ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದುಗಿನ ರಂಗಭೂಮಿ ಕಲಾವಿದೆ ಸಾವಿತ್ರಿ ಗೌಡರ್‌ಗೆ ರಾಜ್ಯೋತ್ಸವ ಪ್ರಶಸ್ತಿ

ಗದುಗಿನ ರಂಗಭೂಮಿ ಕಲಾವಿದೆ ಸಾವಿತ್ರಿ ಗೌಡರ್‌ಗೆ ರಾಜ್ಯೋತ್ಸವ ಪ್ರಶಸ್ತಿ
Last Updated 31 ಅಕ್ಟೋಬರ್ 2021, 15:24 IST
ಅಕ್ಷರ ಗಾತ್ರ

ಗದಗ: ವೃತ್ತಿ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಮೀಸಲಿಟ್ಟಿರುವ ಹಿರಿಯ ಕಲಾವಿದೆ ಸಾವಿತ್ರಿ ಗೌಡರ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದ್ದು, ಗದುಗಿನ ರಂಗಭೂಮಿ ಪರಿಸರದಲ್ಲಿ ಸಂಭ್ರಮ ಮನೆ ಮಾಡಿದೆ.

ಹಿರಿಯ ಕಲಾವಿದೆ ಸಾವಿತ್ರಿ ಗೌಡರ ಅವರಿಗೆ ಕಲೆ ಹುಟ್ಟಿನಿಂದಲೇ ಬಂದ ಬಳವಳಿ. ಇವರು ವೃತ್ತಿ ರಂಗಭೂಮಿ ನಟರ ಕುಟುಂಬದಲ್ಲಿ ಜನಿಸಿದ ಐದನೇ ತಲೆಮಾರಿನ ಕುಡಿ. ‌ತಾಯಿ ಸೀತಮ್ಮ ಚೆಂದವಾಗಿ ಹಾರ್ಮೋನಿಯಂ ನುಡಿಸುತ್ತಿದ್ದರಷ್ಟೇ ಅಲ್ಲದೇ; ಎಲ್ಲ ಬಗೆಯ ಪಾತ್ರಗಳಿಗೂ ಲೀಲಾಜಾಲವಾಗಿ ಜೀವ ತುಂಬುತ್ತಿದ್ದರು. ತಂದೆ ನಾರಾಯಣಪ್ಪ ಅವರು ಕೂಡ ಹುಟ್ಟು ಕಲಾವಿದರಾಗಿದ್ದು, ತಬಲಾವನ್ನು ಅದ್ಭುತವಾಗಿ ನುಡಿಸುತ್ತಿದ್ದರು.

ತಮ್ಮ ಏಳನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ ಸಾವಿತ್ರಿ ಗೌಡರ ಕಳೆದ 50 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

‘ವೃತ್ತಿ ರಂಗಭೂಮಿ ನನ್ನ ಉಸಿರು. ನಾನು ಮತ್ತು ರಂಗಭೂಮಿ ಇವೆರಡನ್ನೂ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಏಳು ವರ್ಷದ ಹುಡುಗಿಯಾಗಿದ್ದಾಗ ಎಚ್‌.ಎನ್‌.ಹೂಗಾರ ಅವರ ಸಿದ್ಧಲಿಂಗೇಶ್ವರ ನಾಟಕ ಸಂಘ ಪ್ರಸ್ತುತಪಡಿಸಿದ ‘ಬೂದಿ ಮುಚ್ಚಿದ ಕೆಂಡ’ ನಾಟಕದಲ್ಲಿ ಸಾಹುಕಾರನ ಮಗಳು ಗೀತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. ಅಲ್ಲಿಂದ ಶುರುವಾದ ರಂಗಭೂಮಿ ಜತೆಗಿನ ಒಡನಾಟಕ್ಕೆ ಈಗ ಬರೋಬ್ಬರಿ 50 ವರ್ಷಗಳು ತುಂಬಿವೆ’ ಎನ್ನುತ್ತಾರೆ ಕಲಾವಿದೆ ಸಾವಿತ್ರಿ ಗೌಡರ.

‘ಮೊದಲೆಲ್ಲ ಒಂದೊಂದು ನಾಟಕ ಆರು ತಿಂಗಳ ಕಾಲ ನಡೆಯುತ್ತಿತ್ತು. ಆಗ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಹಿಂದಿನ ವೃತ್ತಿ ರಂಗಭೂಮಿಯ ಕಾಲವನ್ನು ನಾನು ಸುವರ್ಣ ಯುಗ ಎಂದು ಕರೆಯಲು ಇಷ್ಟಪಡುವೆ. ಪಾತ್ರಗಳಲ್ಲಿನ ಕಸುವು, ವೃತ್ತಿಯಲ್ಲಿನ ಬದ್ಧತೆ, ಉಚ್ಚಾರಣೆಯಲ್ಲಿ ಶುದ್ಧತೆ... ಅರೇ, ಅವೆಲ್ಲವೂ ಅದ್ಭುತ’ ಎಂದು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

‘ತಂದೆ ತಾಯಿ ಇಬ್ಬರೂ ಕೂಡ ನಾಟಕ ಕಲಾವಿದರು. ಹಾಗಾಗಿ, ನಮಗೆಲ್ಲರಿಗೂ ರಂಗಭೂಮಿಯೇ ಜೀವನವಾಯಿತು. ಕಲೆಯೇ ಜೀವನಾಧಾರವಾಯಿತು. ಎಲ್ಲರಂತೆ ನಾಟಕ ಕಲಾವಿದರ ಬದುಕೂ ಕೂಡ ಏರಿಳಿತಕ್ಕೆ ಒಳಪಟ್ಟಿದ್ದು, ಕೋವಿಡ್‌ ಕಾಲದಲ್ಲಿ ಕಲಾವಿದರು ಕೆಲಸವಿಲ್ಲದೇ ತೀವ್ರ ಸಂಕಷ್ಟಕ್ಕೆ ಒಳಗಾದರು. ಜೀವನ ನಡೆಸಲು ಪರದಾಡಿದರು. ನನ್ನ ಜೀವನದಲ್ಲೂ ಕಷ್ಟ ಸುಳಿದು ಹೋಯಿತು. ಈಗ ವಯಸ್ಸಾಗಿದೆ. ಪೌರಾಣಿಕ ಪಾತ್ರಗಳ ನಿರ್ವಹಣೆಯೇ ನಮಗೆ ಆಧಾರವಾಗಿದೆ. ವಯಸ್ಸಾಗಿರುವ 11 ಮಂದಿ ಕಲಾವಿದೆಯರನ್ನು ಸೇರಿಸಿಕೊಂಡು ನಾನೇ ಒಂದು ತಂಡ ಕಟ್ಟಿ ನಾಟಕಗಳನ್ನು ಆಡಿಸುತ್ತಿದ್ದೇನೆ. ಇಷ್ಟು ವರ್ಷಗಳ ರಂಗಭೂಮಿ ಜತೆಗಿನ ಪಯಣ ಗುರುತಿಸಿ ಸರ್ಕಾರ ಪ್ರಶಸ್ತಿ ನೀಡಿದ್ದು, ಖುಷಿ ತಂದಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT