ಬುಧವಾರ, ಸೆಪ್ಟೆಂಬರ್ 22, 2021
24 °C
ಬಿಜೆಪಿ ಒಗ್ಗಟ್ಟು ಉಳಿಯಬಹುದೇ? ವಿಷಯದ ಕುರಿತು ‘ಪ್ರಜಾವಾಣಿ’ ಸಂವಾದ

‘ಬಿಜೆಪಿ ಒಡೆಯಲು ಹೊರಗಿನ ವೈರಿಗಳು ಬೇಕಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ಚುರುಕುಗೊಂಡಿವೆ. ಯಡಿಯೂರಪ್ಪ ಅವರ ಅಧಿಕಾರ ಕಳೆದುಕೊಳ್ಳಲು ಕಾರಣಗಳೇನು, ಇದರಿಂದ ರಾಜ್ಯಕ್ಕೆ, ಬಿಜೆಪಿಗೆ ಲಾಭ–ನಷ್ಟಗಳೇನು, ಬಿಜೆಪಿಯ ಒಗ್ಗಟ್ಟು ಉಳಿಯಬಹುದೇ?

‘‍ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ, ಸಿಪಿಐ ರಾಜ್ಯ ಮುಖಂಡ ಸಿದ್ದನಗೌಡ ಪಾಟೀಲ, ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ರಾಜಕೀಯ ವಿಶ್ಲೇಷಕ ಮುಜಾಫರ್ ಅಸ್ಸಾದಿ ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ವಿವರ ಇಲ್ಲಿದೆ.

‘ಅಧ್ಯಾಯ ಮುಗಿದಿದೆ, ಪುಸ್ತಕ ಅದೇ’

ಯಡಿಯೂರಪ್ಪ ರಾಜೀನಾಮೆಯಿಂದ ಕರ್ನಾಟಕ ಬಿಜೆಪಿ ರಾಜಕೀಯ ಅಧ್ಯಾಯವೊಂದು ಮುಗಿದಿದೆ. ಆದರೆ, ಅದೇ ಪುಸ್ತಕದ ಮುಂದಿನ ಅಧ್ಯಾಯದ ಆರಂಭವಾಗಲಿದೆ. ಪುಸ್ತಕದ ಸತ್ವ ಅದೇ ಇರಲಿದೆ, ಶೀರ್ಷಿಕೆ ಬದಲಾಗಲಿದೆ ಅಷ್ಟೇ. ಯಡಿಯೂರಪ್ಪ ಅವರಿಗೆ ಸ್ವಂತ ನಿರ್ಧಾರ ಕೈಗೊಳ್ಳಲು ಅವಕಾಶ ಇರಲಿಲ್ಲ. ರಾಜ್ಯಸಭೆ, ವಿಧಾನ ಪರಿಷತ್ತಿಗೆ ಸದಸ್ಯರ ನೇಮಕ, ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ವತಂತ್ರ ಇರಲಿಲ್ಲ. ಮುಂದೆ ಯಾರೇ ಮುಖ್ಯಮಂತ್ರಿ ಆದರೂ ಇದೇ ರೀತಿಯ ಸ್ಥಿತಿ ಇರಲಿದೆ. ಹೊಸ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಯಡಿಯೂರಪ್ಪ ಅವರ ಪಾತ್ರ ಏನೂ ಇರುವುದಿಲ್ಲ. ತಮ್ಮ ಕೈಗೊಂಬೆ ಆಗುವವರನ್ನೇ ಹೈಕಮಾಂಡ್ ಮುಖ್ಯಮಂತ್ರಿ ಮಾಡಿಕೊಳ್ಳಲಿದೆ. ಯಡಿಯೂರಪ್ಪ ಅವರು ತಮಗೆ ಬೇಕಾದ ಒಂದಷ್ಟು ಜನರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸಬಹುದು ಅಷ್ಟೇ.

–ಸಂದೀಪ್ ಶಾಸ್ತ್ರಿ, ರಾಜಕೀಯ ವಿಶ್ಲೇಷಕ

‘ತಲೆಮಾರಿನ ಬದಲಾವಣೆ ಆಗಬೇಕಿದೆ’

ವ್ಯಕ್ತಿಗಳ ಬದಲಾವಣೆ ಅಷ್ಟೇ ಅಲ್ಲ. ರಾಜಕೀಯದಲ್ಲಿ ತಲೆಮಾರಿನ ಬದಲಾವಣೆ ಆಗಬೇಕಿದೆ. ಇದನ್ನು ಮನಗಂಡೇ ಬಿಜೆಪಿ ಹೈಕಮಾಂಡ್‌ ಅನಿರೀಕ್ಷಿತ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣವೇ ಮುಖ್ಯಮಂತ್ರಿ ಬದಲಾವಣೆಗೆ ಪ್ರಮುಖ ಕಾರಣ. ಅಪವಾದಗಳ ಹೊಣೆ ಹೊತ್ತು ಅವರು ನಿರ್ಗಮಿಸುತ್ತಿದ್ದಾರೆ. ಮಗನ ಕೈಗೆ ಅಧಿಕಾರ ಕೊಟ್ಟು ನೈತಿಕ ಬಲವನ್ನು ಯಡಿಯೂರಪ್ಪ ಕುಗ್ಗಿಸಿಕೊಂಡರು. ಸ್ವಯಂಕೃತ ಅಪರಾಧ ಮಾಡುವ ಮೂಲಕ ಕೇಂದ್ರಕ್ಕೆ ಬಾರ್‌ಕೋಲನ್ನು ಅವರೇ ಕೊಟ್ಟರು. ಇಂತವರನ್ನೇ ಮತ್ತೆ ಆಯ್ಕೆ ಮಾಡಿದರೆ ಯಾವುದೇ ಪ್ರಯೋಜನ ಆಗಲಾರದು. ರಾಕ್ಷಸ ರಾಜಕಾರಣ, ಕೌಟುಂಬಿಕ ಸ್ವಾರ್ಥ, ಒಳ ಸಂಧಾನದ ರಾಜಕಾರಣ ಅಂತ್ಯವಾಗಬೇಕಿದೆ.

–ರವೀಂದ್ರ ರೇಷ್ಮೆ, ಹಿರಿಯ ಪತ್ರಕರ್ತ

‘ಲಿಂಗಾಯತ ಸಮುದಾಯ ಸರಳವಾಗಿ ಪರಿಗಣಿಸದು’

ಕಾಂಗ್ರೆಸ್‌, ಜೆಡಿಎಸ್‌ನಿಂದ ಬಿಜೆಪಿಗೆ ಸೇರಿದ 17 ಶಾಸಕರಿಗೆ ಈಗಾಗಲೇ ಭಯ ಬಂದಿದೆ. ಹೊಸ ಸರ್ಕಾರದಲ್ಲಿ ಅವರನ್ನು ಹೊರಗಿಡುವ ಸಾಧ್ಯತೆಯೂ ಇದೆ. ಅವರನ್ನು ಬಳಕೆ ಮಾಡಿಕೊಂಡದ್ದು ಆಗಿದೆ. ಬಿಜೆಪಿಯಲ್ಲಿನ ಒಗ್ಗಟ್ಟು ಉಳಿಯುವುದು ಯಡಿಯೂರಪ್ಪ ಅವರಿಗೆ ಸಿಗುವ ಗೌರವಯುತ ನಿರ್ಗಮನವನ್ನು ಆಧರಿಸಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಒಗ್ಗಟ್ಟು ಕುಸಿಯುತ್ತಾ ಹೋಗುತ್ತದೆ. ಬಿಜೆಪಿಯನ್ನು ಒಡೆಯಲು ಹೊರಗಿನ ಶಕ್ತಿಗಳ ಹೋರಾಟ ಮುಂದಿನ ದಿನಗಳಲ್ಲಿ ಅಗತ್ಯ ಇರುವುದಿಲ್ಲ. ಹಿಂದಿನ ಚುನಾವಣೆಯಲ್ಲಿ ಸಿಕ್ಕ ಮತಗಳನ್ನು ಸೆಳೆದುಕೊಳ್ಳುವುದು ಕಷ್ಟ ಆಗಬಹುದು. ಏಕೆಂದರೆ ಮುಖ್ಯಮಂತ್ರಿ ಬದಲಾವಣೆಯನ್ನು ಲಿಂಗಾಯತ ಸಮುದಾಯ ಸುಲಭವಾಗಿ ಸ್ವೀಕರಿಸಲಾರದು. ಅದಕ್ಕಾಗಿ ಯಡಿಯೂರಪ್ಪ ಅವರನ್ನು ದೃತರಾಷ್ಟ್ರನ ರೀತಿಯಲ್ಲಿ ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆ ಇದೆ.

– ಮುಜಾಫರ್ ಅಸ್ಸಾದಿ, ರಾಜಕೀಯ ವಿಶ್ಲೇಷಕ 

‘ಹೊಸತನ ನಿರೀಕ್ಷೆ ಅಸಾಧ್ಯ’

ವ್ಯಕ್ತಿಗಳ ಬದಲಾವಣೆಯಿಂದ ಯಾವುದೇ ಹೊಸತನ ನಿರೀಕ್ಷೆ ಮಾಡಲು ಆಗುವುದಿಲ್ಲ. ಬಿಜೆಪಿಯೊಂದು ಪಕ್ಷವಲ್ಲ, ಅದು ಆರ್‌ಎಸ್‌ಎಸ್‌ನ ರಾಜಕೀಯ ವೇದಿಕೆಯಷ್ಟೆ. ಆ ಸಂಘಟನೆಯ ರಹಸ್ಯ ಕಾರ್ಯಸೂಚಿಗಳನ್ನು ಬಿಜೆಪಿ ಮೂಲಕ ಕಾರ್ಯರೂಪಕ್ಕೆ ತರುತ್ತಿದೆ. ತನಗೆ ಬೇಕಾದಾಗ ಕೆಲ ನಾಯಕರನ್ನು ಬಳಿಸಿಕೊಂಡು ಕೊನೆಗೆ ಅವರನ್ನು ಹೊರ ದೂಡುತ್ತದೆ. ಮಾಯಾವತಿ, ಮಮತಾ ಬ್ಯಾನರ್ಜಿ, ಎಚ್‌.ಡಿ.ಕುಮಾರಸ್ವಾಮಿ ವಿಷಯದಲ್ಲೂ ಬಿಜೆಪಿ ಮಾಡಿದ್ದು ಅದನ್ನೆ. ಯಡಿಯೂರಪ್ಪ ಅವರನ್ನೂ ಬಳಸಿಕೊಂಡು ಈಗ ಹೊರಕ್ಕೆ ತಳ್ಳಿದ್ದಾರೆ. ಸದ್ಯ ಅವರಿಗೆ ಆರ್‌ಎಸ್‌ಎಸ್ ನಿಷ್ಟತೆ ಇರುವ ರಾಜಕೀಯ ಬೇಕಾಗಿದೆ. ಹೀಗಾಗಿ, ಆಡಳಿತದ ವಿಷಯದಲ್ಲಿ ಮುಂದೆ ಯಾವ ಹೊಸತನ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಧರ್ಮ ಮತ್ತು ಜಾತಿ ರಾಜಕಾರಣಕ್ಕೆ ವಿರುದ್ಧವಾಗಿ ಜನ ಹೋರಾಟಗಳು ರಾಜಕೀಯ ಶಕ್ತಿಯಾಗಿ ಬೆಳೆಯಲಿವೆ.

–ಸಿದ್ದನಗೌಡ ಪಾಟೀಲ, ಸಿಪಿಐ ರಾಜ್ಯ ಮುಖಂಡ

ಪೂರ್ಣ ಸಂವಾದ ವೀಕ್ಷಿಸಲು: https://www.facebook.com/prajavani.net/videos

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು