ಗುರುವಾರ , ಏಪ್ರಿಲ್ 15, 2021
30 °C

ರಾಮ–ಕೃಷ್ಣ ಇತಿಹಾಸ ಪುರುಷರಷ್ಟೇ: ಸಾಹಿತಿ ಎಸ್.ಎಲ್‌. ಭೈರಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಾಮಾಯಣ–ಮಹಾಭಾರತ ಮಿತ್‌ (ಪುರಾಣ). ದೇಶದಲ್ಲಿ ಮಿತ್‌ಗಳೇ ತುಂಬಿವೆ. ಇವು ಧರ್ಮಗಳನ್ನೂ ಆಕ್ರಮಿಸಿವೆ. ಶ್ರೀರಾಮ–ಕೃಷ್ಣ ಇತಿಹಾಸ ಪುರುಷರಷ್ಟೇ. ಇವರಿಬ್ಬರನ್ನೂ ನನ್ನ ಕಾದಂಬರಿಗಳಲ್ಲಿ ಇತಿಹಾಸ ಪುರುಷರೆಂದೇ ಬಿಂಬಿಸಿದ್ದೇನೆ’ ಎಂದು ಸಾಹಿತಿ  ಎಸ್‌.ಎಲ್.ಭೈರಪ್ಪ ಭಾನುವಾರ ಇಲ್ಲಿ ಹೇಳಿದರು.

ಮೈಸೂರು ರಂಗಾಯಣ, ಎಸ್‌.ಎಲ್‌.ಭೈರಪ್ಪ ಪ್ರತಿಷ್ಠಾನ ಆಯೋಜಿಸಿದ್ದ ‘ಪರ್ವ ವಿರಾಟ್‌ ದರ್ಶನ’ ಪರ್ವ ಕಾದಂಬರಿ ಮತ್ತು ರಂಗ ಪ್ರಸ್ತುತಿ ವಿಚಾರ ಸಂಕಿರಣದಲ್ಲಿ ‘ಪರ್ವ’ ನಾಲ್ಕು ದಶಕದ ನೆನಪು ಕುರಿತಂತೆ ಮಾತನಾಡಿದ ಅವರು, ‘ದೇವರೆಂದು ಬಿಂಬಿಸಿಕೊಂಡು ಬರೆದಿದ್ದರೆ ಅತ್ತಿತ್ತ ನೇತಾಡಿಕೊಂಡಿರಬೇಕಿತ್ತು’ ಎಂದರು.

‘ರಾಮ ದೇವರಾಗಿದ್ದರೆ, ಸೀತೆಯ ಅಪಹರಣವಾದಾಗ ಆಕೆ ಎಲ್ಲಿದ್ದಾಳೆ ಎಂಬುದನ್ನು ತಕ್ಷಣಕ್ಕೆ ಏಕೆ ಕಂಡುಕೊಳ್ಳಲಾಗಲಿಲ್ಲ ಎಂದು ನಾನು ವಿದ್ಯಾರ್ಥಿಯಾಗಿದ್ದಾಗ ಮೇಷ್ಟ್ರನ್ನೇ ಪ್ರಶ್ನಿಸಿದ್ದೆ’ ಎಂದು ಹೇಳಿದರು.

‘ಪರ್ವದ ಕುರಿತಂತೆ ಹಲವರು ನನ್ನನ್ನು ಪ್ರಶ್ನಿಸುತ್ತಾರೆ. ‘ಪುರಾಣದ ಕಲ್ಪನೆಯನ್ನೇ ತೆಗೆದಿದ್ದೀರಿ. ಇದರಿಂದ ನಿಮ್ಮ ಸಾಧನೆ ಏನು?’ ಎಂದಿದ್ದಾರೆ. ಮಹಾಭಾರತದಲ್ಲಿನ ಲೋಪ–ದೋಷ ಸರಿಪಡಿಸುವ ಯತ್ನ ನಡೆಸಿರುವೆ. ಮನುಷ್ಯ ಸ್ವಭಾವವನ್ನು ಆಧಾರವಾಗಿಟ್ಟುಕೊಂಡು ಬರೆದಿರುವೆ. ಮೂಲ ಮಹಾಭಾರತದ ಶೇ 20ರಷ್ಟೇ ನನ್ನ ಕಾದಂಬರಿಯಲ್ಲಿರುವುದು. ಉಳಿದದ್ದೆಲ್ಲಾ ನನ್ನ ಸೃಷ್ಟಿಯಲ್ಲಿ ರಚನೆಯಾಗಿದ್ದು. ಇದೇ ‘ಪರ್ವ’ದ ಶಕ್ತಿಯಾಗಿದೆ’ ಎಂದು
ವಿವರಿಸಿದರು.

‘ಸುತ್ತಮುತ್ತಲಿನ ವಿದ್ಯಮಾನ, ವಾಸ್ತವ ಬಿಂಬಿಸುವುದೇ ಕಾದಂಬರಿ. ವಾಸ್ತವ ಅತಿಯಾದರೆ ಬೋರ್‌ ಆಗಲಿದೆ. ರಸ, ಧ್ವನಿ, ಔಚಿತ್ಯ ಅಡಗಿರಬೇಕು. ಎಲ್ಲರೂ ಕಾದಂಬರಿ ರಚಿಸಲು ಇದೇ ಸೂತ್ರ ಬಳಸೋದು. ಮಾರ್ಕ್ಸಿಸ್ಟ್‌ಗಳು ಮಾತ್ರ ಇದನ್ನು ಬಿಟ್ಟಿದ್ದಾರೆ’ ಎಂದರು.

ಶತಾವಧಾನಿ ಆರ್‌.ಗಣೇಶ್‌ ಉಪನ್ಯಾಸ ನೀಡಿ, ‘ಪರ್ವ ಚಿರಂಜೀವಿ. ಮಹಾಭಾರತಕ್ಕಿಂತ ಭಿನ್ನವಾದುದು. ಒಳನೋಟ ಕೊಟ್ಟ ಮೊದಲನೆಯದ್ದು. ಮತ್ತೊಬ್ಬರ ದೌರ್ಬಲ್ಯದ ಲಾಭ ಪಡೆಯದ, ಭಾರತೀಯ ಕಲಾ–ಕಾವ್ಯ ಪರಂಪರೆ ಮುಂದುವರೆಸಿದ ಭೈರಪ್ಪ; ಸಾಮಾಜಿಕ, ಸಮಕಾಲೀನ, ಸಾರ್ವಕಾಲಿಕ ಕಾದಂಬರಿ ರಚಿಸಿದ್ದಾರೆ’ ಎಂದು ಹೇಳಿದರು.

ಚಿಗುರೊಡೆದ ‘ಪರ್ವ’ ರಂಗಪ್ರಸ್ತುತಿ ಕುರಿತಂತೆ ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ ಮಾತನಾಡಿ, ‘ಏಳೆಂಟು ವರ್ಷದ ಹಿಂದೆಯೇ ಭೈರಪ್ಪ ಬಳಿ ಪ್ರಸ್ತಾಪಿಸಿದ್ದೆ. ಅದಕ್ಕವರು ಕುಂತಿಯನ್ನು ನಕ್ಸಲೈಟ್‌ ಆಗಿ ಬಿಂಬಿಸಬಾರದು ಎಂಬ ಷರತ್ತು ಹಾಕಿದ್ದರು. ಆಗ ಕಾರ್ಯಗತವಾಗಲಿಲ್ಲ. ಇದೀಗ ರಸಭಂಗವಾಗದಂತೆ ರಂಗಕ್ಕೆ ತರುವ ಯತ್ನ ನಮ್ಮದಾಗಿದೆ’ ಎಂದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ‘ಇದೊಂದು ಹೊಸ ಪ್ರಯೋಗ. ಭಾರತೀಯ ರಂಗಭೂಮಿಯಲ್ಲಿ ಮೈಲುಗಲ್ಲಾಗಲಿದೆ. ಮಾರ್ಚ್‌ 12, 13, 14ರಂದು ವಿಶೇಷ ಪ್ರದರ್ಶನವಿರಲಿದೆ. 25ರಿಂದ ಮೂರು ತಿಂಗಳು ಪ್ರದರ್ಶನಗೊಳ್ಳಲಿದೆ’ ಎಂದು ಹೇಳಿದರು.

ಹೊತ್ತೊಯ್ಯುವ ತಾಳ್ಮೆಯಿತ್ತೇ..?

‘ದ್ರೌಪದಿ ಆಕರ್ಷಿತ ಹೆಣ್ಣು. ಆಕೆಯ ಮೇಲೆ ಹತ್ತಾರು ಜನರ ಕಣ್ಣಿತ್ತು. ವನವಾಸಿಯಾಗಿದ್ದಾಗ ಜಯದ್ರಥ ಅಪಹರಿಸುತ್ತಾನೆ. ಭೀಮನು ಜಯದ್ರಥನನ್ನು ಬಂಧಿಸಿ ಧರ್ಮರಾಯನ ಮುಂದೆ ಎತ್ತಿ ನೆಲಕ್ಕೆ ಬಿಸಾಕುತ್ತಾನೆ.

ತಕ್ಷಣವೇ ಧರ್ಮರಾಯ, ಭೀಮ ಏಕೆ ಹೀಗೆ ಮಾಡುತ್ತೀಯಾ? ಆತ ನಿನ್ನ ತಂಗಿಯ ಗಂಡ. ಮಾತೆ ಗಾಂಧಾರಿ ನೊಂದುಕೊಳ್ಳುವುದಿಲ್ಲವೇ ಎನ್ನುತ್ತಾನೆ. ಏಕೆಂದರೆ ಆತ ಧರ್ಮರಾಯ.

‘ಆದರೆ, ಈ ಮಾತನ್ನು ಕೇಳಿದ ದ್ರೌಪದಿಗೆ ಏನನ್ನಿಸುತ್ತದೆ. ಹೆಂಡತಿಯನ್ನು ರೇಪ್ ಮಾಡಲು ಎತ್ತಿಕೊಂಡು ಹೋದವನ ಪರವೇ ಈ ರೀತಿ ಮಾತನಾಡುತ್ತಿದ್ದಾನಲ್ಲ ರ‍್ಯಾಸ್ಕಲ್ ಎನ್ನಿಸಲ್ಲವೇ? ನಾನು ಬರೆದಿದ್ದು ಈ ದೃಷ್ಟಿಕೋನದಿಂದಲೇ’ ಎಂದು ಭೈರಪ್ಪ ಹೇಳಿದರು.

‘ದ್ರೌಪದಿಗೆ ಆಕರ್ಷಿತನಾದವನಿಗೆ ರಾಜಧಾನಿವರೆಗೆ ಎತ್ತಿಕೊಂಡು ಹೋಗುವಷ್ಟು ತಾಳ್ಮೆ ಎಲ್ಲಿರುತ್ತದೆ. ಯಾವುದೋ ಮರದ ಸಂದಿಯಲ್ಲೋ, ಕೆಳಗೋ ರೇಪ್ ಮಾಡಿ ಬಿಡುತ್ತಿದ್ದನಲ್ಲವೇ? ನಾವು ಈಗೆಲ್ಲಾ ಅತ್ಯಾಚಾರ, ಬಲಾತ್ಕಾರದಂತಹ ಘಟನೆಗಳನ್ನು ನೋಡುತ್ತಿಲ್ಲವೇ’ ಎಂದು ವಿಶ್ಲೇಷಿಸಿದರು.

‘ಟಿಕೆಟ್‌ಗೆ ₹ 1 ಸಾವಿರ ದೊಡ್ಡದಲ್ಲ’

‘ಪರ್ವ ನಾಟಕದ ಟಿಕೆಟ್‌ ದರ ₹ 1 ಸಾವಿರ ದೊಡ್ಡದಲ್ಲ. ಏಳೂವರೆ ಗಂಟೆಯ ನಾಟಕಕ್ಕೆ ಕಡಿಮೆ ಮೊತ್ತವಿದು’ ಎಂದು ಭೈರಪ್ಪ ಹೇಳಿದರು.

‘ಪರ್ವ’ ನಾಟಕದ ಟಿಕೆಟ್‌ ಬಿಡುಗಡೆಗೊಳಿಸಿದ ಅವರು, ‘ಎರಡೂವರೆ ಗಂಟೆಯ ಸಿನಿಮಾಗೆ ₹ 300 –₹ 400 ಕೊಡುತ್ತೇವೆ. ಸಿನಿಮಾಗೆ ಹೋಲಿಸಿದರೆ ಈ ನಾಟಕದ ಟಿಕೆಟ್‌ ದರ ದುಬಾರಿಯಲ್ಲ’ ಎಂದರು.

‘ದುಡ್ಡು ಮುಖ್ಯವಲ್ಲ. ಆಸಕ್ತಿ ಮುಖ್ಯ. ₹ 500, ₹ 250ರ ಟಿಕೆಟ್ ಸಹ ಲಭ್ಯವಿವೆ. ಇಚ್ಛೆಗೆ ತಕ್ಕಂತೆ ಟಿಕೆಟ್‌ ಖರೀದಿಸಬಹುದು. ನಾಟಕ ವೀಕ್ಷಣೆಗೆ ಟಿಕೆಟ್‌ ಇಲ್ಲದಿದ್ದರೆ ರಸಸ್ವಾದ ಸಿಗಲ್ಲ’ ಎಂದು ಹೇಳಿದರು.

ನೆರವಿನ ನಿರೀಕ್ಷೆ ಸಲ್ಲದು: ‘ಯಾವುದೇ ಪ್ರಕಾರದ ಕಲೆಯ ಉಳಿವು, ಬೆಳವಣಿಗೆಗಾಗಿ ಸರ್ಕಾರದಿಂದ ನೆರವಿನ ನಿರೀಕ್ಷೆಯಿಟ್ಟುಕೊಳ್ಳಬಾರದು. ಕೆಲವು ಸಂಗೀತ ಸಂಸ್ಥೆಗಳು ಬೆಳೆದಿರುವಂತೆ ಟಿಕೆಟ್‌ ದರ, ಸದಸ್ಯತ್ವದ ಶುಲ್ಕದಿಂದಲೇ ಉನ್ನತಿ ಹೊಂದಬೇಕು’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು