ಭಾನುವಾರ, ಆಗಸ್ಟ್ 14, 2022
20 °C

‘ಕಾರ್ಮಿಕರಿಗೆ ಇ–ಹಾಜರಾತಿ ಕಿರಿಕಿರಿ’ – ಒಳನೋಟಕ್ಕೆ ಓದುಗರ ಪ್ರತಿಕ್ರಿಯೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಜಾವಾಣಿ’ ಪತ್ರಿಕೆಯ ಭಾನುವಾರದ ಮುಖಪುಟದಲ್ಲಿ ಪ್ರಕಟವಾದ ‘ಒಳನೋಟ| ನರೇಗಾ ಕಾರ್ಮಿಕರಿಗೆ ಇ–ಹಾಜರಾತಿ ಕಿರಿಕಿರಿ’ ಎಂಬ ವಿಶೇಷ ವರದಿಗೆ ಓದುಗರಿಂದ ವ್ಯಕ್ತವಾದ ಪ್ರತಿಕ್ರಿಯೆಗಳು...

ಬಯೋಮೆಟ್ರಿಕ್‌ ಕಡ್ಡಾಯಗೊಳಿಸಿ

ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಇ-ಹಾಜರಾತಿ ಮಾಡವುದು ಒಂದು ಕಡೆ ಇರಲಿ. ಮೊದಲು ಗ್ರಾಮ ಪಂಚಾಯಿತಿಗಳಲ್ಲಿ ಈ-ಹಾಜರಾತಿ (ಬಯೋಮೆಟ್ರಿಕ್) ಕಡ್ಡಾಯ ಮಾಡಿ. 10 ಗಂಟೆಗೆ ಬರಬೇಕಾದ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್ ಎರಡು ಮೂರು ತಾಸು ತಡವಾಗಿ ಮೀಟಿಂಗ್ ಕುಂಟು ನೆಪ ಹೇಳಿ ಮಧ್ಯಾಹ್ನ, ಸಾಯಂಕಾಲ ಬರುವುದು ನಡೆಯುತ್ತಿದೆ. ಇದರಿಂದ ಗ್ರಾಮ ಪಂಚಾಯಿತಿಗೆ ಕೆಲಸದ ನಿಮಿತ್ಯ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

– ಬಸನಗೌಡ ಪಾಟೀಲ, ಯರಗುಪ್ಪಿ, ಧಾರವಾಡ

ಸಮಯ ಬದಲಾಗಬೇಕು

ಸರ್ಕಾರ ಇ-ಹಾಜರಾತಿ ತಂದಿರುವುದು ಖುಷಿಯ ವಿಚಾರ. ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಸಂತಸದ ವಿಷಯ. ಬಿಸಿಲಿನ ತಾಪಮಾನ ಹೆಚ್ಚಾಗುವುದರಿಂದ ಕಾರ್ಮಿಕರು ಕೆಲಸ ಮಾಡುವಲ್ಲಿ ವಿಫಲರಾಗುತ್ತಿದ್ದರು. ಕೆಲಸದ ಸಮಯ ಬದಲಾವಣೆ ಮಾಡಿದರೆ ಅಭಿವೃದ್ಧಿ ಕಾಮಗಾರಿಗಳು ಸರಾಗವಾಗಿ ನಡೆಯುತ್ತವೆ. ಕಾರ್ಮಿಕರಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

– ಮುತ್ತುರಾಜ್, ಹೂವಿನಕೊಳ

ಇ-ಹಾಜರಾತಿಯ ಮೂಲಕ ಪಾರದರ್ಶಕತೆ ತರಬೇಕು ಎನ್ನುವುದು ಸರಿ ಇದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಮಯದಲ್ಲಿ ಬದಲಾವಣೆ ಮಾಡಿ ಸೂಕ್ತ ರೀತಿಯಲ್ಲಿ ನರೇಗಾ ಕೆಲಸ ಮಾಡಿಸಬೇಕು. ನಮ್ಮ ಭಾಗದಲ್ಲಿ(ರಾಯಚೂರು) 40 ಡಿಗ್ರಿಯಿಂದ 45 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನವಿರುತ್ತದೆ. ಆದ್ದರಿಂದ ನಮ್ಮ ಭಾಗದ ಜನ ನರೇಗಾ ಕಾಮಗಾರಿಯನ್ನು ತೊರೆದು ನಗರ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ. ನರೇಗಾ ಕಾಮಗಾರಿ ಕುರಿತು ಅಗತ್ಯ ಪ್ರಚಾರ ಮಾಡಿ ಗುಳೆ ಹೋಗುವುದನ್ನು ತಪ್ಪಿಸುವ ಸವಾಲು ಈಗ ಅಧಿಕಾರಗಳ ಮುಂದಿದೆ.

– ಅಂಜನೇಯ ಭೂಮನಗುಂಡ, ರಾಯಚೂರು

ಕಾಯಕ ಕೈಗಳಿಗೆ ಬಿತ್ತು ನಿಯಮದ ಕುತ್ತು

ಭಾರತ ದೇಶ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಒಂದು. ಇಂತಹ ದೇಶದಲ್ಲಿ ಅನಕ್ಷರತೆಯ ಕೊರತೆ ಇದೆ. ಹೀಗಿರುವಾಗ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುವ ಎಲ್ಲಾ ಕಾರ್ಮಿಕರು ಅಕ್ಷರಸ್ಥರಲ್ಲ. ಕಾರ್ಮಿಕರಿಗೆ ಇ-ಹಾಜರಾತಿ, ಎನ್ಎಂಎಂಎಸ್ ಆ್ಯಪ್, ಕೆಲಸದ ಸಮಯದ ನಿಯಮಗಳನ್ನು ನಿಗದಿ ಪಡಿಸುವುದು ಎಷ್ಟು ಸರಿ? ಶಿಕ್ಷಣಕ್ಕಾಗಿ ಮೊಬೈಲ್ ಕೊಳ್ಳಲಾಗದ ಪರಿಸ್ಥಿತಿಯಲ್ಲಿ ಅನಕ್ಷರಸ್ಥರು ಮೊಬೈಲ್ ಕೊಳ್ಳಲು ಸಾಧ್ಯವೇ? ಒಂದು ವೇಳೆ ಕೊಂಡರೂ ಅದನ್ನು ಬಳಸುವುದು ಅವರಿಗೆ ತಿಳಿಯದು ಈ ನಿಯಮ ಜಾರಿಗೊಳಿಸಿದರೆ ಆಗುವುದು ಅನನುಕೂಲವೇ ಹೊರತು ಅನುಕೂಲವಲ್ಲ. ಕಾರ್ಯಕ್ಷೇತ್ರದ ಛಾಯಾಚಿತ್ರದಿಂದ ಕೆಲಸ ನಡೆಯುತ್ತಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಸುಳ್ಳು.

– ಮುಬೀನಾ.ಪಿ, ವಿಜಯನಗರ

ಇ–ಹಾಜರಾತಿ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇತ್ತೀಚೆಗೆ ಎನ್ಎಂಎಂಎಸ್ ಮೂಲಕ ಇ–ಹಾಜರಾತಿ ವ್ಯವಸ್ಥೆ ಜಾರಿಗೆ ಬಂದಿದೆ. ಪ್ರತಿನಿತ್ಯ 20ಕ್ಕಿಂತ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುವ ಕಾಮಗಾರಿ ಸ್ಥಳಗಳಲ್ಲಿ ಈ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಇದು ಕಾರ್ಮಿಕರ ವಾಸ್ತವಿಕ ಹಾಜರಾತಿ ಪಡೆಯಲು ಉತ್ತಮ ವಿಧಾನ. ಕೇವಲ ಯಂತ್ರಗಳಿಂದಲೇ ಕಾರ್ಯ ನಿರ್ವಹಣೆ ಮಾಡಿ ಕಾರ್ಯನಿರ್ವಹಿಸುವ ಕೆಲವು ವ್ಯಕ್ತಿಗಳಿಗೆ ಈ ವ್ಯವಸ್ಥೆ ಅಷ್ಟೇನೂ ಅನುಕೂಲಕರವಲ್ಲ. ಯಂತ್ರಗಳ ಬಳಕೆ ಕಡಿಮೆ ಮಾಡಿ ಕಾರ್ಮಿಕರನ್ನು ಸಂಪೂರ್ಣವಾಗಿ ಕೆಲಸ ನಿರ್ವಹಿಸುವಂತೆ ಮಾಡಲು ಈ ವ್ಯವಸ್ಥೆ ಪರಿಣಾಮಕಾರಿ. ಪ್ರಾರಂಭದಲ್ಲಿ ಇ–ಹಾಜರಾತಿ ವ್ಯವಸ್ಥೆ ಕಿರಿಕಿರಿ ಎನಿಸಿದರೂ, ಯೋಜನೆಗೆ ಹಾಗೂ ನೈಜ ಕಾರ್ಮಿಕರಿಗೆ ಬಲ ತುಂಬಲು ಈ ವ್ಯವಸ್ಥೆ ತುಂಬಾ ಸಹಕಾರಿ. ಸರ್ಕಾರ ಕೂಲಿ ಸಾಮಗ್ರಿ ಮೊತ್ತವನ್ನು ನಿಗದಿತ ಅವಧಿಯಲ್ಲಿ ಬಿಡುಗಡೆ ಮಾಡಬೇಕು.

– ರಾಮಕೃಷ್ಣ.ಎಂ.ಎನ್, ಎಂ ಸಿ ಹಳ್ಳಿ, ತರೀಕೆರೆ.

ಇದನ್ನೂ ಓದಿ: ಒಳನೋಟ| ನರೇಗಾ ಕಾರ್ಮಿಕರಿಗೆ ಇ–ಹಾಜರಾತಿ ಕಿರಿಕಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು