ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಜಮೀನಿನಲ್ಲಿರುವ ಜನವಸತಿಗಳೂ ಕಂದಾಯ ಗ್ರಾಮ: ಕಂದಾಯ ಇಲಾಖೆ ಸುತ್ತೋಲೆ

Last Updated 8 ನವೆಂಬರ್ 2022, 16:46 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಜಮೀನುಗಳಲ್ಲಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಅಥವಾ ಕಂದಾಯ ಗ್ರಾಮಗಳ ಭಾಗವಾಗಿ ಪರಿವರ್ತಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಪ್ರಕ್ರಿಯೆ ಆರಂಭಿಸುವಂತೆ ಕಂದಾಯ ಇಲಾಖೆ ಸೂಚಿಸಿದೆ.

ಪ್ರಕ್ರಿಯೆ ಯಾವ ರೀತಿ ಇರಬೇಕು ಎಂಬ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ಜಮೀನುಗಳಲ್ಲಿರುವ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಕಾಲೋನಿ ಮತ್ತಿತರ ಜನವಸತಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅದರ ಜತೆಯಲ್ಲೇ ಖಾಸಗಿ ಜಮೀನುಗಳಲ್ಲಿರುವ ದಾಖಲೆರಹಿತ ಜನವಸತಿಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

‘ಈಗಾಗಲೇ ಅಸ್ತಿತ್ವದಲ್ಲಿರುವ ಕಂದಾಯ ಗ್ರಾಮಗಳಿಂದ ಒಂದು ಕಿ.ಮೀ. ದೂರದಲ್ಲಿ ಒಂದೇ ಸ್ಥಳದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ಮನೆಗಳು ಗುಂಪಾಗಿದ್ದು, ಕನಿಷ್ಠ 250 ಜನಸಂಖ್ಯೆ ಹೊಂದಿರುವ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಅವಕಾಶವಿದೆ. ರಾಜ್ಯದಲ್ಲಿ ಖಾಸಗಿ ಜಮೀನಿನಲ್ಲಿ ಇಂತಹ 1,000ಕ್ಕೂ ಹೆಚ್ಚು ಜನವಸತಿಗಳಿವೆ. ಜನವಸತಿಗಳಿರುವ ಜಮೀನಿನ ಮಾಲೀಕತ್ವ ಹೊಂದಿರುವ ವ್ಯಕ್ತಿಗಳಿಗೆ ಭೂ ಸುಧಾರಣಾ ಕಾಯ್ದೆಯ ಅಡಿಯಲ್ಲಿ ಪರಿಹಾರ ನೀಡಲಾಗುವುದು’ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ನಿಗದಿತ ನಮೂನೆಯಲ್ಲಿ ಅರ್ಜಿ ಸ್ವೀಕರಿಸಿದ ಬಳಿಕ ಸಾರ್ವಜನಿಕ ವಿಚಾರಣೆ ನಡೆಸಿ ಅರ್ಜಿದಾರರಿಗೆ ಜಮೀನು ಮಂಜೂರು ಮಾಡಬೇಕು. ಪ್ರತಿ ಫಲಾನುಭವಿಗೆ 4,000 ಚದರ ಮೀಟರ್‌ ಮೀರದಂತೆ ಅಥವಾ ಅವರು ನೈಜವಾಗಿ ಸ್ವಾಧೀನದಲ್ಲಿರುವ ಜಮೀನನ್ನು ಮಂಜೂರು ಮಾಡಲು ಅವಕಾಶವಿದೆ. ಆ ಜಮೀನನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಂಡ ತಕ್ಷಣದಿಂದಲೇ ತಹಶೀಲ್ದಾರ್‌ಗಳು ಹಕ್ಕುಪತ್ರ ವಿತರಿಸಬಹುದು. ಕಂದಾಯ ಗ್ರಾಮ ಘೋಷಣೆಯವರೆಗೂ ಕಾಯುವ ಅಗತ್ಯವಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ.

ಪ್ರಕ್ರಿಯೆ ಹೇಗೆ?

* ಜಿಲ್ಲಾಧಿಕಾರಿಯು ಕರ್ನಾಟಕ ಭೂ ಸುಧಾರಣಾ ಕಾಯ್ದೆ–1961ರ ಸೆಕ್ಷನ್‌ 38–ಎ ಅಡಿಯಲ್ಲಿ ನಮೂನೆ–2–ಇ ಪ್ರಕಾರ ಅಧಿಸೂಚನೆ ಹೊರಡಿಸಬೇಕು.

* ಆಕ್ಷೇಪಣೆ, ಸಲಹೆಗಳನ್ನು ವಿಲೇವಾರಿ ಮಾಡಿದ ಬಳಿಕ ಅಧಿಸೂಚನೆಯಲ್ಲಿ ಘೋಷಿಸಲಾದ ವಿಸ್ತೀರ್ಣದ ಜಮೀನಿನ ಪಹಣಿಯನ್ನು ಸರ್ಕಾರದ ಹೆಸರಿಗೆ ಇಂಡೀಕರಣ ಮಾಡಬೇಕು.

* ನಂತರ ಉಪ ವಿಭಾಗಾಧಿಕಾರಿಗಳು ಅಥವಾ ತಹಶೀಲ್ದಾರ್‌ಗಳು ಅಲ್ಲಿನ ನಿವಾಸಿಗಳನ್ನು ಭೂಮಾಲೀಕರು ಎಂದು ಘೋಷಿಸಲು ಪ್ರಕ್ರಿಯೆ ಆರಂಭಿಸಬೇಕು.

* ಅರ್ಜಿದಾರರು ತಾವು ಸ್ವಾಧೀನದಲ್ಲಿರುವ ಜಮೀನಿನ ಜತೆಗೆ ಆ ಜನವಸತಿಯಲ್ಲಿ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಮೀನಿಗೂ ಭೂ ಸುಧಾರಣಾ ಕಾಯ್ದೆಯಡಿ ನಿಗದಿಪಡಿಸುವ ಮೊತ್ತ ಪಾವತಿಸಬೇಕು.

* ಆ ಬಳಿಕ ಅರ್ಜಿದಾರರಿಗೆ ಮಂಜೂರಾದ ವಿಸ್ತೀರ್ಣದ ಜಮೀನನ್ನು ಅವರ ಹೆಸರಿಗೆ ನೋಂದಣಿ ಮಾಡಿಸಿ, ಖಾತೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT