ಸೋಮವಾರ, ಜೂನ್ 27, 2022
24 °C

ಸಾ.ರಾ.ಮಹೇಶ್ ವಿರುದ್ಧ ರಾಜಕಾಲುವೆ ಒತ್ತುವರಿ ಆರೋಪ: ತನಿಖಾ ತಂಡ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ದಟ್ಟಗಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಶಾಸಕ ಸಾ.ರಾ.ಮಹೇಶ್ ಅವರು ಕಲ್ಯಾಣಮಂಟಪ ನಿರ್ಮಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ನೇತೃತ್ವದಲ್ಲಿ ಗುರುವಾರ ತಂಡವನ್ನು ರಚಿಸಲಾಗಿದೆ.

ಭೂದಾಖಲೆಗಳ ಉಪನಿರ್ದೇಶಕರಾದ ಜಿ.ಸೀಮಂತಿನಿ, ಸಹಾಯಕ ನಿರ್ದೇಶಕ ಎಚ್.ಮಂಜುನಾಥ್ ಸೇರಿದಂತೆ 7 ಮಂದಿ ತಂಡದಲ್ಲಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ರಾಜಕಾಲುವೆ ಒತ್ತುವರಿ ಆಗಿದೆಯೇ ಇಲ್ಲವೇ ಎಂಬುದರ ಕುರಿತು ಜೂನ್ 13ರ ಒಳಗೆ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ ಆದೇಶಿಸಿದ್ದಾರೆ.

ರೋಹಿಣಿ ತನಿಖಾಧಿಕಾರಿಯಾದರೂ ಅಭ್ಯಂತರ ಇಲ್ಲ- ಸಾ.ರಾ.ಮಹೇಶ್: ಗುರುವಾರ ಬೆಳಿಗ್ಗೆ ತಮ್ಮ ಬೆಂಬಲಿಗರೊಂದಿಗೆ, ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ ಶಾಸಕ ಸಾ.ರಾ.ಮಹೇಶ್, ಕಲ್ಯಾಣಮಂಟಪ ನಿರ್ಮಾಣದ ವೇಳೆ ರಾಜಕಾಲುವೆ ಒತ್ತುವರಿಯಾಗಿರುವುದು ಸಾಬೀತಾದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುವುದಾಗಿ ಪುನರುಚ್ಚರಿಸಿದರು.

ಈ ಪ್ರಕರಣ ಕುರಿತು ತನಿಖಾಧಿಕಾರಿಯನ್ನಾಗಿ ರೋಹಿಣಿ ಸಿಂಧೂರಿ ಅವರನ್ನೇ ನೇಮಕ ಮಾಡಿದರೂ ತಮ್ಮ ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್, ಈ ಬಗ್ಗೆ ತನಿಖೆ ನಡೆಸಿ, ವರದಿ ನೀಡುವುದಾಗಿ ಭರವಸೆ ನೀಡುವ ಮೂಲಕ ಸಾ.ರಾ.ಮಹೇಶ್ ಅವರ ಮನವೊಲಿಸಿದರು.

ಇದನ್ನೂ ಓದಿ: 

ಸಮಗ್ರ ತನಿಖೆ ಆಗಬೇಕು: ಸಿಂಧೂರಿ ಒತ್ತಾಯ

ಶಾಸಕ ಸಾ.ರಾ.ಮಹೇಶ್ ಅವರ ಸಾ.ರಾ.ಚೌಲ್ಟ್ರಿ ಕುರಿತ ಕೇವಲ ಒಂದೇ ಒಂದು ಅಂಶವನ್ನಿಟ್ಟುಕೊಂಡು ತನಿಖೆ ನಡೆಸುವುದು ಸೂಕ್ತವಲ್ಲ. ಸಮಗ್ರ ತನಿಖೆ ನಡೆಸಬೇಕು ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಾದೇಶಿಕ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಗೋಮಾಳದ ಭೂಮಿ ಹೇಗೆ ಖಾಸಗಿ ಸ್ವತ್ತಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಲಿಂಗಾಂಬುದಿ ಕೆರೆ ಸಮೀಪ ಇರುವ ಭೂಮಿಯ ಕುರಿತೂ ತನಿಖೆ ಕೈಗೊಳ್ಳಬೇಕು ಎಂದು ಅವರು ಇದೇ ವೇಳೆ ಹೇಳಿದ್ದಾರೆ.

‘ಭೂಪರಿವರ್ತನೆಯಾಗಿರುವುದೇ ಸರಿಯಲ್ಲ. ಮಾಸ್ಟರ್‌ಪ್ಲಾನ್‌ಗೆ ವಿರುದ್ಧವಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ, ತನಿಖೆ ಸಾ.ರಾ.ಮಹೇಶ್ ಅವರು ಹೇಳಿದಂತೆ ಕೇವಲ ಒಂದು ಅಂಶಕ್ಕೆ ಮಾತ್ರವೇ ಸೀಮಿತಗೊಂಡಿದೆ’ ಎಂದಿದ್ದಾರೆ.

‘ತನಿಖಾಧಿಕಾರಿಯಾಗಿ ಸಿಂಧೂರಿ ನೇಮಿಸಲಿ’

ಮೈಸೂರು ನಗರ ಹಾಗೂ ಸುತ್ತಮುತ್ತ ಆಗಿರುವ ಭೂ ಹಗರಣಗಳನ್ನು ಬಯಲಿಗೆಳೆಯಲು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವಿಶೇಷ ತನಿಖಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲೆಯಲ್ಲಿ ಎಲ್ಲೆಲ್ಲಿ ಒತ್ತುವರಿ ಆಗಿದೆ ಎಂಬ ನಿಖರ ಮಾಹಿತಿ ಅವರಲ್ಲಿದೆ. ಆದ್ದರಿಂದ ಆರು ತಿಂಗಳ ಅವಧಿಗೆ ಅವರನ್ನೇ ವಿಶೇಷಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ’ಸಿಂಧೂರಿ ಅವರನ್ನೇ ನೇಮಿಸಲಿ. ಅದು ಸಂತೋಷದ ವಿಚಾರ. ವಿಶ್ವನಾಥ್ ಹಿರಿಯ ನಾಯಕ. ಅವರ ಸಲಹೆ ಸ್ವೀಕಾರವಾಗುವಂಥದ್ದು‘ ಎಂದರು.

* ಜಿಲ್ಲೆಯಲ್ಲಿನ ಭೂ ಮಾಫಿಯಾ ವಿಚಾರವಾಗಿ ಜಿಲ್ಲಾಧಿಕಾರಿ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತಾರೆ. ತನಿಖೆಗೆ ನಾವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ.

–ಎಸ್‌.ಟಿ.ಸೋಮಶೇಖರ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು