ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌. ಆರ್‌.ನಗರ ಕಣ: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ಸಂದರ್ಶನ

Last Updated 27 ಅಕ್ಟೋಬರ್ 2020, 19:05 IST
ಅಕ್ಷರ ಗಾತ್ರ

ಸೆಟ್‌ಟಾಪ್‌ ಬಾಕ್ಸ್‌ ವಿತರಿಸಿದ್ದಲ್ಲಿ ತಪ್ಪಿಲ್ಲ –ಮುನಿರತ್ನ

ಬೆಂಗಳೂರು: ಈ ಹಿಂದಿನ ಎರಡು ವಿಧಾನಸಭಾ ಚುನಾವಣೆಯಲ್ಲಿ ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ಮುನಿರತ್ನ ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ. ಅಭಿವೃದ್ಧಿ ಬಿಟ್ಟು ಬೇರೆ ವಿಷಯವೇ ಇಲ್ಲ. ‘ಮತದಾರ ದೇವರು’ ಕೈಹಿಡಿಯಬೇಕು ಎನ್ನುತ್ತಾರೆ.

l ಈ ಉಪಚುನಾವಣೆಯಲ್ಲಿ ನೀವು ಪ್ರಸ್ತಾಪಿಸುತ್ತಿರುವ ವಿಷಯಗಳೇನು? ಜನ ಯಾಕಾಗಿ ನಿಮಗೆ ಮತ ಹಾಕಬೇಕು ಎಂದು ಬಯಸುತ್ತೀರಾ?

ಕ್ಷೇತ್ರದ ಮತದಾರರು ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಲು ಮತ ಕೇಳುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ವಿಚಾರಗಳನ್ನೂ ಪ್ರಸ್ತಾಪಿಸುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕನಸುಗಳಿವೆ.

l ನೀವು ರಾಜೀನಾಮೆ ಕೊಟ್ಟ ಕಾರಣ ಉಪಚುನಾವಣೆ ಎದುರಾಗಿದೆ. ಈ ಬಗ್ಗೆ ಜನರಲ್ಲಿ ಅಸಮಾಧಾನ ಇದೆಯೇ?

ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಕ್ಕೆ ಜನರಿಗೆ ಬೇಸರ ಇಲ್ಲ. ನಾನು ಕ್ಷೇತ್ರಕ್ಕಾಗಿ ಕೆಲಸ ಮಾಡುವ ಮನುಷ್ಯ ಎಂಬುದು ಜನರಿಗೆ ಗೊತ್ತು. ನೀವು ಕೆಲಸ ಮಾಡಿದ್ದೀರಿ ನಿಮ್ಮ ಕೈಬಿಡುವುದಿಲ್ಲ ಎಂದು ಮತದಾರರು ಹೇಳುತ್ತಿದ್ದಾರೆ. ನಾನು ಗೆಲ್ಲುತ್ತೀನೊ ಇಲ್ಲವೋ ಎಂಬುದನ್ನು ಜನರೇ ಹೇಳಬೇಕು. ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ.

l ನೀವು ಸೆಟ್‌ಟಾಪ್‌ ಬಾಕ್ಸ್‌ ಹಂಚುತ್ತಿರುವ ಬಗ್ಗೆ ಕಾಂಗ್ರೆಸ್‌ ಟೀಕೆ ಮಾಡಿದೆ. ಚುನಾವಣಾ ಆಯೋಗಕ್ಕೂ ದೂರು ಕೊಟ್ಟಿದೆ? ನೀವು ಮತದಾರರಿಗೆ ಆಮಿಷ ಒಡ್ಡುತ್ತಿದ್ದೀರಿ ಎಂಬ ಆರೋಪ ವಿದೆಯಲ್ಲವೇ?

ಸೆಟ್‌ ಟಾಪ್‌ ಬಾಕ್ಸ್‌ ವಿತರಿಸಿದ್ದರಲ್ಲಿ ತಪ್ಪೇನಿದೆ? ನಾನು ಇದೇ ಬಿಜಿನೆಸ್‌ನಲ್ಲಿ ಇದ್ದೇನೆ. ಹಿಂದಿನಿಂದಲೂ ಕೊಟ್ಟಿದ್ದೇನೆ. ಸೆಟ್‌ಟಾಪ್‌ ಬಾಕ್ಸ್‌ ಉದ್ಯಮವನ್ನು ಭಾರತ ಸರ್ಕಾರದಿಂದ ಲೈಸೆನ್ಸ್‌ ತೆಗೆದುಕೊಂಡು ಕಾನೂನು ಬದ್ಧವಾಗಿಯೇ ಮಾಡುತ್ತಿದ್ದೇನೆ. ದೂರು ಕೊಟ್ಟಿದ್ದರೆ ಆಯೋಗ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಬಿಡಿ. ಡಿ.ಕೆ.ಶಿವಕುಮಾರ್‌ ಅವರು ತಮ್ಮ ಒಡೆತನದ ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಫೀ ಮಾಫಿ ಮಾಡಿದರೆ, ಅದನ್ನು ಚುನಾವಣಾ ಆಮಿಷ ಎಂದು ಹೇಳಲಾಗುತ್ತದೆಯೆ?

l ಆರ್‌.ಆರ್.ನಗರದಲ್ಲಿ ಜಾತಿ ಧ್ರುವೀಕರಣ ನಡೆಯುತ್ತಿದೆ ಎಂಬ ಮಾತುಗಳಿವೆ. ಇದರಿಂದ ಚುನಾವಣೆಯಲ್ಲಿ ನಿಮ್ಮ ಹಾದಿ ಸಲೀಸಲ್ಲ ಎಂದೂ ಹೇಳಲಾಗುತ್ತಿದೆಯಲ್ಲವೇ?

ನಾನಂತೂ ಜಾತಿ ರಾಜಕಾರಣ ಮಾಡಿದವನಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಒಂದು ವಿಧಾನಸಭಾ ಕ್ಷೇತ್ರದ ಚುನಾವಣೆಗಾಗಿ ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಆಗಬೇಕು ಎಂಬ ಹಂಬಲ ಇಟ್ಟುಕೊಂಡ ವ್ಯಕ್ತಿ ಜಾತಿ ಕಾರ್ಡ್‌ ಬಳಸುವುದು ಸರಿಯಲ್ಲ. ಕೇವಲ ಒಂದು ಜಾತಿ ಓಲೈಸಿದರೆ, ಉಳಿದವರು ಸುಮ್ಮನಿರುತ್ತಾರೆಯೇ? ಕೆಂಪೇಗೌಡರು ಒಂದು ಜಾತಿಗಾಗಿ ಬೆಂಗಳೂರು ಕಟ್ಟಲ್ಲಿಲ್ಲ. ಜಾತಿ ಏನಿದ್ದರೂ ಅವರವರ ಮನೆಗಳಿಗೆ ಮತ್ತು ಕುಟುಂಬಕ್ಕೆ ಮಾತ್ರ ಸೀಮಿತವಾಗಿರಬೇಕು.

l ಕ್ಷೇತ್ರಕ್ಕಾಗಿ ಮಾಡಬೇಕೆಂದಿರುವ ಕನಸಿನ ಯೋಜನೆ ಏನಿದೆ?

ಮೈಸೂರು ರಸ್ತೆಯಿಂದ ಅಂಬೇಡ್ಕರ್‌ ಮೆಡಿಕಲ್ ಕಾಲೇಜ್, ಸುಮನಹಳ್ಳಿ ಜಂಕ್ಷನ್‌, ರಾಜಕುಮಾರ್ ಸಮಾಧಿ, ಗೊರಗುಂಟೆ ಪಾಳ್ಯ, ಹೆಬ್ಬಾಳದ ಮೂಲಕ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ದೊಡ್ಡ ಕನಸು ಇದೆ.

ಸಂದರ್ಶನ:ರವಿ ಪ್ರಕಾಶ್ .ಎಸ್

***

ಕಾರ್ಯಕರ್ತರು ಪಕ್ಷ ತೊರೆದಿಲ್ಲ –ಕೃಷ್ಣಮೂರ್ತಿ ವಿ

ಬೆಂಗಳೂರು: ಒಂದು ಬಾರಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಿದ್ದ ಕೃಷ್ಣಮೂರ್ತಿ ವಿ. ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ.

ತಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದೇ ಬಿಂಬಿಸಿಕೊಳ್ಳುತ್ತಿರುವ ಅವರು, ‘ಕಾರ್ಯಕರ್ತ’ನಿಗೆ ಟಿಕೆಟ್‌ ನೀಡಿರುವ ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರ ನಿರ್ಧಾರವನ್ನು ಮತದಾರರು ಬೆಂಬಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

l ಮುಖಂಡರ ವಲಸೆಯಿಂದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಶಕ್ತಿ ಕುಂದಿಲ್ಲವೆ?

ಪಕ್ಷದ ಮುಖಂಡರು ಎಂದು ಬಿಂಬಿಸಿಕೊಂಡಿದ್ದ ಕೆಲವರು ಬೇರೆ ಪಕ್ಷಗಳಿಗೆ ಹೋಗಿರಬಹುದು. ಆದರೆ, ಜೆಡಿಎಸ್‌ ಪಕ್ಷವನ್ನು ಬೆಂಬಲಿಸುವ ಮತದಾರರು ಎಲ್ಲಿಗೂ ಹೋಗಿಲ್ಲ. ನಮ್ಮ ಯಾವುದೇ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ವಲಸೆ ಹೋಗಿಲ್ಲ. ಕೆಲವು ಮುಖಂಡರು ಪಕ್ಷ ತೊರೆದ ಮಾತ್ರಕ್ಕೆ ಜೆಡಿಎಸ್‌ ಶಕ್ತಿ ಕುಂದಿಲ್ಲ, ಕುಂದುವುದೂ ಇಲ್ಲ.

l ನಿಮ್ಮನ್ನು ಹರಕೆಯ ಕುರಿಯಂತೆ ಚುನಾವಣೆಗೆ ನಿಲ್ಲಿಸಲಾಗಿದೆ ಎಂಬ ಪ್ರಚಾರ ನಡೆಯುತ್ತಿದೆಯಲ್ಲವೆ?

ನಾನು ಹರಕೆಯ ಕುರಿಯಲ್ಲ. ಸಾಮಾನ್ಯ ಕಾರ್ಯಕರ್ತನನ್ನು ಶಾಸಕನನ್ನಾಗಿ ಮಾಡಬೇಕು ಎಂಬ ಮಹದಾಸೆಯಿಂದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ನನ್ನನ್ನು ಕಣಕ್ಕಿಳಿಸಿದ್ದಾರೆ. ಸೋಲಿನ ಭೀತಿಯಿಂದ ಕೆಲವರು ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ.

l ಬಿಜೆಪಿ ಅಭ್ಯರ್ಥಿ ಜತೆ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದು ನಿಜವೆ?

ಈ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾದುದು. ‘ನಾನೇ ಇಲ್ಲಿ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿ’ ಎಂದು ಕುಮಾರಸ್ವಾಮಿ ಮತದಾರರ ಬಳಿ ಮನವಿ ಮಾಡಿದ್ದಾರೆ. ನಿಖಿಲ್‌ ಅವರ ಬಗ್ಗೆಯೂ ಈ ರೀತಿ ಆರೋಪ ಮಾಡಿದ್ದರು. ಅವರೇ ಖುದ್ದಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

l ಜೆಡಿಎಸ್‌ ನಾಯಕರಿಗೆ ಈ ಕ್ಷೇತ್ರದ ಚುನಾವಣೆಯಲ್ಲಿ ಆಸಕ್ತಿ ಇಲ್ಲ ಎಂಬ ಮಾತು ಕೇಳಿಬರುತ್ತಿದೆಯಲ್ಲಾ?

ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಯಕರು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ದೇವೇಗೌಡರಿಂದ ಹಿಡಿದು ಪಕ್ಷದ ಕಾರ್ಯಕರ್ತರವರೆಗೆ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ.

l ಕ್ಷೇತ್ರದಲ್ಲಿ ನಿಮ್ಮ ಪ್ರಬಲ ಎದುರಾಳಿ ಯಾರು?

ನಮಗೆ ಯಾರೂ ಪ್ರಬಲ ಎದುರಾಳಿಗಳಿಲ್ಲ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಮುನಿರತ್ನ ಸ್ವತಃ ಬಿಜೆಪಿಗೆ ಮಾರಿಕೊಂಡವರು. ಈಗ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಅವರನ್ನು ಜನ ನಂಬುವುದಿಲ್ಲ. ಕಾಂಗ್ರೆಸ್‌, ಜೆಡಿಎಸ್‌ನಲ್ಲಿದ್ದ ಹನುಮಂತರಾಯಪ್ಪ ತಾವು ಗೆಲ್ಲಲಾಗದೇ ಅನುಕಂಪದ ಆಧಾರದಲ್ಲಿ ಜಯ ಸಾಧಿಸುವ ಆಸೆಯಿಂದ ಮಗಳನ್ನು ಕಣಕ್ಕಿಳಿಸಿದ್ದಾರೆ.

l ಯಾವ ವಿಷಯಗಳ ಆಧಾರದಲ್ಲಿ ಮತ ಕೇಳುತ್ತಿದ್ದೀರಿ?

ಅಭಿವೃದ್ಧಿಯ ಆಧಾರದಲ್ಲೇ ನಾವು ಮತ ಕೇಳುತ್ತಿದ್ದೇವೆ. ಕ್ಷೇತ್ರದಲ್ಲಿ ಸ್ಥಿರತೆ ತಂದು, ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅವಕಾಶ ಕೊಡುವಂತೆ ಮತ ಕೇಳುತ್ತಿದ್ದೇವೆ.

ಸಂದರ್ಶನ:ವಿ.ಎಸ್‌. ಸುಬ್ರಹ್ಮಣ್ಯ

***

‘ಅವಕಾಶ ಕೊಟ್ಟರೆ ನುಡಿದಂತೆ ನಡೆಯುವೆ –ಕುಸುಮಾ ಎಚ್‌.

ಬೆಂಗಳೂರು: ‘ನಿಮ್ಮ ಪ್ರೀತಿ, ವಿಶ್ವಾಸವನ್ನು ಎಂದಿಗೂ ಹಣ, ಅಧಿಕಾರದ ಆಸೆಗೆ ಮಾರಿಕೊಳ್ಳುವುದಿಲ್ಲ. ಯಾವುದೇ ದುರಾಲೋಚನೆ ಇಟ್ಟುಕೊಂಡು ಚುನಾವಣೆಗೆ ಬಂದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೈಲಾದ ಪ್ರಯತ್ನ ಪಡುತ್ತೇನೆ. ನಿಮ್ಮ ನೋವು, ದುಃಖದಲ್ಲಿ ನಿಮ್ಮ ಮನೆ ಮಗಳಂತೆ ಜೊತೆಗಿರುತ್ತೇನೆ’ ಎನ್ನುತ್ತಲೇ ಮತದಾರರ ಮನಗೆಲ್ಲಲು ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ಅದೇ ‘ಕೈ’ ಹಿಡಿಯಬಹುದೆಂಬ ವಿಶ್ವಾಸ ಅವರದ್ದು.

l ಸಹಾಯಕ ಪ್ರಾಧ್ಯಾಪಕಿಯಾಗಿದ್ದವರು, ದಿಢೀರ್‌ ಆಗಿ ರಾಜಕೀಯಕ್ಕೆ ಕಾಲಿಟ್ಟ ಉದ್ದೇಶವೇನು? ಅದರಲ್ಲೂ ಕಾಂಗ್ರೆಸ್ ಪಕ್ಷವೇ ಏಕೆ?

ನಾನು ರಾಜಕೀಯ ನಂಟಿರುವ ಕುಟುಂಬದಲ್ಲಿ ಬೆಳೆದವಳು. ಪತಿ (ಡಿ.ಕೆ. ರವಿ) ಜೊತೆ ಹಲವೆಡೆ ಓಡಾಡಿ, ಜನರ ಕಷ್ಟ–ಸುಖಗಳಿಗೆ ಸ್ಪಂದಿಸಿದ್ದೆ. ಚುನಾವಣೆಗೆ ನಿಲ್ಲುವ ಅವಕಾಶ ಸಿಕ್ಕಾಗ ಮತ್ತಷ್ಟು ಜನಸೇವೆ ಮಾಡಬಹುದಲ್ಲ ಎಂದು ಒಪ್ಪಿಕೊಂಡೆ. ತಂದೆಯವರು ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡವರು. ಎಲ್ಲ ಜಾತಿ, ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್‌. ಎಲ್ಲರನ್ನೂ ಒಳಗೊಳ್ಳುವ ನನ್ನ ಜೀವನದ ಸಿದ್ಧಾಂತವೂ ಅದೇ.

l ನಾಮಪತ್ರ ಸಲ್ಲಿಸಿದ ತಕ್ಷಣವೇ ನಿಮ್ಮ ವಿರುದ್ದ ಎಫ್‌ಐಆರ್‌ ದಾಖಲಾಗಿದೆ. ನಿಮ್ಮನ್ನು ಗುರಿ ಮಾಡಲಾಗಿದೆಯೇ?

ಅಂದು ನಡೆದಿರುವುದನ್ನು ನೋಡಿದರೆ ಹಾಗೆನಿಸುತ್ತದೆ. ನನ್ನಂತೆ ಬಿಜೆಪಿ, ಜೆಡಿಎಸ್‌ನವರೂ ಬ್ಯಾರಿಕೇಡ್‌ ದಾಟಿಕೊಂಡು ಬಂದಿದ್ದರು. ಆದರೆ, ನನ್ನ ಮೇಲೆ ಮಾತ್ರ ಎಫ್‌ಐಆರ್‌ ಹಾಕಿದ್ದಾರೆಂದರೆ ನನ್ನನ್ನೇ ಗುರಿ ಮಾಡಿದ್ದಾರೆಂದು ಅನಿಸುತ್ತದೆ.

l ಕ್ಷೇತ್ರದ ಬಗ್ಗೆ ಏನು ತಿಳಿದುಕೊಂಡಿದ್ದೀರಿ?

ಕ್ಷೇತ್ರದ ಒಂಬತ್ತೂ ವಾರ್ಡ್‌ಗಳಲ್ಲಿ ಸುತ್ತಾಡುತ್ತಿದ್ದೇನೆ. ಅಭಿವೃದ್ಧಿಯಾಗಿದೆ, ಸಮಸ್ಯೆ ನಿವಾರಣೆಯಾಗಿದೆ ಎಂದಿರುವುದೆಲ್ಲ ಬಾಯಿಮಾತಷ್ಟೆ. ಈ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಹೆಣ್ಣು ಮಕ್ಕಳಿಗೆ ಸುರಕ್ಷತೆಯೂ ಇಲ್ಲ. ಆಶ್ರಯ ನಗರವಲ್ಲ, ಆಶ್ವಾಸನೆಯ ನಗರವೆಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳು ಸಾಕಷ್ಟಿವೆ.

l ಪ್ರತಿಸ್ಪರ್ಧಿ ಪ್ರಭಾವಿ; ಮತದಾರರನ್ನು ಸೆಳೆಯಲು ನಿಮ್ಮ ತಂತ್ರಗಳೇನು?

ಎದುರಾಳಿ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಅವರ ಪ್ರಭಾವ ಏನಿದೆ, ಎಷ್ಟಿದೆ ಎನ್ನುವುದೂ ಮುಖ್ಯವಲ್ಲ. ಮತದಾರರನ್ನು ಹೇಗೆ ತಲುಪಬಹುದು ಎಂದಷ್ಟೇ ಯೋಚನೆ ಮಾಡುತ್ತೇನೆ. ಇಲ್ಲಿನವರು ಅರಿಶಿನ ಕುಂಕುಮ ಕೊಟ್ಟು, ಮುಡಿಗೆ ಹೂ ಇಟ್ಟು, ಅಪ್ಪಿಕೊಂಡು ಹರಸುವ ಸಂದರ್ಭ ನನಗೆ 2015ಕ್ಕಿಂತ ಹಿಂದಿನ ದಿನಗಳನ್ನು ನೆನಪಿಸುತ್ತದೆ. ಜನರ ಪ್ರೀತಿ, ಅಭಿಮಾನ ನೋಡಿದರೆ ನಾನು ಅದೃಷ್ಟವಂತೆ.

l ಪ್ರಚಾರ ವೇಳೆ ಜಾತಿ ಕಾರ್ಡ್‌ ಪ್ಲೇ ಮಾಡಲಾಗುತ್ತಿದೆ ಎಂಬ ಆರೋಪ ಇದೆಯಲ್ಲ?

ಅದು ಅಪಪ್ರಚಾರ. ನನಗೆ ಒಕ್ಕಲಿಗರಷ್ಟೇ ಅಲ್ಲ, ಎಲ್ಲರ ಮತ ಬೇಕು. ಒಕ್ಕಲಿಗ ಹೆಣ್ಣು ಮಗಳು ಎಂಬ ಹೆಮ್ಮೆಯಿದೆ ನಿಜ. ಆದರೆ, ಎಲ್ಲ ಜಾತಿ ಜನಾಂಗವನ್ನು ಸಮಾನವಾಗಿ ನೋಡುತ್ತೇನೆ. ಒಕ್ಕಲಿಗರು ಮಾತ್ರ ಮತ ಹಾಕಿ ಎಂದೂ ಎಲ್ಲಿಯೂ ಹೇಳಿಲ್ಲ, ಹೇಳುವುದೂ ಇಲ್ಲ.

l ನಿಮ್ಮ ಮೇಲಿನ ವೈಯಕ್ತಿಕ ಟೀಕೆಗಳ ಬಗ್ಗೆ ಏನು ಹೇಳುತ್ತೀರಿ?

ಅನುಭವಿಸಿದ ನಿಂದನೆ, ನೋವುಗಳು ನನ್ನನ್ನು ಗಟ್ಟಿ ಮಾಡಿವೆ. ಇನ್ನಷ್ಟು ನಿಂದನೆಗಳು ಬಂದರೂ ಸಹಿಸಿಕೊಳ್ಳುತ್ತೇನೆ. ನನ್ನ ಬಗ್ಗೆ ಮಾತನಾಡಲು ಬೇರೆ ವಿಷಯ ಇಲ್ಲ. ಹೀಗಾಗಿ, ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ.

l ನಿಮ್ಮ ಸ್ಪರ್ಧೆಗೆ ನಿಮ್ಮ ಅತ್ತೆಯವರಿಂದಲೇ ವಿರೋಧ ಬಂದಿತ್ತು. ಡಿ.ಕೆ. ರವಿ ಹೆಸರು ಬಳಸಬಾರದು ಎಂದಿದ್ದರು. ಕುಟುಂಬದವರೇ ಕೈ ಹಿಡಿಯದಿದ್ದಾಗ, ಮತದಾರರು ಕೈ ಹಿಡಿಯುತ್ತಾರೆಂಬ ಭರವಸೆ ಇದೆಯೇ?

ನನಗೆ ಶಕ್ತಿಯಾಗಿ ನಿಲ್ಲಬೇಕಾದವರೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಆದರೆ, ಈಗ ಸತ್ಯ ಹೊರಬಂದಿದೆ. ಅವರು ಮುಗ್ಧರಿದ್ದಾರೆ. ಅವರು ಏನೇ ಮಾತನಾಡಿದರೂ ಒಳ್ಳೆಯದಾಗುತ್ತದೆ ಎಂದೇ ಭಾವಿಸುತ್ತೇನೆ. ಮತದಾರರೂ ಪ್ರಬುದ್ಧರಿದ್ದಾರೆ. ನನ್ನ ಬೆನ್ನಿಗೆ ನಿಲ್ಲುವ ವಿಶ್ವಾಸವಿದೆ.

l ಜನ ನಿಮ್ಮಿಂದ ಏನನ್ನು ನಿರೀಕ್ಷೆ ಮಾಡಬಹುದು?

ಜನಸೇವೆ, ಅಭಿವೃದ್ಧಿಯಷ್ಟೆ ನನ್ನ ಗುರಿ. ಆ ಭರವಸೆ ನೀಡಬಲ್ಲೆ.

ಸಂದರ್ಶನ:ರಾಜೇಶ್‌ ರೈ ಚಟ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT