಾರ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಎಸ್‌ಡಿಪಿಐ ಬಾವುಟ ಹಿಡಿದ ನೂರಕ್ಕೂ ಹೆಚ್ಚು ಮಂದಿ ಮಧ್ಯಾಹ್ನ 3.40ರ ಸುಮಾರಿಗೆ ರಸ್ತೆಯಲ್ಲಿ ಜಮಾಯಿಸಿದರು. ಮಾನವ ಸರಪಳಿ ರಚಿಸಿ, ‘ಗೋ ಬ್ಯಾಕ್ ಎನ್‌ಐಎ’ ಎಂದು ಜೋರಾಗಿ ಕೂಗುತ್ತಾ ರಸ್ತೆಗೆ ಅಡ್ಡವಾಗಿ ನಿಂತರು.

ಸ್ಥಳಕ್ಕೆ ಬಂದ ಪೊಲೀಸರು ರಸ್ತೆ ತಡೆಯದೆ, ಶಾಂತವಾಗಿ ಪ್ರತಿಭಟಿಸುವಂತೆ ಸೂಚಿಸಿದರೂ, ಕಾರ್ಯಕರ್ತರು ಘೋಷಣೆಗಳನ್ನು ಮುಂದುವರಿಸಿದರು. ಪೊಲೀಸ್ ಕಮಿಷನರ್ ಲಾಭೂರಾಮ್, ಡಿಸಿಪಿಗಳು, ಎಸಿಪಿಗಳ ಮಾತಿಗೂ ಕಿವಿಗೊಡಲಿಲ್ಲ.

ಕಡೆಗೆ ಪೊಲೀಸರು ಕಾರ್ಯಕರ್ತರನ್ನು ರಸ್ತೆಯಿಂದ ಪಕ್ಕಕ್ಕೆ ತಳ್ಳಲು ಯತ್ನಿಸಿದರು. ಈ ವೇಳೆ, ಪರಸ್ಪರ ತಳ್ಳಾಟ ಉಂಟಾಯಿತು. ಕಡೆಗೆ ಲಘು ಲಾಠಿ ಪ್ರಹಾರ ನಡೆಸಿದರು. ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೇದಾರ ಸೇರಿದಂತೆ ಸ್ಥಳದಲ್ಲಿದ್ದ ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ಪ್ರತಿಭಟನಾಕಾರರನ್ನು ಚದುರಿಸಿದರು.

50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು, ಪೊಲೀಸ್ ಮತ್ತು ಶಾಲಾ ವಾಹನದಲ್ಲಿ ಕರೆದೊಯ್ದರು. ಏಕಾಏಕಿ ನಡೆದ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.

‘ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದಾಗ, ಅವರನ್ನು ಚದುರಿಸಿದ್ದೇವೆ. 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ವಶಕ್ಕೆ ಪಡೆದಿರುವವರ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಲಾಭೂರಾಮ್ ಮಾಧ್ಯಮದವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT