ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸುಮಾಗೆ ತಾಕೀತು ಮಾಡಲು ಶೋಭಾ ಯಾರು: ಕಾಂಗ್ರೆಸ್‌ ನಾಯಕಿಯರ ಆಕ್ರೋಶ

ಆರ್‌.ಆರ್.ನಗರ ಉಪಚುನಾವಣೆ
Last Updated 13 ಅಕ್ಟೋಬರ್ 2020, 1:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ಅವರು ತನ್ನ ಗಂಡ ಡಿ.ಕೆ. ರವಿ ಅವರ ಹೆಸರನ್ನು ಪ್ರಚಾರದ ವೇಳೆ ಬಳಸಬಾರದು ಎಂದು ತಾಕೀತು ಮಾಡಲು ಬಿಜೆಪಿ ಸಂಸದೆ ಶೋಭಾ ಯಾರು ಎಂದು ಮಾಜಿ ಸಚಿವೆ ಉಮಾಶ್ರೀ ಪ್ರಶ್ನಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಸುಮಾ ಅವರು ಡಿ.ಕೆ. ರವಿ ಅವರನ್ನು ಕಾನೂನುಬದ್ಧವಾಗಿಮತ್ತು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಗಂಡನ ಹೆಸರನ್ನು ಬಳಸಿಕೊಳ್ಳುವ ಸಂಪೂರ್ಣ ಅಧಿಕಾರ ಅವರಿಗೆ ಇದೆ. ರವಿ ಅವರ ತಂದೆ, ತಾಯಿಗೆ ಯಾರಿಂದಲಾದರೂ ಅನ್ಯಾಯವಾಗಿದ್ದರೆ ಶೋಭಾ ಅವರು ತಮ್ಮದೇ ಪಕ್ಷದ ಸರ್ಕಾರದ ಮೂಲಕ ನ್ಯಾಯ ಕೊಡಿಸುವ ಕೆಲಸ ಮಾಡಲಿ’ ಎಂದರು.

ಕುಸುಮಾ ಅವರು ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಿದ್ದಾರೆ. ಈಗ ಸಮಾಜ ಸೇವೆ ಮಾಡುವ ಮಹತ್ವಾಕಾಂಕ್ಷೆಯಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ. ಯುವತಿಗೆ ಧೈರ್ಯ ತುಂಬಿ, ಸ್ವಾಗತಿಸುವ ಕೆಲಸವನ್ನು ಶೋಭಾ ಮಾಡಬೇಕಿತ್ತು. ಆದರೆ, ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ತೇಜೋವಧೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ‘ರಾಜ್ಯದಲ್ಲಿ ಇರುವ ಶಾಸಕಿಯರ ಸಂಖ್ಯೆ ಹತ್ತು ಮಾತ್ರ. ಮಹಿಳೆಯರಿಗೆ ಶಾಸಕಿಯರಾಗುವ ಅರ್ಹತೆ ಇಲ್ಲವೆ? ಮಹಿಳೆಯರು ರಾಜಕೀಯ ಪ್ರವೇಶಿಸಲು ಪ್ರಯತ್ನಿಸಿದಾಗಲೆಲ್ಲ ತೇಜೋವಧೆ ಮಾಡಲಾಗುತ್ತದೆ. ಶೋಭಾ ಕರಂದ್ಲಾಜೆ ಅವರಂತಹ ಮಹಿಳೆಯರ ಮೂಲಕವೇ ಈ ಕೆಲಸ ಮಾಡಿಸುತ್ತಿರುವುದು ದುರ್ದೈವದ ಸಂಗತಿ’ ಎಂದರು.

ಶೋಭಾ ಅವರು ಸಂಸತ್ತಿನಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತು ಎಷ್ಟು ಬಾರಿ ಮಾತನಾಡಿದ್ದಾರೆ? ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯ ಮಹಿಳಾ ಕಾಂಗ್ರೆಸ್‌ ಸಮಿತಿಅಧ್ಯಕ್ಷೆ ಪುಷ್ಪಾ ಅಮರನಾಥ್‌ ಮಾತನಾಡಿ, ‘ಹೆಣ್ಣು ಮಕ್ಕಳು ಮದುವೆಯಾದ ನಂತರ ರಾಜಕೀಯ ಕ್ಷೇತ್ರ ಪ್ರವೇಶಿಸಬಾರದು ಎಂಬ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಸಮಾಜದ ಮೇಲೆ ಹೇರಲು ಬಿಜೆಪಿ ಯತ್ನಿಸುತ್ತಿದೆ. ಈ ಕಾರ್ಯಸೂಚಿಯ ಭಾಗವಾಗಿಯೇ ಕುಸುಮಾ ಅವರ ಮೇಲೆ ದಾಳಿ ಮಾಡಲಾಗುತ್ತಿದೆ. ಶೋಭಾ ಕರಂದ್ಲಾಜೆಯವರಂತಹ ಮಹಿಳೆಯರ ಮೂಲಕ ಕೀಳುಮಟ್ಟದ ಹೇಳಿಕೆಗಳನ್ನು ಕೊಡಿಸುವ ಪ್ರಯತ್ನವನ್ನು ಬಿಜೆಪಿ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT