ಶುಕ್ರವಾರ, ಮಾರ್ಚ್ 24, 2023
30 °C

‘ಪುಸ್ತಕ ಖರೀದಿಗೆ ₹ 25 ಕೋಟಿ ಮೀಸಲಿಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಗಟು ಪುಸ್ತಕ ಖರೀದಿಗೆ ಪ್ರತಿವರ್ಷ ಆಯವ್ಯಯದಲ್ಲಿ ₹ 25 ಕೋಟಿ ಅನುದಾನ ಮೀಸಲಿಡಬೇಕು’ ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು ಸರ್ಕಾರವನ್ನು ಒತ್ತಾಯಿಸಿದೆ. 

‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಪುಸ್ತಕ ಖರೀದಿ ಯೋಜನೆಯಡಿಯಲ್ಲಿ ಪ್ರತಿ ವರ್ಷ 3,700ರಿಂದ 4 ಸಾವಿರ ಶೀರ್ಷಿಕೆಗಳನ್ನು ಖರೀದಿಸಲಾಗುತ್ತಿದೆ. 2019ನೇ ಸಾಲಿನಲ್ಲಿ ಆಯ್ಕೆಯಾದ 3,704 ಪುಸ್ತಕಗಳನ್ನು ತಲಾ 300 ಪ್ರತಿಗಳಂತೆ ಖರೀದಿಸಿ, ಅರ್ಧದಷ್ಟು ಬಿಲ್ (₹ 8 ಕೋಟಿ) ಪಾವತಿಸಲಾಗಿದೆ. ಏಪ್ರಿಲ್ 2022ರಲ್ಲಿ ಖರೀದಿಸಿದ ಪುಸ್ತಕಗಳ ₹ 8.40 ಕೋಟಿ ಬಾಕಿ ಇದೆ. ಇದರಿಂದಾಗಿ ಲೇಖಕರು ಹಾಗೂ ಪ್ರಕಾಶಕರು ಹಣ ಪಾವತಿಗಾಗಿ ಸಾರ್ವಜನಿಕ ಗ್ರಂಥಾಲಯಕ್ಕೆ ಅಲೆದು ಸುಸ್ತಾಗಿದ್ದಾರೆ’ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. 

‘ಇಲಾಖೆಯ ನಿರ್ದೇಶಕರು ಅನುದಾನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಸಬೂಬು ಹೇಳುತ್ತಾರೆ. ಸರ್ಕಾರದ ಮೇಲೆ ಹಲವು ರೀತಿಯ ಒತ್ತಡ ತಂದರೂ ಹಣ ಬಿಡುಗಡೆಯಾಗದೆ ಸಾವಿರಾರು ಲೇಖಕರು ಹಾಗೂ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜ್ಞಾನವನ್ನು ಪಸರಿಸುವ, ಲಾಭದಾಯಕವಲ್ಲದ ಪುಸ್ತಕ ಖರೀದಿ ಹಣಕ್ಕಾಗಿ ಹಪಹಪಿಸುವಂತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.

‘ಮುದ್ರಣ ವೆಚ್ಚ ದುಬಾರಿಯಾಗಿರುವುದರಿಂದ ಪುಟಕ್ಕೆ 30 ಪೈಸೆ ಹೆಚ್ಚಿಸುವಂತೆ ಸಲ್ಲಿಸಿರುವ ಪ್ರಸ್ತಾವನೆಯೂ ಸರ್ಕಾರದ ಹಂತದಲ್ಲಿದೆ. ಪುಸ್ತಕೋದ್ಯಮವನ್ನು ನಿಕೃಷ್ಟವಾಗಿ ನೋಡಬಾರದು. ಲೇಖಕರು ಹಾಗೂ ಪ್ರಕಾಶಕರನ್ನು ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಸಂಘದ ಕಾರ್ಯದರ್ಶಿ ಆರ್. ದೊಡ್ಡೇಗೌಡ ಆಗ್ರಹಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು