ಗುರುವಾರ , ಮಾರ್ಚ್ 23, 2023
29 °C
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆ

ಕನ್ನಡ ಸಿನಿಮಾ ಇತಿಹಾಸ ಮುನ್ನೆಲೆಗೆ ಬರಲಿ: ನಿರ್ದೇಶಕ ಗಿರೀಶ ಕಾಸರವಳ್ಳಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡ ಚಲನಚಿತ್ರಗಳ ಇತಿಹಾಸ ಮತ್ತು ಪರಂಪರೆಯನ್ನು ಮತ್ತೆ ಮತ್ತೆ ಮುನ್ನೆಲೆಗೆ ತರುವ ಕೆಲಸ ಆಗಬೇಕಿದೆ ಎಂದು ನಿರ್ದೇಶಕ ಗಿರೀಶ ಕಾಸರವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಅಡೂರು ಗೋಪಾಲಕೃಷ್ಣ ಅವರ ರಾಷ್ಟ್ರಪ್ರಶಸ್ತಿ ವಿಜೇತ ‘ಸ್ವಯಂವರಂ’ ಸಿನಿಮಾ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ‘ಸ್ವಯಂವರಂ–50’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕನ್ನಡದಲ್ಲಿ ಈ ರೀತಿಯ ದಾಖಲೆ ಬರೆದ, ಪ್ರಶಸ್ತಿ ಪಡೆದ ಹಲವು ಸಿನಿಮಾಗಳು 50 ವರ್ಷ, 75 ವರ್ಷ ಪೂರೈಸಿವೆ. ಆದರೆ ಈ ರೀತಿ ಕಾರ್ಯಕ್ರಮ ಇಲ್ಲಿ ನಡೆದಿಲ್ಲ. ಮೂರು ವರ್ಷಗಳ ಹಿಂದೆ ‘ಸಂಸ್ಕಾರ’ ಬಿಡುಗಡೆಯಾಗಿ 50 ವರ್ಷ ಪೂರೈಸಿತ್ತು. ಒಂದು ಜನಾಂಗದ ಕಣ್ಣು ತೆರೆಸಿದ ಸಿನಿಮಾ ಅದು. ಇಂತಹ ಸಿನಿಮಾಗಳನ್ನು ಮತ್ತೆ ಮತ್ತೆ ಮಂಥನ ಮಾಡದೆ, ರೌಡಿ ಸಿನಿಮಾಗಳ ಯಶಸ್ಸನ್ನು ಮಾತ್ರ ಬಿಂಬಿಸುವ ಮೂಲಕ ರಾಜ್ಯದ ಹೊರಗಡೆ ಕನ್ನಡ ಸಿನಿಮಾದ ಬಗ್ಗೆ ತಪ್ಪು ಅಭಿಪ್ರಾಯವನ್ನು ನಾವೇ ಸೃಷ್ಟಿಸಿದ್ದೇವೆ’ ಎಂದರು.

‘ಕನ್ನಡ ಸಿನಿಮಾದ ಇತಿಹಾಸವನ್ನು ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸೈದ್ಧಾಂತಿಕ ನೆಲೆಯಲ್ಲಿ ವ್ಯಾಖ್ಯಾನ ಮಾಡುವ ಕೆಲಸ ರಾಷ್ಟ್ರೀಯ ಮಟ್ಟದಲ್ಲಿ ಆಗಬೇಕು. ಕೋಲ್ಕತ್ತದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ತಮಿಳಿನವರೊಬ್ಬರು ತಮ್ಮ ಚಿತ್ರರಂಗದ ಪ್ರತಿ ಸಂಸ್ಕೃತಿ ಸೃಷ್ಟಿಯ ಮರುಕಥನಗಳನ್ನು ಎಂಜಿಆರ್‌, ಶಿವಾಜಿ ಗಣೇಶನ್, ಕಮಲ ಹಾಸನ್ ಹಾಗೂ ರಜನೀಕಾಂತ್ ಅವರ ಉದಾಹರಣೆಗಳಿಂದ ಚಪ್ಪಾಳೆ ಗಿಟ್ಟಿಸುವಂತೆ ಕಟ್ಟಿಕೊಟ್ಟರು. ಕನ್ನಡದ ಒಳ್ಳೆಯ ಸಿನಿಮಾಗಳನ್ನು ಕೂಡ ನಾವು ಸರಿಯಾಗಿ ಬಿಂಬಿಸುತ್ತಿಲ್ಲ. ‘ಕಾಂತಾರ’ ತನ್ನ ಶಕ್ತಿಯಿಂದ ಬಿಂಬಿತವಾಗಿದೆ. ಕಳೆದ ಐದು ವರ್ಷಗಳಲ್ಲಿ ಕನ್ನಡದ ಕೆಲವು ಸಿನಿಮಾಗಳು ಜಗತ್ತಿನಾದ್ಯಂತ ಮಿಂಚಿವೆ. ‘ಬಳೆ ಕೆಂಪ’, ‘ಪಿಂಕಿ ಎಲ್ಲಿ’, ‘ನಾನು ಕುಸುಮ’, ‘ಪೆದ್ರೊ’ ಹೀಗೆ ಪಟ್ಟಿ ಬೆಳೆಯುತ್ತದೆ. ನಮ್ಮ ಅಸ್ಮಿತೆ, ಕನ್ನಡ ಸಿನಿಮಾದ ಹೆಗ್ಗಳಿಕೆಯನ್ನು ತೋರಿಸುವ ಕೆಲಸ ಮಾಡಬೇಕು’ ಎಂದರು.

'ಸಿನಿಮಾ ಶೂನ್ಯದಲ್ಲಿ ಸೃಷ್ಟಿಯಾಗುವುದಿಲ್ಲ. ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಹಿನ್ನೆಲೆ ಆ ಸೃಷ್ಟಿಗೆ ಕಾರಣವಾಗಿರುತ್ತದೆ. ಅದರ ಪರಿವೇಷ ಇಟ್ಟುಕೊಳ್ಳದೇ ಸಿನಿಮಾವನ್ನು ವ್ಯಾಖ್ಯಾನಿಸಿದರೆ ಅದು ಸಿನಿಮಾದ ಒಂದು ಆಯಾಮದ ವಿಮರ್ಶೆಯಷ್ಟೆ. ಸಿನಿಮಾ ಪತ್ರಕರ್ತರು ಒಂದು ಸಿನಿಮಾವನ್ನು ಈ ಆಯಾಮಗಳಲ್ಲಿ ನೋಡಬೇಕು’ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತೆ ವಿಜಯಾ ಸಂಘದ ಲಾಂಛನ ಬಿಡುಗಡೆಗೊಳಿಸಿ, ಹಿಂದಿನ ಸಿನಿಮಾ ಪತ್ರಕರ್ತರ ಪರಿಷತ್ತಿನ ಕಾರ್ಯವೈಖರಿಯನ್ನು ನೆನಪಿಸಿಕೊಂಡರು. ಸಂಘದ ಅಧ್ಯಕ್ಷ ಬಿ.ಎನ್‌.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು