ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಮಹತ್ವದ ತಿರುವು: ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ

ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು
Last Updated 22 ಏಪ್ರಿಲ್ 2022, 11:08 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು, ಶುಕ್ರವಾರ ಮತ್ತೆ ಇಬ್ಬರನ್ನು ವಶಕ್ಕೆ ಪಡೆದರು.

ನಗರದ ನಿವಾಸಿ ವಿಶಾಲ್ ಶಿರೂರ ಎಂಬ ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆಯ ನಡೆಸಲಾಗುತ್ತಿದೆ. ಹಗರಣದ ಕೇಂದ್ರಸ್ಧಾನವಾದ ಇಲ್ಲಿನ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಕೇಂದ್ರದಲ್ಲೇ ಈತ ಕೂಡ ಪರೀಕ್ಷೆ ಬರೆದಿದ್ದಾನೆ ಎಂದು ಸಿಐಡಿ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ವಿಶಾಲ್ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿದ ಅನುಮಾನವಿದ್ದು, ಇದರೊಂದಿಗೆ ಹಗರಣ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ.

ಇಷ್ಟು ದಿನ ಒಎಂಆರ್ ಶೀಟಿನಲ್ಲಿ ಅಕ್ರಮ ನಡೆಸಿದ ಬಗ್ಗೆಯೇ ಜಾಲಾಡುತ್ತಿದ್ದ ಅಧಿಕಾರಿಗಳು, ಈಗತನಿಖೆಯಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ್ದಾರೆ.

ಪರೀಕ್ಷಾ ಕೇಂದ್ರದ ಒಳಗೆ ಎಲೆಕ್ಟ್ರಾನಿಕ್ ಉಪಕರಣ ಬಳಸಿದ ವಿಷಯ ಹೊರಬಿದ್ದ ತಕ್ಷಣ ತನಿಖೆಯನ್ನು ಮತ್ತಷ್ಟು ಆಯಾಮಗಳಲ್ಲಿ ಚುರುಕುಗೊಳಿಸಿದ್ದಾರೆ.

ಡೀಲ್ ಮಾಡಿದವನೂ ವಶಕ್ಕೆ: ಗುರುವಾರ ಬಂಧಿಸಲಾದ ಶಾಸಕ ಎಂ.ವೈ.ಪಾಟೀಲ ಅವರ ಗನ್‌ಮ್ಯಾನ್ ಹಯ್ಯಾಳಿ ದೇಸಾಯಿ ಎಂಬಾತನಿಗೆ ಅಕ್ರಮ ನಡೆಸಲುಸಹಾಯ ಮಾಡಿದ ಆರೋಪದ ಮೇಲೆ ಅಫಜಲಪುರದ ಶರಣಬಸಪ್ಪ ಎಂಬಾತನನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಇಬ್ಬರನ್ನೂ ಶುಕ್ರವಾರ ನಸುಕಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಧ್ಯಾಹ್ನ ಬಂಧಿಸಿ ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಮಾಹಿತಿ ನೀಡಿವೆ.

ಈ ಇಬ್ಬರ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಗುರುವಾರ ಬಂಧಿಸಲಾದ ಗನ್‌ಮ್ಯಾನ್ ಹಯ್ಯಾಳಿ ಹಾಗೂ ಸಿಎಆರ್ ಪೊಲೀಸ್ ಕಾನ್‌ಸ್ಟೆಬಲ್ ರುದ್ರಗೌಡ ಪಾಟೀಲ ಅವರನ್ನು ಶುಕ್ರವಾರ ನ್ಯಾಯಾಧೀಶರ ಮುಂದೆ ಹಾಜರು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT