ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ (ಪಾಲಿಗ್ರಫ್) ಒಳಪಡಿಸಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದು, ಈ ಸಂಬಂಧ ನ್ಯಾಯಾಲಯಕ್ಕೆ ಸದ್ಯದಲ್ಲೇ ಕೋರಿಕೆ ಸಲ್ಲಿಸುವ ಸಾಧ್ಯತೆ ಇದೆ.
ಪಿಎಸ್‌ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಇರಿಸಿದ್ದ ಕೊಠಡಿಯಲ್ಲಿ ಅಕ್ರಮ ನಡೆದಿರುವುದನ್ನು ಪುರಾವೆ ಸಮೇತ ಈಗಾಗಲೇ ಪತ್ತೆ ಮಾಡಿರುವ ಅಧಿಕಾರಿಗಳು, ತೀವ್ರ ನಿಗಾದಲ್ಲಿದ್ದ ಕೊಠಡಿ ಬೀಗ ತೆರೆದವರು ಯಾರು? ಹಾಗೂ ಬೀಗದ ಕೀ ಕೊಟ್ಟವರು ಯಾರು? ಎಂಬುದನ್ನು ಸಾಕ್ಷ್ಯ ಸಮೇತ ತಿಳಿಯಲು ಮುಂದಾಗಿದ್ದಾರೆ.
ಭದ್ರತಾ ಕೊಠಡಿ ಬೀಗಕ್ಕೆ ಎರಡು ಕೀಲಿ ಕೈ (ಕೀ)ಗಳಿದ್ದವು. ಒಂದು ಕೀ ಎಡಿಜಿಪಿ ಬಳಿ ಇತ್ತು. ಇನ್ನೊಂದು, ವಿಭಾಗದ ಸೂಪರಿಂಟೆಂಡೆಂಟ್ ಸುನೀತಾ ಅವರ ಬಳಿಯಿತ್ತು. ನ್ಯಾಯಾಲ ಯದ ಅನುಮತಿ ಪಡೆದು ಸುನೀತಾ ಅವರನ್ನು ಈಗಾಗಲೇ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಬರುವುದು ಬಾಕಿ ಇದೆ.
‘545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್ ಅಸಲು ಪ್ರತಿಗಳನ್ನು ಟ್ರಂಕ್‌ಗಳಲ್ಲಿ ಇರಿಸಿ, ಬೆಂಗ ಳೂರಿನಲ್ಲಿರುವ ನೇಮಕಾತಿ ವಿಭಾಗದ ಭದ್ರತಾ ಕೊಠಡಿಗೆ ಕಳುಹಿಸಲಾಗಿತ್ತು. ನಂತರ, ಕೊಠಡಿಗೆ ಬೀಗ ಹಾಕಿ ಸೀಲ್ ಮಾಡಲಾಗಿತ್ತು’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಪೌಲ್ ಅವರೇ ಭದ್ರತಾ ಕೊಠಡಿ ಕೀ ಕೊಟ್ಟು, ಒಎಂಆರ್ ಪ್ರತಿಗಳನ್ನು ತಿದ್ದುಪಡಿ ಮಾಡಿಸಿದ್ದರೆಂದು ಆರೋಪಿ ಶಾಂತಕುಮಾರ್ ಹಾಗೂ ಇತರೆ ಆರೋ ಪಿಗಳು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ, ಈ ಆರೋಪವನ್ನು ಎಡಿಜಿಪಿ ತಳ್ಳಿಹಾಕುತ್ತಿದ್ದಾರೆ. ಹೀಗಾಗಿ, ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯಕ್ಕೆ ಸದ್ಯದಲ್ಲೇ ಕೋರಿಕೆ ಸಲ್ಲಿಸಲಾಗುವುದು’ ಎಂದು ಹೇಳಿವೆ.
‘ಎಡಿಜಿಪಿ ಬಳಿ ಇದ್ದ ಒಂದು ಕೀ ಬಳಸಿಕೊಂಡು ಒಎಂಆರ್ ತಿದ್ದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಎಡಿಜಿಪಿ ಕೀ ಕೊಟ್ಟಿರುವ ಬಗ್ಗೆ ಬಲವಾದಸಾಕ್ಷ್ಯ ಬೇಕಿದೆ. ಸುಳ್ಳು ಪತ್ತೆ ಪರೀಕ್ಷೆ ನಡೆಸಿದರೆ, ಎಲ್ಲವೂ ಹೊರಗೆ ಬರಲಿದೆ’ ಎಂದೂ ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.