ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದೇವರ ಬೆಟ್ಟ: ₹100 ಕೋಟಿ ವೆಚ್ಚದಲ್ಲಿ ರಾಮಮಂದಿರ ಅಭಿವೃದ್ಧಿ– ಅಶ್ವತ್ಥನಾರಾಯಣ

ರಣಹದ್ದುಗಳ ಆವಾಸ ಸ್ಥಾನಕ್ಕೆ ಧಕ್ಕೆ ಆಗದಂತೆ ಕ್ರಮ: ಅಶ್ವತ್ಥನಾರಾಯಣ
Last Updated 28 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮನಗರದ ರಾಮದೇವರ ಬೆಟ್ಟದಲ್ಲಿನ ರಾಮಮಂದಿರವನ್ನು ಪರಿಸರ ಸೂಕ್ಷ್ಮತೆ ಗಮನದಲ್ಲಿ ಇರಿಸಿಕೊಂಡು, ಕಾನೂನು ತೊಡಕು ಎದುರಾಗದಂತೆ ಅಭಿವೃದ್ಧಿಗೊಳಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ರಾಮದೇವರ ಬೆಟ್ಟದಲ್ಲಿ ಕೈಗೊಳ್ಳಲು ಉದ್ದೇಶಿಸಿದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ‘19 ಎಕರೆ ವಿಸ್ತೀರ್ಣ ಹೊಂದಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಭಾರತದ ಅಯೋಧ್ಯೆಯಾಗಿ ರೂಪಿಸಬೇಕು ಎನ್ನುವುದು ಸ್ಥಳೀಯರ ಬಹುಕಾಲದ ಆಸೆ. ಇದಕ್ಕೆ ಅಂದಾಜು ₹ 100 ಕೋಟಿಯಿಂದ ₹ 120 ಕೋಟಿ ಖರ್ಚಾಗಬಹುದು. ಮುಜರಾಯಿ ಇಲಾಖೆ ಮತ್ತು ಮುಖ್ಯಮಂತ್ರಿ ಅನುಮತಿ ಪಡೆದು ಶಿಲಾನ್ಯಾಸ ಮಾಡಲಾಗುವುದು’ ಎಂದರು.

‘ಪರಿಸರಸ್ನೇಹಿಯಾಗಿ ರಾಮನ ದೇವಸ್ಥಾನದ ಅಭಿವೃದ್ಧಿಗೆ ತೀರ್ಮಾನಿಸಲಾಗಿದೆ. ಬೆಟ್ಟದಲ್ಲಿರುವ ರಣಹದ್ದುಗಳ ಆವಾಸ ಸ್ಥಾನಕ್ಕೂ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಮುಜರಾಯಿ ಇಲಾಖೆಯಿಂದ ನಿರ್ಮಿತಿ ಕೇಂದ್ರಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕಳುಹಿಸಲಾಗುವುದು’ ಎಂದರು.

ಯೋಜನೆಗೂ ಚುನಾವಣೆಗೂ ಸಂಬಂಧವಿಲ್ಲ: ‘ರಾಮಮಂದಿರ ಯೋಜನೆಗೂ ಚುನಾವಣೆಗೂ ಸಂಬಂಧವಿಲ್ಲ. ದೇವರ ಕೆಲಸ ಮಾಡುವುದಕ್ಕೆ ಇದೆಲ್ಲ ಬೇಕಿಲ್ಲ. ಇದೇನಿದ್ದರೂ ಶ್ರೀರಾಮ ದೇವರ ಕೆಲಸವಷ್ಟೆ. ಆರಂಭಿಕವಾಗಿ ಯೋಜನಾ ವರದಿ ಸಿದ್ಧಪಡಿಸಲು ₹ 40 ಲಕ್ಷ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಯಾವ ರೀತಿ ಕೈಗೆತ್ತಿಕೊಳ್ಳಬೇಕು ಎನ್ನುವುದನ್ನು ಮುಖ್ಯಮಂತ್ರಿ ಬಳಿ ಚರ್ಚಿಸಿ ಅಂತಿಮಗೊಳಿಸಲಾಗುವುದು’ ಎಂದೂ ಹೇಳಿದರು.

‘ಈ ವರ್ಷದ ಬಜೆಟ್‌ನಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆಯನ್ನು ಪ್ರಕಟಿಸಿದ್ದಾರೆ. ಅದರಂತೆ ಯೋಜನೆ ಜಾರಿಗೆ ಬರಲಿದೆ. ಎರಡು ತಿಂಗಳ ಹಿಂದೆ ರಾಮನಗರದ ಸ್ಥಳೀಯ ಭಕ್ತಾದಿಗಳ ಜತೆ ಅಯೋಧ್ಯೆಗೆ ಭೇಟಿ ನೀಡಲಾಗಿತ್ತು. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಂದಿಗೂ ಈ ವಿಚಾರವನ್ನು ಚರ್ಚಿಸಲಾಗಿತ್ತು’ ಎಂದು ಅವರು ಹೇಳಿದರು.

ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿರುವ ಅರ್ಬನ್‌ ಡಿಸೈನರ್ಸ್‌ ಸಂಸ್ಥೆಯ ಯಶಸ್ವಿನಿ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT