ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಸಭಾಪತಿ ಸ್ಥಾನಕ್ಕೆ ಪ್ರತಾಪ್‌ಚಂದ್ರ ಶೆಟ್ಟಿ ರಾಜೀನಾಮೆ

Last Updated 4 ಫೆಬ್ರುವರಿ 2021, 14:52 IST
ಅಕ್ಷರ ಗಾತ್ರ

ಬೆಂಗಳೂರು:'ಸಂಖ್ಯಾ ಬಲಾಬಲದ ಮೇಲೆ ಸಭಾಪತಿ ಆಯ್ಕೆ ನಡೆಯುತ್ತದೆ. ತಾಂತ್ರಿಕವಾಗಿ ನಾನು ಸಭಾಪತಿಯಾಗಿ ಮುಂದುವರಿಯಲು‌ ಅವಕಾಶವಿದೆ. ಆದರೆ, ನೈತಿಕ‌ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವುದರಿಂದ ಪೀಠಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.

ನನ್ನ ಮನಸ್ಸು ನಿರಾಳವಾಗಿದೆ, ಜವಾಬ್ದಾರಿ ಮುಗಿದಿದೆ, ಸದನದ ನಿಯಮದಂತೆ ಉಪ ಸಭಾಪತಿಗಳಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಪೀಠತ್ಯಾಗ ಮಾಡುತ್ತಿದ್ದೇನೆ ಎಂದರು.

ವಿಧಾನ ಪರಿಷತ್ ನಲ್ಲಿ ವಿದಾಯ ಭಾಷಣ ಮಾಡಿದ ಸಭಾಪತಿ, ಸದನದ ಘನತೆ, ಚ್ಯುತಿ ಬಾರದಂತೆ ನಡೆದುಕೊಳ್ಳುವ ಅನಿವಾರ್ಯತೆ‌ ವಿಧಾನ ಪರಿಷತ್ ಎಲ್ಲಾ ಸದಸ್ಯರಿಗೆ‌ ಇದೆ. ಕೆಲವೊಮ್ಮೆ ಸದನದ ಸದಸ್ಯರ ಬದಲಾದಂತೆ ನಿಲುವುಗಳು ಬದಲಾಗುತ್ತವೆ. ಅಂತಹ ನಿಲುವುಗಳಿಗೆ ಹಿಡಿತದಲ್ಲಿದ್ದರೂ ಗೌರವ ಸಲ್ಲಿಸಬೇಕಾಗುತ್ತದೆ. ಇದಕ್ಕೆ ನಾನು ಕೂಡ ಹೊರತಾಗಿಲ್ಲ. ನನ್ನ ಮೇಲಿನ ನಂಬಿಕೆ ಕಡಿಮೆಯಾಗಿದೆ ಎಂಬ ವಿಚಾರ ಅರಿತು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ.

ಮುಂದಿನ ಬಜೆಟ್ ಅಧಿವೇಶನದ ವರೆಗೂ ಈ ಸ್ಥಾನದಲ್ಲಿ ಇರುವ ಅವಕಾಶ ನನಗಿತ್ತು. ಆದರೆ ಎಲ್ಲರ ಬಯಕೆ ಬೇರೆಯದೇ ಆಗಿರುವ ಹಿನ್ನೆಲೆ ಈ ಸ್ಥಾನದಲ್ಲಿ ಇನ್ನೂ ಹೆಚ್ಚು ಸಮಯ ಮುಂದುವರಿಯ ದಿರಲು ತೀರ್ಮಾನಿಸಿದ್ದೇನೆ ಎಂದರು.

ಇತಿಹಾಸ ನೆನಪಿಸಿಕೊಂಡ ಸಭಾಪತಿ

113 ವರ್ಷಗಳ ಹಿನ್ನೆಲೆಯ ಇರುವ ವಿಧಾನ ಪರಿಷತ್ ಗೆ ಭವ್ಯ ಇತಿಹಾಸವಿದೆ. ಚಿಂತಕರ ಚಾವಡಿ ಎಂದು ಜನ ಬಣ್ಣಿಸಿದ್ದಾರೆ. ಈ ಸಭಾಪತಿ ಪೀಠವು ಜವಾಬ್ದಾರಿಯುತ ಸ್ಥಾನವಾಗಿದೆ. ಜವಾಬ್ದಾರಿಯುತ ಸ್ಥಾನದ ಗೌರವ ಎತ್ತಿ ಹಿಡಿಯಬೇಕಿದೆ. 37 ವರ್ಷ ಜನಪ್ರತಿನಿಧಿಯಾಗಿ ನಡೆ, ನುಡಿಯಲ್ಲಿ ಬದಲಾಗದೇ ಸಾಗಿ ಬಂದಿದ್ದೇನೆ. ಜನ ಸಾಮಾನ್ಯರಲ್ಲಿ ನಂಬಿಕೆ ಬದಲಾಗುವ ವಾತಾವರಣ ಗಮನಿಸಿದ್ದೇನೆ. ನಾವೆಲ್ಲಾ ಒಳ್ಳೆಯವರು, ಜವಾಬ್ದಾರಿ ನಿಭಾಯಿಸುವಾಗ, ಪಕ್ಷ ಬದಲಾವಣೆ ಇತ್ಯಾದಿ. ಇಷ್ಟವಿಲ್ಲದಿದ್ದರೂ 12-12-2018 ರಂದು ಬೆಳಗಾವಿಯಲ್ಲಿ ನನ್ನನ್ನು ಸಭಾಪತಿಯಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮಭಾವನೆಗೆ ಧಕ್ಕೆ ಆಗದಂತೆ ನಡೆದುಕೊಂಡಿದ್ದೇನೆ. ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ. ಇಂತಹ ಸ್ಥಾನ ಕತ್ತಿಯ ಮೇಲಿನ ಅಲುಗಿನ ಮೇಲಿನ ನಡಿಗೆಯಾಗಿದೆ ಎಂಬ ಅರಿವಿದೆ. ಪಕ್ಷಗಳ ಸ್ಥಾನ ಬದಲಾದಾಗ ಸಭಾಪತಿ ಪೀಠದ ನಿಭಾಯಿಸುವ ವ್ಯಕ್ತಿಗಳು‌ ಬದಲಾಗುತ್ತಾರೆ. ಸಹವರ್ತಿಗಳು ಹಲವರು ನನ್ನ ಆತ್ಮೀಯರು. ಇಂದಿನ ಬದಲಾದ ವ್ಯವಸ್ಥೆಗೆ ಬಲಿಯಾಗಿ ಹಲವರು ಇಂದು ನನ್ನ ವಿಚಾರದಲ್ಲಿ ಪೂರ್ಣ ಮನಸ್ಸಿನಿಂದ ಕೈಗೊಂಡಿದ್ದು ಅಲ್ಲ ಎನ್ನುವುದು ನನಗೆ ಗೊತ್ತಿದೆ.

ಇಲ್ಲಿ ಸ್ಥಾನಗಳ ಬಲಾಬಲದ ಮೇಲೆ ಸಭಾಪತಿಗಳು ಬದಲಾದರೆ ನೈಜ ಗೌರವ ಉಳಿಯುವುದಿಲ್ಲ. ಅಂಕೆ ಸಂಖ್ಯೆಗಳ ಆಧಾರದಲ್ಲಿ ನನ್ನ ಅವಧಿಯಲ್ಲಿ ಒಂದು ಅಹಿತಕರ ಘಟನೆ‌ಕೂಡ ನಡೆದಿದೆ. ನೈತಿಕತೆಯ ಅರಿವು ನನಗಿದೆ. ರಾಜ್ಯಪಾಲರಿಗೆ ನನ್ನ ಅವಧಿಯ ಎಲ್ಲಾ ಮಾಹಿತಿ ನೀಡಿದ್ದೇನೆ. ಇಲ್ಲಿನ ಅಹಿತಕರ ಘಟನೆ ಸವಿಸ್ತಾರ, ನ್ಯಾಯಯುತ ತನಿಖೆ ನಡೆಸುವ ಕಾರ್ಯ ಮಾಡಿದ್ದೇನೆ. ಸಮಿತಿ ರಚನೆ ಮಾಡಿದ್ದು ಅದು ಮದ್ಯಂತರ ವರದಿ ಕೂಡ ಸಲ್ಲಿಸಿದ್ದು ಪರಿಷತ್ತಿನಲ್ಲಿ ಅದನ್ನು ಮಂಡಿಸಲಾಗಿದೆ. ಸಮಿತಿ ಮನವಿ ಮೇರೆಗೆ ಮೂರು ತಿಂಗಳ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ನನ್ನ ಕಾಲಾವಧಿಯಲ್ಲಿ ಯಾವುದೇ ರೀತಿ ಪೀಠಕ್ಕೆ ಬಾರದ ರೀತಿ ನಡೆದುಕೊಂಡಿದ್ದೇನೆ. ಪಕ್ಷ ಬೇಧ ತೋರದೆ ನ್ಯಾಯಯುತವಾಗಿ ನಡೆದುಕೊಂಡಿದ್ದೇನೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಅಂತಿಮವಾಗಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿ ಪೀಠದಿಂದ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT