ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯವ್ಯಾಪಿ ದ್ವಿಭಾಷಾ ಪ್ರಯೋಗಾಲಯಗಳ ಸ್ಥಾಪನೆಗೆ ಚಿಂತನೆ: ಡಾ.ಬಿ.ಕೆ.ಎಸ್.ವರ್ಧನ್

ಪ್ರಾದೇಶಿಕ ಇಂಗ್ಲಿಷ್ ಭಾಷಾ ಸಂಸ್ಥೆಯ ನಿರ್ದೇಶಕ ಡಾ. ಬಿ.ಕೆ.ಎಸ್.ವರ್ಧನ್ ಹೇಳಿಕೆ
Last Updated 22 ಫೆಬ್ರುವರಿ 2022, 17:38 IST
ಅಕ್ಷರ ಗಾತ್ರ

ಧಾರವಾಡ: ‘ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯೊಂದಿಗೆ ಅಂತಾರಾಷ್ಟ್ರೀಯ ಸಂವಹನ ಭಾಷೆಯಾಗಿರುವ ಇಂಗ್ಲಿಷ್ ಕಲಿಕೆಯನ್ನೂ ಪ್ರೋತ್ಸಾಹಿಸಲುರಾಜ್ಯವ್ಯಾಪಿ ದ್ವಿಭಾಷಾ ಪ್ರಯೋಗಾಲಯಗಳ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದು ಬೆಂಗಳೂರಿನ ದಕ್ಷಿಣ ಭಾರತ ವಲಯದ ಪ್ರಾದೇಶಿಕ ಇಂಗ್ಲಿಷ್ ಭಾಷಾ ಸಂಸ್ಥೆಯ ನಿರ್ದೇಶಕ ಡಾ. ಬಿ.ಕೆ.ಎಸ್.ವರ್ಧನ್ ಹೇಳಿದರು.

ಇಲ್ಲಿನ ಡಯಟ್‌ನಲ್ಲಿರುವ ಭಾಷಾ ಪ್ರಯೋಗಾಲಯಕ್ಕೆ ಮಂಗಳವಾರ ಭೇಟಿ ನೀಡಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.

‘ಈಗಾಗಲೇ ವಿಭಾಗ ಮಟ್ಟದಲ್ಲಿ ಆಲೂರ ವೆಂಕಟರಾವ್ ಭಾಷಾ ಪ್ರಯೋಗಾಲಯಗಳಿದ್ದು, ಅವುಗಳನ್ನು ಹಂತ ಹಂತವಾಗಿ ಜಿಲ್ಲೆ, ತಾಲ್ಲೂಕು ಮತ್ತು ಕ್ಲಸ್ಟರ್ ಮಟ್ಟಕ್ಕೂ ವಿಸ್ತರಿಸುವ ಗುರಿ ಹೊಂದಲಾಗಿದೆ’ ಎಂದರು.

‘ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಜೀವನ ಕೌಶಲಗಳ ಭಾಗವಾಗಿ ಜಾಗತಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಗೆ ಒತ್ತು ನೀಡಲಾಗಿದೆ. ದೇಶದಾದ್ಯಂತ ಇಂಗ್ಲಿಷ್ ಕಲಿಕೆ ಇರುವ ಅವಕಾಶಗಳನ್ನು ಸಂವರ್ಧಿಸುವಲ್ಲಿ ಮಾದರಿ ತಂತ್ರಾಂಶಗಳ ಫಲಗಳನ್ನು ಪರಿಚಯಿಸಿ ಆ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಸುಲಭವಾಗಿ ತಂತ್ರಾಂಶ ಆಧಾರಿತ ಇಂಗ್ಲಿಷ್ ಕಲಿಕೆಗೆ ಯೋಜನೆ ರೂಪಿಸಲಾಗುವುದು’ ಎಂದರು.

‘ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಮಾತೃಭಾಷೆ ಕನ್ನಡದೊಂದಿಗೆ ಇಂಗ್ಲಿಷ್ ಕಲಿಕೆಯನ್ನು ಅರಿಯಲು, ಬರೆಯಲು, ಮಾತನಾಡಲು ಮತ್ತು ನಿರರ್ಗಳವಾಗಿ ಅಭಿವ್ಯಕ್ತಿಸಿ ಸಂವಹನ ಮಾಡುವ ಸಾಮರ್ಥ್ಯ ಸಂಪಾದಿಸುವಲ್ಲಿ ರಾಜ್ಯದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರೊಂದಿಗೆ ಮೊದಲ ಸುತ್ತಿನ ಚಿಂತನಾ ಸಭೆ ನಡೆಸಲಾಗಿದೆ’ ಎಂದರು.

‘ವಿಶೇಷವಾಗಿ ಹಳ್ಳಿಗಾಡಿನ ವಿದ್ಯಾರ್ಥಿಗಳು ದ್ವಿಭಾಷಾ ಕಲಿಕೆಗೆ ತೆರೆದುಕೊಳ್ಳುವಂತೆ ರಾಜ್ಯದಾದ್ಯಂತ ವಾತಾವರಣ ನಿರ್ಮಿಸಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸುವ ವಿಸ್ತೃತ ಆಲೋಚನೆಗಳನ್ನು ಬೆಂಗಳೂರಿನ ದಕ್ಷಿಣ ಭಾರತ ವಲಯದ ಪ್ರಾದೇಶಿಕ ಇಂಗ್ಲಿಷ್ ಭಾಷಾ ಸಂಸ್ಥೆ ಹೊಂದಿದೆ’ ಎಂದು ಡಾ.ವರ್ಧನ್ ಹೇಳಿದರು.

ಇದೇ ಸಂದರ್ಭದಲ್ಲಿ ಡಯಟ್ ಹಿರಿಯ ಉಪನ್ಯಾಸಕ ಜೆ.ಜಿ. ಸೈಯ್ಯದ್, ಇ.ಎಲ್.ಟಿ.ಸಿ. ವಿಭಾಗದ ಪ್ರಶಿಕ್ಷಕಿ ಅಫ್ರೋಜಾ ಕಾಥೇವಾರಿ, ಪ್ರಶಿಕ್ಷಕ ಈರಯ್ಯ ವೆಂಕಟಾಪೂರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT