ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ್ ಕಶ್ಯಪ್‌ನ ‘ಕೊರೊನಾ ಯುಗ’ಕ್ಕೆ ‘ಬಾಲ ಪುರಸ್ಕಾರ’

Last Updated 25 ಜನವರಿ 2021, 19:52 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ‘ಆವಿಷ್ಕಾರ’ ವಿಭಾಗದಲ್ಲಿ ಪ್ರಧಾನಮಂತ್ರಿ ‘ರಾಷ್ಟ್ರೀಯ ಬಾಲ ಪುರಸ್ಕಾರ’ಕ್ಕೆ ಆಯ್ಕೆಯಾದ 10ರ ಹರೆಯದ ವೀರ್‌ ಕಶ್ಯಪ್‌, ರಾಜರಾಜೇಶ್ವರಿ ನಗರದ ವಿನಾಯಕ ಕೆ.- ಸಂಗೀತಾ ಎಚ್‌.ಸಿ ದಂಪತಿಯ ಪುತ್ರ.ಲಾಕ್‌ಡೌನ್‌ ಅವಧಿಯಲ್ಲಿ ಅಜ್ಜನ ಮನೆಯೊಳಗೆ ಬಂಧಿಯಾಗಿದ್ದ ಸಂದರ್ಭದಲ್ಲಿ ಕೊರೊನಾ ಜಾಗೃತಿಗಾಗಿ ವೀರ್‌ ಕಶ್ಯಪ್‌ ರೂಪಿಸಿದ ‘ಗೇಮ್‌ ಬೋರ್ಡ್‌’ ಆತನಿಗೆ ಪುರಸ್ಕಾರದ ಗರಿ ಮುಡಿಗೇರಿಸಿದೆ.

ವಿನಾಯಕ ಅವರು ಕೊಚ್ಚಿಯಲ್ಲಿರುವ ಭಾರತೀಯ ನೌಕಾನೆಲೆಯಲ್ಲಿ ಕಮಾಂಡರ್‌. ಹೀಗಾಗಿ, ಅವರ ಕುಟುಂಬ ಕೊಚ್ಚಿಯಲ್ಲಿ ನೆಲೆಸಿದೆ. ವೀರ್‌ ಕಶ್ಯಪ್‌ ಅಲ್ಲಿನ ನೇವಿ ಚಿಲ್ಡ್ರನ್ ಶಾಲೆಯಲ್ಲಿ (ಎನ್‌ಸಿಎಸ್‌) 5ನೇ ತರಗತಿಯ ವಿದ್ಯಾರ್ಥಿ. ಪುತ್ರನ ಸಾಧನೆಯನ್ನು ದೂರವಾಣಿ ಮೂಲಕ ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ತಾಯಿ ಸಂಗೀತಾ, ‘ಪತಿಯ ಉದ್ಯೋಗದ ಕಾರಣಕ್ಕೆ ಕೊಚ್ಚಿಯಲ್ಲಿ ನೆಲೆಸಿದ್ದರೂ ಬೆಂಗಳೂರಿನ ಆರ್‌.ಆರ್‌. ನಗರದಲ್ಲಿ ನಮ್ಮ ಮನೆಯಿದೆ. ಅಲ್ಲಿ ಅತ್ತೆ, ಮಾವ ಅಲ್ಲಿದ್ದಾರೆ. ದೆಹಲಿಯಲ್ಲಿದ್ದ ನಾವು ಆಗಸ್ಟ್ ತಿಂಗಳಲ್ಲಿ ಇಲ್ಲಿಗೆ ಬಂದೆವು. ವೀರ್‌ ಕಶ್ಯಪ್‌ ನಾಲ್ಕನೇ ತರಗತಿವರೆಗೆ ದೆಹಲಿಯಲ್ಲಿ ಓದಿದ್ದ’ ಎಂದರು.

‘ಮೊದಲ ಹಂತದ ಲಾಕ್‌ಡೌನ್‌ ಅವಧಿಯಲ್ಲಿ (2020ರ ಏಪ್ರಿಲ್) ತನ್ನ ಅಜ್ಜನ ಮನೆಯಲ್ಲಿದ್ದ ಸಂದರ್ಭದಲ್ಲಿ ‘ಕೊರೊನಾ–ಯುಗ’ ಎಂಬ ಗೇಮ್‌ ಬೋರ್ಡ್‌ನ್ನು ವೀರ್ ಕಶ್ಯಪ್ ಆವಿಷ್ಕರಿಸಿದ್ದ. ಕೊರೊನಾ ವೈರಸ್‌ ಮಾದರಿಯಲ್ಲಿ ರಚಿಸಿದ್ದ ಆ ಬೋರ್ಡ್‌ನಲ್ಲಿ, ಕ್ವಾರಂಟೈನ್‌
ಅವಧಿಯಲ್ಲಿ ನಾವು ಎದುರಿಸುವ ಸವಾಲುಗಳ ಪರಿಸ್ಥಿತಿ ಹಾಗೂ ಅನುಭವಗಳ ಬಗ್ಗೆ ಆಡವಾಡಲು ಅವಕಾಶ ಕಲ್ಪಿಸಿದ್ದ’ ಎಂದು ಹೇಳಿದರು.

‘ಕೊರೊನಾ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಕ್ಕಳಿಗೆ ಮತ್ತು ಹಿರಿಯರಿಗೆ ಪರಿಣಾಮಕಾರಿಗಾಗಿ ಜಾಗೃತಿ ಮೂಡಿಸುವಂತೆ ಆ ಗೇಮ್‌ ಬೋರ್ಡ್‌ ರೂಪುಗೊಂಡಿತ್ತು. ಯೋಗಕ್ಕೆ ಉತ್ತೇಜನ, ಅಂತರ ಕಾಪಾಡಬೇಕೆಂಬ ಎಚ್ಚರಿಕೆ, ಕೊರೊನಾ ಸೇನಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲು ಈ ಗೇಮ್‌ನಲ್ಲಿ ಅವಕಾಶವಿತ್ತು. ಕೊರೊನಾ ದಿನಗಳು ಹೇಗಿದ್ದವು ಎನ್ನುವ ಬಗ್ಗೆಯೂ ಭವಿಷ್ಯದಲ್ಲಿಯೂ ನೆನಪು ಮಾಡುವಂತೆ ಗೇಮ್‌ ಬೋರ್ಡ್‌ನ್ನು ರಚಿಸಿದ್ದ’

‘ಕೋವಿಡ್‌ ವಿರುದ್ಧದ ಹೋರಾಟದ ಭಾಗವಾಗಿ ಈ ಗೇಮ್‌ ಬೋರ್ಡ್ ಮಾರಾಟ ಮಾಡಿ ಬಂದ ಲಾಭದ ಹಣದಲ್ಲಿ ವೀರ್
ಕಶ್ಯಪ್‌ ₹ 1,000ವನ್ನು ‘ಪಿಎಂ ಕೇರ್ಸ್‌’ ನಿಧಿಗೆ ದೇಣಿಗೆ ನೀಡಿದ್ದಾನೆ. ಈ ಪರಿಕಲ್ಪನೆಗೆ ಹಲವು ಗೇಮ್‌ ಬೋರ್ಡ್‌ ವಿನ್ಯಾಸಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದರಿಂದ ಉತ್ತೇಜಿತನಾಗಿ ಗೂಗಲ್‌ ಜಾಲತಾಣದ ಮೂಲಕ ‘ಬೋರ್ಡ್‌ ಗೇಮ್‌ ಡಿಸೈನ್‌ ಸ್ಪರ್ಧೆ–2020’ಯನ್ನೂ ಏರ್ಪಡಿಸಿ, ವಿಜೇತರಿಗೆ ಉಚಿತವಾಗಿ ತನ್ನ ಬೋರ್ಡ್‌ ಗೇಮ್‌’ ನೀಡಿದ್ದ. ಬೋರ್ಡ್ ಗೇಮ್‌ ಉದ್ಯಮದ ಕೆಲವರು ಈ ಪರಿಕಲ್ಪನೆಗೆ ಪ್ರೋತ್ಸಾಹ ನೀಡಲು ಮುಂದೆ ಬಂದಿದ್ದಾರೆ. ಪ್ರಧಾನಿಯ ಕನಸಾದ ‘ಆತ್ಮನಿರ್ಭರ್‌ ಭಾರತ್‌’ದ ಭಾಗವಾಗಿಯೇ ‘ಗೇಮ್‌ ಬೋರ್ಡ್‌’ ಆವಿಷ್ಕರಿಸಿದ್ದ. ಹೀಗಾಗಿ, ಪುರಸ್ಕಾರಕ್ಕೆ ಪಾತ್ರವಾಗಿದೆ’ ಎಂದೂ ಸಂಗೀತಾ ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT