ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ತಗ್ಗಿದ ಮಳೆಯ ಅಬ್ಬರ; ಹಲವು ಬೆಳೆಗಳಿಗೆ ಹಾನಿ

Last Updated 22 ಸೆಪ್ಟೆಂಬರ್ 2020, 21:05 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಮೂರು ದಿನಗಳಿಂದ ಆರ್ಭಟಿಸಿದ್ದ ವರುಣ ಮಂಗಳವಾರ ಸ್ವಲ್ಪ ಬಿಡುವು ನೀಡಿದ್ದಾನೆ. ರಾಜ್ಯದ ವಿವಿಧೆಡೆ ಸಾಧಾರಣ ಮಳೆ ಆಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಬಿಡುವು ಕೊಟ್ಟು ಸಾಧಾರಣ ಮಳೆ ಸುರಿಯಿತು. ಜೊತೆಗೆ, ಶೀತಗಾಳಿ ಬೀಸುತ್ತಿದೆ.ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕಾಫಿ, ಮೆಣಸು, ಅಡಿಕೆ, ಭತ್ತದ ಬೆಳೆಗಳಿಗೆ ಹಾನಿಯುಂಟಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆ ಕ್ಷೀಣವಾಗಿದೆ. ಸ್ವರ್ಣಾ, ಸೀತಾ ಹಾಗೂ ಶಾಂಭವಿ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ 199.2 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 12.4 ಸೆಂ.ಮೀ ಮಳೆಯಾಗಿದೆ.ಭದ್ರಾ ಜಲಾಶಯದ ಹೊರ ಹರಿವಿನ ಪ್ರಮಾಣ ಕಡಿಮೆ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಪ್ರಮಾಣ ಕಡಿಮೆಯಾಗಿದೆ.

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಒಳಹರಿವು ಮಂಗಳವಾರ ತಗ್ಗಿದ್ದು, ನದಿಯಲ್ಲಿ ನೀರಿನ ಹರಿವು ಕೂಡ ಇಳಿಮುಖಗೊಂಡಿದೆ.

ಸೋಮವಾರ ಸಂಪೂರ್ಣ ಮುಳುಗಡೆಯಾಗಿದ್ದ ಹಂಪಿಯ ಸ್ಮಾರಕಗಳು ಗೋಚರಿಸಿದವು. ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಗೆ ಸಮನಾಗಿ ಹರಿಯುತ್ತಿದ್ದ ನೀರು ಇಳಿಮುಖವಾಗಿದ್ದು, ಮುಳುಗುವ ಭೀತಿ ದೂರವಾಗಿದೆ.

ಇಂದು 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಬೆಂಗಳೂರು:
‘ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೆ. 23ರಂದು ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಚುರುಕಾಗಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ 3.5 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುತ್ತಿದ್ದು, ಗಂಟೆಗೆ ಗರಿಷ್ಠ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಸೆ.24ರಿಂದ ರಾಜ್ಯದಾದ್ಯಂತ ಮಳೆ ತಗ್ಗಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಮಳೆ-ಎಲ್ಲಿ,ಎಷ್ಟು?: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗರಿಷ್ಠ 14 ಸೆಂ.ಮೀ ಮಳೆಯಾಗಿದೆ. ಭಾಗಮಂಡಲ 12, ಅಂಕೋಲಾ 11, ಕಾರವಾರ 9, ಭಟ್ಕಳ, ವಿರಾಜಪೇಟೆ, ಹೊಸನಗರ 8, ತೀರ್ಥಹಳ್ಳಿ 6, ಮೂಡುಬಿದರೆ, ಸುಳ್ಯ, ಪುತ್ತೂರು, ಉಪ್ಪಿನಂಗಡಿ, ಉಡುಪಿ, ಸಾಗರ ,ಮೂಡಿಗೆರೆ 5, ಕುಂದಾಪುರ, ಮಡಿಕೇರಿ 4, ಹಾಸನ, ಕೊಪ್ಪ 2, ನಿಪ್ಪಾಣಿ, ಬೆಳಗಾವಿ, ಜಮಖಂಡಿ, ಧಾರವಾಡ, ಶಿಕಾರಿಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT