ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್‌ ಆಸ್ತಿ: ಸಂರಕ್ಷಣೆಗೆ ಬದ್ಧ

ಮುಂದಿನ ಅಧಿವೇಶನದಲ್ಲಿ ಚರ್ಚೆ: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ಹೇಳಿಕೆ
Last Updated 5 ಜನವರಿ 2021, 12:11 IST
ಅಕ್ಷರ ಗಾತ್ರ

ಮಡಿಕೇರಿ: ರಾಜ್ಯದಲ್ಲಿ ವಕ್ಫ್‌ ಆಸ್ತಿ ಒತ್ತುವರಿ ಸಂಬಂಧ ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಭರವಸೆ ನೀಡಿದ್ದಾರೆ. ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ಅವರು ಇಲ್ಲಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಸುಮಾರು 1 ಲಕ್ಷದ ಎಕರೆಯಷ್ಟು ವಕ್ಫ್‌ ಆಸ್ತಿ ಒತ್ತುವರಿ ಆಗಿರಬಹುದು. ಸರ್ಕಾರವು ತನಿಖೆ ನಡೆಸುತ್ತದೆಯೋ ಅಥವಾ ಒತ್ತುವರಿದಾರರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತದೆಯೋ ಗೊತ್ತಿಲ್ಲ. ಸರ್ಕಾರದ ನಿರ್ಧಾರದಂತೆ ಕ್ರಮ ಕೈಗೊಳ್ಳಲಾವುದು’ ಎಂದು ಅಜೀಂ ಹೇಳಿದರು.

‘ಮಡಿಕೇರಿಯಲ್ಲೂ ಜಾಮೀಯಾ ಮಸೀದಿಗೆ ಸೇರಿರುವ ಆಸ್ತಿ ಒತ್ತುವರಿಯಾಗಿದೆ ಎಂದು ಮುಖಂಡರು ಮನವಿ ಸಲ್ಲಿಸಿದ್ದಾರೆ. ಆ ಮನವಿಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗೆ ನೀಡುತ್ತೇನೆ. ಬಳಿಕ ಸ್ಥಳೀಯ ಅಧಿಕಾರಿಗಳಿಂದಲೂ ಮತ್ತೊಂದು ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಈ ಹಿಂದೆ ಬಿಜೆಪಿ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಹಳೆ ಕಾಯ್ದೆಯನ್ನೇ ಉಳಿಸಿಕೊಂಡಿತ್ತು. ಇದೀಗ ಮತ್ತೆ ಬಿಜೆಪಿ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಅದಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕರೂ ಪರಿಷತ್‌ನಲ್ಲಿ ಒಪ್ಪಿಗೆ ದೊರೆತಿಲ್ಲ. ಸುಗ್ರೀವಾಜ್ಞೆಯ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಪಡೆಯಲು ಸರ್ಕಾರ ಮುಂದಾಗಿದೆ’ ಎಂದು ಅಜೀಂ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಾಟೆ ಹೊರತು ಪಡಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆ ಎಂದು ಅಜೀಂ ಹೇಳಿದರು.

ಶ್ಲಾಘನೆ: ಕೊಡಗು ಕೊರೊನಾ ಸೋಂಕಿತ ಪ್ರಕರಣಗಳು ನಿಯಂತ್ರಣದಲ್ಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಕರಣಗಳು ಪತ್ತೆಯಾದರೂ ಕೊಡಗಿನಲ್ಲಿ ನಿಯಂತ್ರಣದಲ್ಲಿತ್ತು. ಜಿಲ್ಲಾಡಳಿತದ ಎಚ್ಚರಿಕೆ ಕ್ರಮದಿಂದ ಅದು ಸಾಧ್ಯವಾಗಿದೆ. 2015ರ ಬಳಿಕ ಕೊಡಗು ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕದಡುವಂತಹ ಗಲಾಟೆ ನಡೆದಿಲ್ಲ. ಇದು ಒಳ್ಳೆಯ ಬೆಳವಣಿಗೆ. ಪೊಲೀಸರು ತಿಂಗಳಿಗೆ ಒಮ್ಮೆ ಧಾರ್ಮಿಕ ಮುಖಂಡರ ಸಭೆ ನಡೆಸಿದರೆ ಮತ್ತಷ್ಟು ಸೌಹಾರ್ದತೆ ಹೆಚ್ಚಲಿದೆ ಎಂದು ಹೇಳಿದರು.

ಮುಖಂಡ ಕೆ.ಎ.ಯಾಕೂಬ್‌ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT