ಶುಕ್ರವಾರ, ಜುಲೈ 1, 2022
21 °C
ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ; ಕೈ ಬೀಸಿ ಕರೆಯುತ್ತಿದೆ...

ಹೊಗೆನಕಲ್ ಜಲಪಾತ ವೀಕ್ಷಣೆಗಿಲ್ಲ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಹೊಗೆನಕಲ್ ಜಲಪಾತ ಭೋರ್ಗರೆಯುತ್ತಿದೆ.

ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳ ಹೊರ ಹರಿವು ಹೆಚ್ಚಾಗಿರುವುದರಿಂದ ಒಂದು ವಾರದಿಂದೀಚೆಗೆ ಹೊಗೆನಕಲ್ ಜಲಪಾತಕ್ಕೆ ಜೀವಕಳೆ ಬಂದಿದೆ.  ಬಂಡೆಗಳ, ಕೊರಕಲುಗಳ ಮೂಲಕ ಹಲವು ಕವಲುಗಳಾಗಿ ಪ್ರಪಾತಕ್ಕೆ ಜಿಗಿಯುತ್ತಿರುವ ನೀರು ದೂರದಿಂದ ಹಾಲ್ನೊರೆಯಂತೆ ಭಾಸವಾಗುತ್ತಿದೆ. ಎತ್ತ ನೋಡಿದರೂ ಬೆಟ್ಟಗಳ ರಾಶಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. 

ಆದರೆ, ಪ್ರತಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹೊಗೆನಕಲ್ ಜಲಪಾತ ಈ ಬಾರಿ ಪ್ರವಾಸಿಗರಿಲ್ಲದೇ ಸಪ್ಪೆಯಾಗಿದೆ. ಸದಾ ತೆರೆದಿರುತ್ತಿದ್ದ ಅಂಗಡಿಗಳು ಈಗ ಬಂದ್ ಆಗಿವೆ. ತೆಪ್ಪಗಳೆಲ್ಲಾ ನದಿಯ ದಡದಲ್ಲೇ ಬಿದ್ದಿವೆ. ನದಿಯಲ್ಲಿ ತೆಪ್ಪ ನಡೆಸುವುದನ್ನೇ ಜೀವನ ಮಾಡಿಕೊಂಡಿದ್ದ ಜನರು ಈಗ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದಾರೆ.

ಹೆಚ್ಚಿದ ನೀರಿನ ಪ್ರಮಾಣ: ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ತೆಪ್ಪ ವಿಹಾರಕ್ಕೆ ತೆರಳುವ ಸ್ಥಳದಲ್ಲಿ ಮೆಟ್ಟಿಲುಗಳು ಮುಳುಗಡೆಯಾಗಿದೆ. ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ತೀರಕ್ಕೆ ತೆರಳದಂತೆ ಅರಣ್ಯ ಇಲಾಖೆ ಸ್ಥಳೀಯರಿಗೆ ಸೂಚನೆ ನೀಡಿದೆ.

‘ರಾಜ್ಯದ ಗಡಿಭಾಗದಲ್ಲಿರುವ ಹೊಗೆನಕಲ್ ಜಲಪಾತಕ್ಕೆ ತಮಿಳುನಾಡಿನಿಂದಲೂ ಪ್ರವಾಸಿಗರು ಬರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿದೆ. ಆದ್ದರಿಂದ, ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಡಳಿತವೇ ಹೊಗೆನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅನುಮತಿ ನೀಡಲಿದೆ’ ಎಂದು ‘ಪ್ರಜಾವಾಣಿ’ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಮನೋಜ್ ಕುಮಾರ್  ತಿಳಿಸಿದರು.

‘ಜಿಲ್ಲೆಯ ಪ್ರವಾಸಿ ತಾಣಗಳನ್ನು ಮುಕ್ತಗೊಳಿಸಲು ಕೆಲವು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಪ್ರವಾಸಿಗರಿಗೆ ಅನುಮತಿ ಕಲ್ಪಿಸಿಲ್ಲ. ಶೀಘ್ರದಲ್ಲೇ ಕೆಲವು ಅಗತ್ಯ ನಿಯಮಗಳನ್ನು ರೂಪಿಸಿ ಪ್ರವಾಸಿ ತಾಣಗಳ ವೀಕ್ಷಣೆಗೆ ಅನುಮತಿ ನೀಡಲಾಗುವುದು’ ಎಂದು ಹನೂರು ಪ್ರಭಾರ ತಹಶೀಲ್ದಾರ್ ಕೆ.ಕುನಾಲ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು