ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: 6 ತಿಂಗಳಲ್ಲಿ 80ಕ್ಕೂ ಹೆಚ್ಚು ಸಾವು

ಸೆಪ್ಟೆಂಬರ್‌ನಿಂದ ಈವರೆಗೆ 335ಕ್ಕೂ ಅಧಿಕ ಅಪಘಾತ
Last Updated 9 ಮಾರ್ಚ್ 2023, 5:40 IST
ಅಕ್ಷರ ಗಾತ್ರ

ರಾಮನಗರ/ಮೈಸೂರು/ಮಂಡ್ಯ: ಬೆಂಗಳೂರು–ಮೈಸೂರು ದಶಪಥದಲ್ಲಿ ವಾಹನ ಸಂಚಾರ ಆರಂಭವಾಗಿ ಆರು ತಿಂಗಳೊಳಗೆ ಅಪಘಾತ ಸಂಖ್ಯೆ ಹೆಚ್ಚಳವಾಗಿದ್ದು 84ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದೇ ಸೆಪ್ಟೆಂಬರ್‌ನಿಂದ ಹೊಸ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಗಿದೆ. ಅಲ್ಲಿಂದ ಈವರೆಗೆ 335ಕ್ಕೂ ಹೆಚ್ಚು ಅಪಘಾತ ಪ್ರಕರಣ ವರದಿಯಾಗಿವೆ. ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದ ಡಿಸೆಂಬರ್‌, ಜನವರಿ ತಿಂಗಳಲ್ಲೇ ಹೆಚ್ಚು ಅಪಘಾತಗಳು ವರದಿಯಾಗಿವೆ.

ಕುಂಬಳಗೋಡಿನಿಂದ ನಿಡಘಟ್ಟವರೆಗಿನ ರಾಮನಗರ ಜಿಲ್ಲೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 110ಕ್ಕೂ ಹೆಚ್ಚು ಅಪಘಾತ ಸಂಭವಿಸಿವೆ. 41ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಒಟ್ಟು 51 ಕಿ.ಮೀ.ನಷ್ಟು ದಶಪಥ ಹಾದು ಹೋಗುತ್ತದೆ. ಬಿಡದಿ, ರಾಮನಗರ–ಚನ್ನಪಟ್ಟಣ ಬೈಪಾಸ್‌ಗಳಲ್ಲಿ ವಾಹನಗಳ ವೇಗ ಹೆಚ್ಚಿದ್ದು, ಗಂಟೆಗೆ 120–140 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿವೆ. ಇದರೊಟ್ಟಿಗೆ ಸರ್ವೀಸ್‌ ರಸ್ತೆಗಳಲ್ಲಿಯೂ ವಾಹನ ಓಡಾಟ ಹೆಚ್ಚಿದೆ.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 225 ಅಪಘಾತ ಸಂಭವಿಸಿದ್ದು, 43 ಮಂದಿ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಯ ಲಕ್ಷ್ಮೀಪುರ ಗೇಟ್‌ನಿಂದ ಮಣಿಪಾಲ್‌ ಆಸ್ಪತ್ರೆವರೆಗಿನ 5 ಕಿ.ಮೀ. ಹೆದ್ದಾರಿಯಲ್ಲಿ 6 ತಿಂಗಳಿಂದ 30 ಅಪಘಾತಗಳು ವರದಿ
ಯಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಡಿಸೆಂಬರ್‌ ತಿಂಗಳಲ್ಲಿ ಸಂಭವಿಸಿದ 40 ಅಪಘಾತಗಳಲ್ಲಿ 9 ಮಂದಿ ಮೃತಪಟ್ಟಿ
ದ್ದರೆ, ಜನವರಿಯಲ್ಲಿ 55 ಅಪಘಾತಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಎರಡು ತಿಂಗಳಿಂದ ಈಚೆಗೆ 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೇಗ ತಲುಪುವ ಧಾವಂತ
ಬೆಂಗಳೂರು– ಮೈಸೂರು ದಶಪಥದಲ್ಲಿ ವಾಹನಗಳ ವೇಗ ಮತ್ತು ಬೇಗ ತಲುಪುವ ವಾಹನ ಸವಾರರ ಧಾವಂತ ಹೆಚ್ಚಿದಷ್ಟು ಅಪಘಾತಗಳ ಸಂಖ್ಯೆಯೂ ಏರತೊಡಗಿದೆ.

ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟದವರೆಗೂ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ನಿಡಘಟ್ಟದಿಂದ ಮೈಸೂರುವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ವಾಹನ ಓಡಾಟಕ್ಕೆ ಮಾತ್ರ ಹೆದ್ದಾರಿ ಸಿದ್ಧಗೊಂಡಿದೆ. ಆದರೆ, ವಾಹನ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಇನ್ನೂ ಸಿದ್ಧಗೊಂಡಿಲ್ಲ.

ಕಾಮಗಾರಿ ಪೂರ್ಣಗೊಳ್ಳದಿದ್ದರೂ 80 ನಿಮಿಷಗಳಲ್ಲಿ ಬೆಂಗಳೂರು–ಮೈಸೂರು ತಲುಪಬೇಕು ಎಂಬ ಧಾವಂತ ಕೂಡ ಅಪಘಾತಕ್ಕೆ ಕಾರಣವಾಗಿದೆ.

ಸೂಚನಾ ಫಲಕ ಇಲ್ಲ: ಹೆದ್ದಾರಿಯಲ್ಲಿ ಎಲ್ಲೂ ಸೂಚನಾ ಫಲಕಗಳಿಲ್ಲ. ಮೇಗ ಮಿತಿ ಸೂಚಿಸುವ ವ್ಯವಸ್ಥೆ ಇಲ್ಲ. ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ.

ಮಂಡ್ಯ ಮತ್ತು ಮೈಸೂರು ಜಿಲ್ಲಾ ವ್ಯಾ‌ಪ್ತಿಯಲ್ಲಿ ಹೆಚ್ಚು ಸೇತುವೆ, ಮೇಲ್ಸೇತುವೆ, ಕೆಳಸೇತುವೆಗಳಿದ್ದು ಹೆಚ್ಚು ತಿರುವುಗಳಿಂದ ಕೂಡಿದೆ. ಜೊತೆಗೆ ಸೇತುವೆ ಮಾರ್ಗದಿಂದ ರಸ್ತೆಗೆ ಸ್ಪರ್ಶಿಸುವ ಸ್ಥಳದಲ್ಲಿ ವಾಹನಗಳು ಜಾರುತ್ತವೆ. ಇದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ವಾಹನ ಚಾಲಕರು.

ವೇಗ ಹೆಚ್ಚಿದಷ್ಟು ಪ್ರಾಣಕ್ಕೆ ಸಂಚಕಾರ
ರಾಮನಗರ:
ದಶಪಥದಲ್ಲಿ ವಾಹನ ವೇಗಕ್ಕೆ ಮಿತಿ ಇಲ್ಲದಿರುವುದು ಅಪಘಾತಗಳ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಮಿತಿ ಮೀರಿದ ವೇಗದಿಂದ ವಾಹನಗಳ ನಡುವೆ ಅಪಘಾತ ಸಂಭವಿಸುತ್ತಿದ್ದು, ಇದರಿಂದಾಗಿ ಸವಾರರು ‍ಪ್ರಾಣ ಕಳೆದುಕೊಳ್ಳತೊಡಗಿದ್ದಾರೆ.

ಸದ್ಯ ಎಕ್ಸ್‌ಪ್ರೆಸ್‌ ವೇ ಹಾಗೂ ಬೈಪಾಸ್ ರಸ್ತೆ ನಡುವೆ ಏಳು ಅಡಿ ಎತ್ತರದ ಬೇಲಿ ಇದೆ. ಮಧ್ಯೆ ಆಂಬುಲೆನ್ಸ್, ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆ ವಾಹನಗಳ ಓಡಾಟಕ್ಕೂ ಅವಕಾಶ ನೀಡಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಪರದಾಡುವ ಸ್ಥಿತಿ ಇದೆ. ಬೈಪಾಸ್‌ ರಸ್ತೆಗಳಲ್ಲಿ ಸುರಕ್ಷತೆ ಕೊರತೆ ಇದ್ದು, ವೈದ್ಯಕೀಯ ಸೇವೆ ಸಹ ಲಭ್ಯವಿಲ್ಲ.

ಹೊಸ ಹೆದ್ದಾರಿಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಎಚ್ಚರಿಕಾ ಫಲಕ ಅಳವಡಿಸಿದರೆ ಅಪಘಾತ ಸಂಖ್ಯೆ ತಗ್ಗಬಹುದು ಎನ್ನುವುದು ಸಾರ್ವಜನಿಕರ ಸಲಹೆ.

*
ದಶಪಥ ಕಾಮಗಾರಿ ಪೂರ್ಣವಾಗಿಲ್ಲ. ಸರಿಯಾದ ಎಂಟ್ರಿ, ಎಕ್ಸಿಟ್ ಇಲ್ಲದೆ ಅಪಘಾತ ಸಂಭವಿಸುತ್ತಿವೆ. ಇದರ ನಡುವೆ ಟೋಲ್ ವಸೂಲಿಗೆ ಮುಂದಾಗಿದ್ದಾರೆ.
-ಡಿ.ಕೆ.ಸುರೇಶ್, ಸಂಸದ

*
ಯಮುನಾ ಎಕ್ಸ್‌ಪ್ರೆಸ್‌ ವೇ ನಲ್ಲಿ ಗಂಟೆಗೆ 120 ಕಿ.ಮೀ.ಗಿಂತ ವೇಗವಾಗಿ ಚಲಿಸುವ ವಾಹನಗಳು ಮುಂದಿನ ಟೋಲ್‌ನಲ್ಲಿ ಕಡ್ಡಾಯವಾಗಿ ದಂಡ ಪಾವತಿಸಬೇಕು. ಬೆಂಗಳೂರು– ಮೈಸೂರು ದಶಪಥದಲ್ಲೂಈ ವ್ಯವಸ್ಥೆ ಜಾರಿಗೊಳಿಸಬೇಕು -ಶರಣಯ್ಯ, ಪ್ರವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT