ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಎಸ್‌ವೈ ಕೆಳಗಿಳಿಸುವ ಪ್ರಕ್ರಿಯೆ ಆರಂಭ: ಯತ್ನಾಳ

ಏ.30ರೊಳಗೆ ನಾಯಕತ್ವ ಬದಲಾವಣೆ
Last Updated 8 ಏಪ್ರಿಲ್ 2021, 15:37 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಕ್ರಿಯೆಯು ಏ.17ರಂದು ಉಪ ಚುನಾವಣೆ ಮತದಾನ ಮುಗಿಯುತ್ತಿದ್ದಂತೆಯೇ ಆರಂಭವಾಗಲಿದೆ. ಏ. 30ರ ಒಳಗೆ ನಾಯಕತ್ವ ಬದಲಾವಣೆ ಕೆಲಸ ಪೂರ್ಣಗೊಳ್ಳಲಿದೆ. ಮೇ 2ರವರೆಗೆ ಕಾಯಬೇಕಿಲ್ಲ’ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಇದ್ದಾಗ ನಮ್ಮ ಸಮಾಜಕ್ಕೆ ಏನು ಕೊಡುಗೆ ನೀಡಿದರು? ಪ್ರವರ್ಗ 2ಎಗೆ ಸೇರಿಸಲು ಶೆಟ್ಟರ್ ವಿರೋಧಿಸಿದರು ಎಂದು ಸಚಿವ ಸಂಪುಟದಲ್ಲಿರುವ ನಾಲಾಯಕ್ (ಮುರುಗೇಶ ನಿರಾಣಿ) ಇದ್ದಾರಲ್ಲಾ ಅವರು ಹಬ್ಬಿಸಿದರು. ಹೀಗಾಗಿ, ಶೆಟ್ಟರ್‌ ವಿರುದ್ಧ ಸಮಾಜಕ್ಕೆ ಸಿಟ್ಟಿದೆ. ಅದನ್ನು ರಾಜ್ಯದಲ್ಲಿ ಇಟ್ಟುಕೊಳ್ಳಿ. ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಇರುವುದರಿಂದ ಬೆಂಬಲಿಸುವಂತೆ ಸಮುದಾಯವನ್ನು ಕೇಳಿಕೊಳ್ಳಲು ಶುಕ್ರವಾರ (ಏ.9)ದಿಂದ ಪ್ರಚಾರ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಮನೆ ಕಳೆದುಕೊಂಡಿರುವ ಪ್ರವಾಹ ಸಂತ್ರಸ್ತರಿಗೆ ₹ 5 ಲಕ್ಷ ಪರಿಹಾರ ನೀಡಲು, ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ. ಆದರೆ, ರಾಜ್ಯ ಮತ್ತು ದೇಶದ ಭ್ರಷ್ಟ ರಾಜಕಾರಣಿಗಳು ಫೆಡರಲ್ ಬ್ಯಾಂಕ್‌ ಮೂಲಕ ವಿದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ಇಟ್ಟಿದ್ದೇಗೆ? ದೊಡ್ಡ ದೊಡ್ಡ ಕುಳಗಳೇ ಇದರಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ತನಿಖೆ ಮಾಡಿಸುತ್ತಾರೆ’ ಎಂದು ತಿಳಿಸಿದರು.

‘ಪಕ್ಷದವರು ಕುದುರೆಯನ್ನು (ಅಧಿಕಾರ) ನನಗೇಕೆ ಕೊಡಬಾರದು? ಸಮರ್ಥ, ಭ್ರಷ್ಟಾಚಾರರಹಿತ, ಪ್ರಾಮಾಣಿಕ ಹಾಗೂ ಹಿಂದುತ್ವದ ಸರ್ಕಾರ ಬೇಕಿದ್ದರೆ ಕೊಟ್ಟೇ ಕೊಡುತ್ತಾರೆ. ಕುದುರೆ ಏರಲು ಉತ್ತರ ಕರ್ನಾಟಕದವರು ಸಮರ್ಥರಿದ್ದೇವೆ. ಪಕ್ಷ ಬಯಸಿದರೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಮಾದರಿ ಸರ್ಕಾರ ನೀಡಲು ಸಿದ್ಧವಿದ್ದೇನೆ’ ಎಂದರು.

‘ನೆನ್ನೆ–ಮೊನ್ನೆ ಬಂದವರೇ ಕೇಳುತ್ತಿದ್ದಾರೆ. ಪಕ್ಷ ಕಟ್ಟಿರುವ ನಾನು ಮುಖ್ಯಮಮಂತ್ರಿ ಸ್ಥಾನದ ಅಪೇಕ್ಷೆ ಪಡಬಾರದೇಕೆ?’ ಎಂದು ಕೇಳಿದರು.

‘ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ಬಹಳ ವಿರೋಧ ವ್ಯಕ್ತಪಡಿಸಿದರು. ಈಗ, ಮಸ್ಕಿಯಲ್ಲಿ ವೀರಶೈವ ಲಿಂಗಾಯತ, ಪಂಚಮಸಾಲಿ ಸಮಾಜದ ಮತ ಕೇಳುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ?’ ಎಂದರು.

‘ವಿಧಾನಸಭೆ ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗುವಂತೆ ಮುಖ್ಯಮಂತ್ರಿ ನಿತ್ಯವೂ ಕರೆ ಮಾಡುತ್ತಿದ್ದರು. ಆದರೆ, ಈಗ ಯತ್ನಾಳ್ ಬೆಳೆದರೆ ನನ್ನ ಮಗನನ್ನು ಆ ಭಗವಂತನೂ ಕಾಪಾಡಲಾರ ಎಂದು ತಿಳಿದು ನನ್ನನ್ನು ಮನೆಯಲ್ಲಿ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಹೇಗೆ ರಾಜಕಾರಣ ಮಾಡಬೇಕು ಎನ್ನುವುದು ನನಗೂ ಗೊತ್ತಿದೆ’ ಎಂದು ತಿರುಗೇಟು ನೀಡಿದರು.

‘ಯತ್ನಾಳ್ ನಾಲಾಯಕ್‌’ ಎಂಬ ಸಚಿವ ಮುರುಗೇಶ ನಿರಾಣಿ ಹೇಳಿಕೆಗೆ, ‘ಯಾರು ಸಪ್ಲೈ ಮಾಡುತ್ತಾರೆಯೋ ಅವರು ನಾಲಾಯಕ್. ನಾನಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT