ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರ ಪ್ರತಿಮೆ ಅನಾವರಣ: ಶಿಷ್ಟಾಚಾರ ಉಲ್ಲಂಘನೆ ಆರೋಪ, ಮುಂದುವರಿದ ವಾಕ್ಸಮರ

ಎಚ್‌ಡಿಡಿ ಹೆಸರಿಲ್ಲ–ಟೀಕೆ
Last Updated 12 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಸಮಾರಂಭದಿಂದ ವಿರೋಧ ಪಕ್ಷಗಳ ಪ್ರಮುಖರನ್ನು ದೂರ ಇಟ್ಟಿರುವುದು ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ತೀವ್ರ ವಾಕ್ಸಮರಕ್ಕೆ ಎಡೆಮಾಡಿದೆ. ಸರ್ಕಾರದ ನಿಲುವಿಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿವೆ.

ಒಕ್ಕಲಿಗ ಸಮುದಾಯದ ಪ್ರಮುಖ ರಾಜಕಾರಣಿಯೂ ಆಗಿರುವ ರಾಜ್ಯಸಭೆಯ ಜೆಡಿಎಸ್‌ ಸದಸ್ಯ ಎಚ್‌.ಡಿ. ದೇವೇಗೌಡರು ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಅವರಿಗೆ ಆಹ್ವಾನವನ್ನೇ ನೀಡಿರಲಿಲ್ಲ ಎಂದು ಜೆಡಿಎಸ್‌ ಶುಕ್ರವಾರವೇ ದೂರಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರಿಗೆ ಬರೆದಿದ್ದ ಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಬಿಜೆಪಿ ಮುಖಂಡರು, ‘ಕೆಂಪೇಗೌಡರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಆಹ್ವಾನ ನೀಡಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದಿದ್ದರು. ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಹಲವರು ಇದೇ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಅದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ನಾಯಕರು, ‘ಮುಖ್ಯಮಂತ್ರಿ ಕಚೇರಿಯಿಂದ ಕಾಟಾಚಾರಕ್ಕೆ ಎಂಬಂತೆ ಆಹ್ವಾನ ನೀಡಲಾಗಿತ್ತು. ತಡರಾತ್ರಿ ಪತ್ರ ಕಳುಹಿಸಿದ್ದರು’ ಎಂದು ತಿರುಗೇಟು ನೀಡಿದ್ದಾರೆ.

ಜೆಡಿಎಸ್‌ ವಕ್ತಾರ ಗಂಗಾಧರಮೂರ್ತಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ಸಮಾರಂಭದ ಆಹ್ವಾನ ಪತ್ರಿಕೆಯ ಪ್ರತಿಯೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದೇವೇಗೌಡರ ಹೆಸರು ಇಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಇತರ ಎಲ್ಲ ರಾಜ್ಯಸಭಾ ಸದಸ್ಯರು, ಬೆಂಗಳೂರಿನ ಎಲ್ಲ ಶಾಸಕರು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಗಡಿ ಶಾಸಕ ಮಂಜುನಾಥ್‌ ಸೇರಿದಂತೆ ಹಲವರ ಹೆಸರು ಇವೆ.

ಶಿಷ್ಟಾಚಾರ ಉಲ್ಲಂಘನೆ ಆರೋಪಕ್ಕೆ ಕಾಂಗ್ರೆಸ್‌ ಕೂಡ ದನಿಗೂಡಿಸಿದೆ. ತಮಗೆ ಅಧಿಕೃತ ಆಹ್ವಾನ ನೀಡಿರಲಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿಯು ಕೆಂಪೇಗೌಡರ ಪ್ರತಿಮೆ ಅನಾವರಣ ಸಮಾರಂಭವನ್ನು ರಾಜಕೀಯಕ್ಕೆ ಬಳಸಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸತ್ಯ ಹೇಳುವ ದಮ್‌ ತೋರಿಸಲಿ: ಜೆಡಿಎಸ್‌
ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಮಾಜಿ ಪ್ರಧಾನಿಯೂ ಆಗಿರುವ ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡರಿಗೆ ಆಹ್ವಾನ ನೀಡಿರುವ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸತ್ಯ ಹೇಳುವ ದಮ್‌ ತೋರಿಸಲಿ ಎಂದು ಜೆಡಿಎಸ್‌ ಸವಾಲು ಹಾಕಿದೆ.

ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಿಂದ ಶನಿವಾರ ಸರಣಿ ಟ್ವೀಟ್‌ ಮಾಡಿದ್ದು, ‘ಮಾಡಿದ ತಪ್ಪನ್ನು ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲ ಪಕ್ಷಕ್ಕೆ ಸಿದ್ಧಿಸಿರುವ ಕಲೆ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ. ಆದರೆ, ಮುಖ್ಯಮಂತ್ರಿಯವರೇ ಪತ್ರ ಬರೆದು ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ದಿಕ್ಕು ತಪ್ಪಿಸುತ್ತಿದೆ. ಅಸಲಿ ಕತೆಯನ್ನು ಮುಚ್ಚಿಡುತ್ತಿದೆ’ ಎಂದು ದೂರಿದೆ.

ನವೆಂಬರ್‌ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದು ಯಾವಾಗ? ಪತ್ರವನ್ನು ದೇವೇಗೌಡರ ಮನೆಗೆ ತಲುಪಿಸಿದ್ದು ಯಾವಾಗ? ಪತ್ರದಲ್ಲಿ ಮಾಜಿ ಪ್ರಧಾನಿಯವರ ಹೆಸರನ್ನು ಎಲ್ಲಿ ಬರೆಯಲಾಗಿತ್ತು? ಶುಕ್ರವಾರ ಮಧ್ಯಾಹ್ನ 12.50ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಲು ಮುಖ್ಯಮಂತ್ರಿಯವರು ಗುರುವಾರ ರಾತ್ರಿ 9 ಗಂಟೆಗೆ ಕಾಟಾಚಾರದ ಕರೆ ಮಾಡಿದ್ದರು. ರಾತ್ರಿ 12.30ರ ನಂತರ ತಲುಪಿಸಿದ್ದರು. ಇದರಲ್ಲಿ ಸುಳ್ಳಾಡುವುದೇನಿದೆ ಎಂದು ಕೇಳಿದೆ.

*
ಸಮಾರಂಭಕ್ಕೆ ಅಧಿಕೃತವಾಗಿ ಆಹ್ವಾನ ಪತ್ರಿಕೆ ಮುದ್ರಿಸಿರಲಿಲ್ಲ. ಮುಖ್ಯಮಂತ್ರಿಯವರೇ ದೇವೇಗೌಡರಿಗೆ ದೂರವಾಣಿ ಕರೆಮಾಡಿ ಆಹ್ವಾನಿಸಿದ್ದರು. ಪತ್ರವನ್ನೂ ಬರೆದಿದ್ದರು. ಇದರಲ್ಲಿ ತಪ್ಪು ಹುಡುಕುವಂಥದ್ದೇನೂ ಇಲ್ಲ.
– ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ

*

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಸಂಜೆ 7 ಗಂಟೆಗೆ ನನಗೆ ಕರೆಮಾಡಿ ಸಮಾರಂಭಕ್ಕೆ ಬರುವಂತೆ ಆಹ್ವಾನಿಸಿದರು. ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಹೆಸರು ಪ್ರಕಟಿಸಿಲ್ಲ ಎಂದು ನಾನು ಅವರಿಗೆ ಹೇಳಿದೆ. ಬೇರೆ ಸಭೆಯ ಕಾರಣಕ್ಕೆ ಸಮಾರಂಭಕ್ಕೆ ಬರುವುದಿಲ್ಲ ಎಂದೂ ಹೇಳಿದ್ದೆ.
– ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ.

*
ಈ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ. ದೇವೇಗೌಡ, ಡಿ.ಕೆ. ಶಿವಕುಮಾರ್‌, ಎಸ್‌.ಎಂ. ಕೃಷ್ಣ ಬೇಡ. ಅವರಿಗೆ ಕೇವಲ ಚುನಾವಣೆ ಮತ್ತು ಮತಬ್ಯಾಂಕ್‌ ಮಾತ್ರ. ಅವರಿಂದ ಏನನ್ನೂ ನಿರೀಕ್ಷೆ ಮಾಡಬಾರದು.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

*
ಎಚ್‌.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಮುಖ್ಯಮಂತ್ರಿ ಸೇರಿದಂತೆ ಇತರ ಹುದ್ದೆಗಳನ್ನು ಅನುಭವಿಸಿದ್ದಾರೆ. ಎಲ್ಲಿಯೂ ಕೆಂಪೇಗೌಡರ ಹೆಸರಿಟ್ಟಿಲ್ಲ ಮತ್ತು ಪ್ರತಿಮೆ ಸ್ಥಾಪಿಸಿಲ್ಲ. ತಾವು ಮಾಡದ್ದನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂಬ ಹೊಟ್ಟೆ ಕಿಚ್ಚು ಅವರಿಗೆ.
– ಪ್ರಲ್ಹಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

*
ರಾಜಕಾರಣಕ್ಕೋಸ್ಕರ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗಿದೆ. ದೇವೇಗೌಡರಿಗೆ ಕಾಟಾಚಾರದ ಆಹ್ವಾನ ನೀಡಲಾಗಿತ್ತು. ರಾತ್ರಿ 12.45ಕ್ಕೆ ಯಾರದ್ದೋ ಕೈಯ್ಯಲ್ಲಿ ಪತ್ರ ಕಳುಹಿಸಿದ್ದರು. ಅವರಿಗೆ ನಾಗರಿಕತೆಯೇ ಇಲ್ಲ.
– ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT