ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು: ಇನ್ನು ಎರಡೇ ಪ್ರವರ್ಗ

ಅತ್ಯಂತ, ಅತಿ ಹಿಂದುಳಿದವರು ಪ್ರವರ್ಗ ಸೃಷ್ಟಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ
Last Updated 4 ಜನವರಿ 2023, 22:12 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದವರ ಮೀಸಲಾತಿ ಪಟ್ಟಿಯಲ್ಲಿರುವ ಮೂರು ಪ್ರವರ್ಗಗಳ (ಪ್ರವರ್ಗ 1, ಪ್ರವರ್ಗ 2 ಎ,ಬಿ ಮತ್ತು ಪ್ರವರ್ಗ 3ಎ, ಬಿ) ಬದಲು ‘ಅತ್ಯಂತ ಹಿಂದುಳಿದವರು’ (ಪ್ರವರ್ಗ 1) ಮತ್ತು ‘ಅತೀ ಹಿಂದುಳಿದವರು’ (ಪ್ರವರ್ಗ 2 ಎ,ಬಿ,ಸಿ,ಡಿ) ಎಂಬ ಎರಡೇ ಪ್ರವರ್ಗಗಳನ್ನು ರಚಿಸುವುದು ಸೂಕ್ತ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರತಿಪಾದಿಸಿದೆ.

ಸರ್ಕಾರಕ್ಕೆ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಈ ಅಭಿಪ್ರಾಯ ಇದೆ. ಹೊಸದಾಗಿ ಸೃಷ್ಟಿಸಲಾಗುವ 2 ಸಿ ಮತ್ತು 2 ಡಿ ಪ್ರವರ್ಗ ಸೇರುವ ಸಮುದಾಯದವರು ಪಡೆಯುವ ಮೀಸಲಾತಿಯು ‘ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಅನ್ವಯಿಸುತ್ತದೆ’ ಎಂದು ವರದಿ ತನ್ನ ಶಿಫಾರಸಿನಲ್ಲಿ ಹೇಳಿದೆ.

ಹಿಂದುಳಿದ ವರ್ಗಗಳ ವರ್ಗೀಕರಣ ಆದೇಶ 2002ನೇ ಇಸವಿಯಿಂದ ಜಾರಿಯಲ್ಲಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ‘ಅತ್ಯಂತ ಹಿಂದುಳಿದವರು’ (1), ‘ಅತೀ ಹಿಂದುಳಿ ದವರು’ (2 ಎ,ಬಿ), ‘ಹಿಂದುಳಿದವರು’ (3ಎ, ಬಿ) ಎಂಬ ಮೂರು ಪ್ರವರ್ಗ
ಗಳಿವೆ.

ಆಯೋಗದ ಕಾಯ್ದೆ 1995ರ ಕಲಂ 11ರ ಅನ್ವಯ, ರಾಜ್ಯ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗದಲ್ಲಿ ಉಳಿಯದೇ ಹೋಗಿರುವ ವರ್ಗಗಳನ್ನು ತೆಗೆದುಹಾಕುವ ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಪಟ್ಟಿಗೆ ಸೇರಿಸಿ ಇಡೀ ಪಟ್ಟಿಯನ್ನು ಪುನರ್‌ ರಚಿಸಬೇಕು. ಪುನರ್‌ರಚನೆ ವೇಳೆ ಆಯೋಗದ ಸಲಹೆಯನ್ನು ಸರ್ಕಾರ ಪಡೆಯಬೇಕು. ಈಗಾಗಲೇ 20 ವರ್ಷ ಕಳೆದಿರುವುದರಿಂದ ಮೀಸಲಾತಿ ಪಟ್ಟಿಯನ್ನು ಮರು ವಿಂಗಡಣೆ ಮಾಡಲು ಆಯೋಗ ನಿರ್ಧರಿಸಿದೆ.

ವರದಿಯಲ್ಲಿ ಏನಿದೆ?: ‘ಸದ್ಯ ಹಿಂದು ಳಿದ ವರ್ಗಗಳ ಪಟ್ಟಿಯಲ್ಲಿರುವ ಅನೇಕ ಜಾತಿಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್‌) ವರ್ಗಾಯಿಸಿ, ಆ ವರ್ಗಕ್ಕೆ ನೀಡಿರುವ ಶೇ 10 ಮೀಸಲಾತಿ ನೀಡಲು ಅವಕಾಶವಿದೆ. ಹಿಂದುಳಿದ ವರ್ಗದ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮಾನದಂಡವನ್ನು ಅನುಸರಿಸಿ ಪರಿವರ್ತನೆ/ ವರ್ಗಾವಣೆ ಮಾಡಲು ಸರ್ಕಾರ ಪರಿಶೀಲಿಸಬೇಕು’.

‘ಪ್ರವರ್ಗ 3ಎ’ ಸಮುದಾಯವನ್ನು (ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳು) ‘ಪ್ರವರ್ಗ 2’ ಎಂದು ಅಂದರೆ, ‘ಅತೀ ಹಿಂದುಳಿದವರು’ ಎಂದು ಪರಿ ಗಣಿಸಿ 2ಸಿ ಎಂಬ ಹೊಸ ಪ್ರವರ್ಗ ಸೃಜಿಸ ಬೇಕು. ಅದೇ ರೀತಿ ‘ಪ್ರವರ್ಗ 3ಬಿ’ ಸಮುದಾಯವನ್ನು (ಲಿಂಗಾಯತ ವೀರಶೈವ, ಪಂಚಮ ಸಾಲಿ ಹಾಗೂ ಇತರ ಸಮುದಾಯಗಳು) ‘ಪ್ರವರ್ಗ 2’ ಅಂದರೆ, ‘ಅತೀ ಹಿಂದುಳಿದವರು’ ಎಂದು ಪರಿಗಣಿಸಿ 2ಡಿ ಎಂಬ ಹೊಸ ಪ್ರವರ್ಗ ಸೃಜಿಸಬೇಕು. ಈಗ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಕೆಲವು ಹಿಂದುಳಿದ ವರ್ಗಗಳನ್ನು ‘ಪ್ರವರ್ಗ 3ಎ’ ಮತ್ತು ‘ಪ್ರವರ್ಗ 3ಬಿ‘ಯಿಂದ ಇಡಬ್ಲ್ಯುಎಸ್‌ಗೆ ವರ್ಗಾಯಿಸಿದಾಗ, ಅಷ್ಟು ಪ್ರಮಾಣದ ಮೀಸಲಾತಿಯು ಹಿಂದುಳಿದ ವರ್ಗಗಳಿಗೆ ಹಂಚಲು ಲಭ್ಯವಾಗುತ್ತದೆ. ಈ ರೀತಿಯಿಂದ ‘ಪ್ರವರ್ಗ 3ಎ’ಯಲ್ಲಿ ಲಭ್ಯವಾಗುವ ಮೀಸಲಾತಿ ಪ್ರಮಾಣವು ಹೊಸತಾಗಿ ಸೃಜಿಸುವ ‘ಪ್ರವರ್ಗ 2ಸಿ’ಗೆ ಹಾಗೂ ‘ಪ್ರವರ್ಗ 3ಬಿ‘ಯಲ್ಲಿ ಲಭ್ಯವಾಗುವ ಮೀಸಲಾತಿಯು 2ಡಿಗೆ ಲಭ್ಯವಾಗಲಿದೆ. ಇದರಿಂದ ಈ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳವಾಗು ವುದಲ್ಲದೆ, ಸಾಮಾಜಿಕ ನ್ಯಾಯ ಒದಗಿಸಬಹುದು’.

‘ಪಂಚಮಸಾಲಿ ಹಾಗೂ ವೀರಶೈವ ಲಿಂಗಾಯತ ಸಮಾಜ ಮತ್ತು ಒಕ್ಕಲಿಗ ಸಮಾಜಗಳಿಂದ ಸ್ವೀಕೃತವಾಗಿರುವ ಮನವಿಗಳನ್ನು ಪರಿಶೀಲಿಸಲು ಅನೇಕ ಜಿಲ್ಲೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ವರ ಜೊತೆ ಚರ್ಚಿಸಿ ಮಾಹಿತಿ
ಸಂಗ್ರಹಿಸಲಾಗಿದೆ. ಆಗ ಮೇಲ್ನೋಟಕ್ಕೆ ಪಂಚಮಸಾಲಿ, ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಉದ್ಯೋಗದಲ್ಲಿ ಸಾಕಷ್ಟು ಪ್ರಾತಿನಿಧ್ಯ ಇಲ್ಲದಿರುವುದು ಗಮನಕ್ಕೆ ಬಂದಿದೆ. 2ಸಿ ಮತ್ತು 2ಡಿ ಮೀಸಲಾತಿ ಹೆಚ್ಚಿಸುವ ಸಂದರ್ಭದಲ್ಲಿ, ಈಗಾಗಲೇ ಅತ್ಯಂತ ಹಿಂದುಳಿದ ಪ್ರವರ್ಗ–1 ಮತ್ತು ಪ್ರವರ್ಗ 2ಎಗೆ ಧಕ್ಕೆ ಹಾಗೂ ಬದಲಾವಣೆ ಆಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.

ಪ್ರವರ್ಗ 2ಸಿ ಮತ್ತು 2ಡಿ ಗೆ ಮೀಸಲಾತಿಯನ್ನು ಹೆಚ್ಚಿಸುವುದನ್ನು (ಈಗಿರುವ 3ಎ– ಶೇ 4 ಹಾಗೂ 3ಬಿ– ಶೇ5), ಪಟ್ಟಾಲಿ ಮಕ್ಕಳ ಕಚ್ಚಿ ವರ್ಸಸ್‌ ಎ. ಮೈಲಾರುಂಮ್‌ ಪೆರುಮಾಲ್‌ ಮತ್ತು ಇತರರ ಪ್ರಕರಣದಲ್ಲಿ (ಎಸ್‌ಎಲ್‌ಪಿ 19574/2021) ಸುಪ್ರೀಂ ಕೋರ್ಟ್ 2022ರ ಮಾರ್ಚ್‌ 31ರಂದು ನೀಡಿದ ತೀರ್ಪಿನ ತತ್ವಗಳು, ಜನಸಂಖ್ಯೆ ಹಾಗೂ ಸಾಕಷ್ಟು ಪ್ರಾತಿನಿಧ್ಯ, ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಸಮಕಾಲೀನ, ಪ್ರಾಯೋಗಿಕ ಅಂಕಿ ಅಂಶಗಳ ಮಾನದಂಡ ಅನುಸಾರ ಪರಿಗಣಿಸಬೇಕು’ ಎಂದು ವರದಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.

ಮೀಸಲಾತಿ ಮರುಹಂಚಿಕೆ– ಲೆಕ್ಕಾಚಾರ

‘ರಾಜ್ಯ ಸರ್ಕಾರ ಲಭ್ಯವಿರುವ ಮಾಹಿತಿಗೆ ಅನುಗುಣವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯುಎಸ್‌) ಪಟ್ಟಿ ಪ್ರಕಟಿಸಬೇಕು. ಅಂತಿಮ ಪಟ್ಟಿ ತಯಾರಿಸುವಾಗ ಕೆಲವು ಹಿಂದುಳಿದ ವರ್ಗಗಳ ಜಾತಿಗಳನ್ನು ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಿಂದ ಇಡಬ್ಲ್ಯುಎಸ್‌ಗೆ ವರ್ಗಾಯಿಸಿ, ಅದರ ಅಡಿಯಲ್ಲಿ ಅಂತಿಮ ಕೋಟಾ ನಿರ್ಧರಿಸಬೇಕು. ಈ ಮೀಸಲಾತಿಯನ್ನು ತರ್ಕಬದ್ಧಗೊಳಿ ಸುವ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಶೇಕಡಾವಾರು ಪ್ರಮಾಣದ ಮೀಸಲಾತಿಯು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಲಭ್ಯವಾಗಲಿದೆ’ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT