ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತನಾಡುವ ರಾಷ್ಟ್ರಪತಿಯ ಅಗತ್ಯವಿದೆ, ರಬ್ಬರ್ ಸ್ಟಾಂಪ್ ಅಲ್ಲ: ಯಶವಂತ ಸಿನ್ಹಾ

Last Updated 3 ಜುಲೈ 2022, 8:19 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶಕ್ಕೆ ಮಾತನಾಡುವ ರಾಷ್ಟ್ರಪತಿ ಬೇಕು. ಮೌನಿಯಾಗಿರುವ ರಾಷ್ಟ್ರಪತಿ ಅಥವಾ ರಬ್ಬರ್ ಸ್ಟಾಂಪ್ ರಾಷ್ಟ್ರಪತಿಯ ಅಗತ್ಯ ಇಲ್ಲ’ ಎಂದು ಕಾಂಗ್ರೆಸ್‌ ಮತ್ತು ಇತರ ಬೆಂಬಲಿತ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಪುನರುಚ್ಚರಿಸಿದರು.

ಇದೇ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಶಾಂಗ್ರಿ–ಲಾ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿ ಮತ ಯಾಚಿಸಿದ ಬಳಿಕ ಅವರು ಮಾತನಾಡಿದರು.

‘ವಿರೋಧ ಪಕ್ಷಗಳ ನಾಯಕರು ಮಾತನಾಡುವ ಪರಿಸ್ಥಿತಿ ಇಲ್ಲ. ಯಾರಾದರೂ ಏನಾದರೂ ಮಾತಾಡಿದರೆ ತನಿಖಾ ಸಂಸ್ಥೆಗಳಿಂದ ನೋಟಿಸ್‌ಬರುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗೋವಾ, ಅರುಣಾಚಲ ಪ್ರದೇಶದಲ್ಲಿ ಏನೇನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಹಾಲಿ ಸರ್ಕಾರಗಳನ್ನು ಉರುಳಿಸುವ ಕೆಲಸ ಪ್ರಜಾಪ್ರಭುತ್ವ ವಿರೋಧಿ ಕೆಲಸ. ಬಿಜೆಪಿಯು ಬೇರೆ ಸರ್ಕಾರಗಳನ್ನು ಉರುಳಿಸುವ ಕೆಲಸ ಮಾಡುತ್ತಿರುವುದು ಒಪ್ಪುವಂಥದ್ದಲ್ಲ’ ಎಂದರು.

‘ಎರಡು ದಿನಗಳ ಹಿಂದೆ ನೂಪುರ್ ಶರ್ಮಾ ಬಗ್ಗೆ ಸುಪ್ರೀಂ ಕೋರ್ಟ್ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ನ್ಯಾಯಾಂಗವು ಸಂವಿಧಾನಕ್ಕೆ ಉತ್ತರದಾಯಿ ಆಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ನಾನು ಸ್ವಾಗತಿಸುತ್ತೇವೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಸುಪ್ರೀಂಕೋರ್ಟ್‌ನ ಅಭಿಪ್ರಾಯ ಬಗ್ಗೆ ಟೀಕೆ ಟಿಪ್ಪಣಿ ಮಾಡಲಾಗುತ್ತಿದೆ. ಕೆಟ್ಟದಾಗಿ ಟೀಕೆ ಮಾಡಲಾಗುತ್ತಿದೆ. ನ್ಯಾಯಾಂಗದ ಮೇಲಿನ ಇಂಥ ಟೀಕೆ ಪ್ರಜಾಪ್ರಭುತ್ವಕ್ಕೆ ಕಳಂಕ’ಎಂದರು.

‘ಸುಪ್ರೀಂ ಕೋರ್ಟ್ ತಮಗೆ ಅನುಕೂಲಕರ ತೀರ್ಪು ಕೊಟ್ಟರೆ ಸಂಭ್ರಮಪಡುತ್ತಾರೆ. ತಮಗೆ ಬೇಡವಾದ ತೀರ್ಪು, ಅಭಿಮತ ಬಂದರೆ ತೆಗಳುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಡಿ, ಸಿಬಿಐ, ಐಟಿ ದುರ್ಬಳಕೆ‌ ಆಗುತ್ತಿವೆ‘ ಎಂದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ವಿರೋಧ ಪಕ್ಷಗಳು ಸಿನ್ಹಾ ಅವರನ್ನು ಅಭ್ಯರ್ಥಿ‌ ಮಾಡಿವೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಿನ್ಹಾ ಅವರು ರಾಷ್ಟ್ರಪತಿ ಆಗುವ ಅಗತ್ಯ ಇದೆ’ಎಂದರು.

‘ಯಶವಂತ್ ಸಿನ್ಹಾ ಅವರು ಈ ಹಿಂದೆ ಕೇಂದ್ರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಇವತ್ತು ದೇಶದಲ್ಲಿ ಅವರು ಎತ್ತರದ ರಾಜಕಾರಣಿ, ಹಿರಿಯರು, ಮುತ್ಸದ್ಧಿ. ದೇಶದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ’ ಎಂದರು.

‘ಮತ ಹಾಕುವಂತೆ ಶಾಸಕರಲ್ಲಿ ಅವರು ಮನವಿ ಮಾಡಿಕೊಂಡರು. ಯಶವಂತ ಸಿನ್ಹಾ ಅವರಿಗೆ ಮತ ಹಾಕಲು ಸಭೆಯಲ್ಲಿ ನಾವು ಸ್ಪಷ್ಟ ತೀರ್ಮಾನ ತೆಗೆದುಕೊಂಡಿದ್ದೇವೆ. ನಮ್ಮ ಎಲ್ಲ ಮತಗಳು ಸಿನ್ಹಾ ಅವರಿಗೆ ಸಿಗುತ್ತವೆ ಎಂಬ ವಿಶ್ವಾಸ ನನಗಿದೆ. ಸಿನ್ಹಾ ಅವರು ಗೆಲ್ಲುವ ವಿಶ್ವಾಸ ಇದೆ’ಎಂದರು.

ಶಾಸಕಾಂಗ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಶಾಸಕರಾದ ಆರ್.ವಿ. ದೇಶಪಾಂಡೆ, ಯು.ಟಿ‌. ಖಾದರ್, ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ಎಂ.ಕೃಷ್ಣಪ್ಪ, ಪ್ರಿಯಾಂಕ್ ಖರ್ಗೆ, ಅಂಜಿಲಿ ನಿಂಬಾಳ್ಕರ್, ಕುಸುಮಾ ಶಿವಳ್ಳಿ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT